ಬೆಂಗಳೂರು, ಮೇ, 23,2022(www.justkannada.in): ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಅಂಶಗಳನ್ನು ಅಳವಡಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ, ಎಷ್ಟೇ ಸಮಸ್ಯೆ ಎದುರಾರೂ ರಾಷ್ಟ್ರೀಯವಾದಿ ಶಿಕ್ಷಣ ನೀಡುವ ಸರ್ಕಾರದ ನಿಲುವಿನಿಂದ ವಿಮುಖವಾಗುವುದಿಲ್ಲ. ಪ್ರಸಕ್ತ ವರ್ಷ ಒಂದು ಪಠ್ಯವಾಗಿ ನೈತಿಕ ಶಿಕ್ಷಣವನ್ನು ಜಾರಿಗೊಳಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಚಾಮರಾಜಪೇಟೆಯ ಉದಯ ಭಾನು ಪಬ್ಲಿಕ್ ಶಾಲೆಯ ಆಟದ ಮೈದಾನಲ್ಲಿ ಆಚಾರ್ಯ ನರರತ್ನ ಸುರಿಜಿ ಮಹಾರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡದಾದ ಒಂದೇ ಬಾರಿಗೆ 11 ಮಂದಿ ಬಾಲಕರು ಮತ್ತು ಬಾಲಕಿಯರಿಗೆ ಸನ್ಯಾಸ ಧೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಬಿ.ಸಿ.ನಾಗೇಶ್, ಕೇಂದ್ರ ಸರ್ಕಾರ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ತರುತ್ತಿದ್ದು, ರಾಷ್ಟ್ರೀಯವಾದಿ ಸಮಾಜ ನಿರ್ಮಿಸಲು ಪ್ರತಿಯೊಬ್ಬರಿಗೂ ದೇಶ ಪ್ರೇಮ ಮೂಡಿಸುವ ಶಿಕ್ಷಣದ ಅಗತ್ಯವಾಗಿದೆ. ನಾವು ಬ್ರಿಟಿಷ್ ಮಾದರಿಯ ಶಿಕ್ಷಣ ವ್ಯವಸ್ಥೆಯಿಂದ ಇನ್ನೂ ಮುಕ್ತವಾಗಿಲ್ಲ. ಹೀಗಾಗಿ ಒಂದು ಅಥವಾ ಎರಡನೇ ತರಗತಿಯಲ್ಲಿ ನೈತಿಕ ಶಿಕ್ಷಣದ ಪಾಠಗಳನ್ನು ಅಳವಡಿಸುತ್ತೇವೆ. ಹೀಗಾಗಿ ರಾಷ್ಟ್ರೀಯ ವಾದಿ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಶಿಕ್ಷಣ ವ್ಯವಸ್ಥೆಯನ್ನು ಬದಲಾವಣೆ ಮಾಡದಿದ್ದರೆ ಜನ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಪಾದನೆಯಾಗಿದ್ದು, ಇದೇ ಹಾದಿಯಲ್ಲಿ ರಾಜ್ಯ ಸರ್ಕಾರ ಮುನ್ನಡೆಯುತ್ತಿದೆ. ನಮಗೆ ದೇಶದಲ್ಲಿ ಔಪಚಾರಿಕ ಶಿಕ್ಷಣ ಬಹಳಷ್ಟು ಕಡೆಗಳಲ್ಲಿ ಸಿಗುತ್ತದೆ. ತಾಯಿ, ನಂತರ ಗುರುಗಳಿಂದಲೂ ಶಿಕ್ಷಣ ದೊರೆಯುತ್ತಿದೆ. ಆದರೆ ನೈತಿಕ ಶಿಕ್ಷಣ ಮತ್ತು ರಾಷ್ಟ್ರೀಯವಾದಿ ಶಿಕ್ಷಣ ದೊರೆಯುವುದಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಧಾರ್ಮಿಕ ಸಮುದಾಯ ಒಳಗೊಂಡಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಹೇಳಿದರು.
ದೇಶದಲ್ಲಿ ಹಲವಾರು ಸಮಸ್ಯೆಗಳಿದ್ದು, ಇವೆಲ್ಲವುಗಳಿಗೂ ಪರಿಹಾರಗಳಿವೆ. ಜೈನ ಧರ್ಮ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾವಲಂಬಿ ಭಾರತದ ಚಿಂತನೆಗಳನ್ನು ನೀಡಿದ್ದಾರೆ. ಇಂತಹ ಚಿಂತನೆಗಳನ್ನು ಸಾಕಾರಗೊಳಿಸಲು ಧಾರ್ಮಿಕ ವರ್ಗ ಕೈಜೋಡಿಸಬೇಕು ಎಂದರು.
ಹಿಂಸೆಯಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಅಹಿಂಸೆಯೇ ಎಲ್ಲದಕ್ಕೂ ಮದ್ದು ಎಂದು ಜೈನ ಧರ್ಮ ನಮಗೆ ಕಲಿಸಿಕೊಟ್ಟಿದೆ. ಇದೇ ಉದ್ದೇಶದಿಂದ ನಮ್ಮ ಪೂರ್ವಜರು ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ನೀಡಿದ್ದಾರೆ. ಇಡೀ ವಿಶ್ವ, ಇಡೀ ಬ್ರಹ್ಮಾಂಡ ನಮ್ಮ ಪರಿವಾರವಾಗಿದ್ದು, ನಾವು ಕೇವಲ ಪರಿವಾರದ ಸದಸ್ಯರು. ಇದೇ ಮಾರ್ಗದಲ್ಲಿ ನಡೆಯುವುದು ನಮ್ಮ ದ್ಯೇಯವಾಗಿದೆ. ಎಲ್ಲರೂ ಸುಖಿಯಾಗಿದ್ದರೆ, ಎಲ್ಲರೂ ನಿರೋಗಿಯಾಗುತ್ತಾರೆ. ನಾವು ಬದುಕಬೇಕು. ಮತ್ತೊಬ್ಬರಿಗೂ ಬದಕಲು ಬಿಡಬೇಕು. ನಮ್ಮ ಬದುಕು ಪ್ರೇಮ ಭಾವನೆಯಿಂದ ಕೂಡಿರಬೇಕು. ಇಂತಹ ಮನೋಭಾವನೆಗಳಿಂದ ತೊಂದರೆಗಳು ದೂರಾಗಲಿವೆ ಎಂದು ಹೇಳಿದರು.
ಸಂಸದ ಪಿ.ಸಿ. ಮೋಹನ್ ಮಾತನಾಡಿ, ಕಳೆದ 70 ವರ್ಷಗಳಲ್ಲಿ ಆಗದ ಬದಲಾವಣೆ ಕೇವಲ 8 ವರ್ಷಗಳಲ್ಲಿ ಆಗಿದೆ. ದೇಶದ ಗೌರವ ಎತ್ತಿ ಹಿಡಿಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಂಟು ವರ್ಷಗಳಲ್ಲಿ ಮಾಡಿದ್ದಾರೆ. ಇವರ ಸಾಧನೆಯಿಂದಾಗಿ ಇಂದು ಜಗತ್ತಿನ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದರು.
ಕಾಲ ಬದಲಾಗುತ್ತಿದೆ. ಸಣ್ಣ ಮಗು ಕೂಡ ಹತ್ತು ನಿಮಿಷ ಮೊಬೈಲ್ ಇಲ್ಲದೇ ಇರಲು ಸಾಧ್ಯವಾಗುತ್ತಿಲ್ಲ. ಸನ್ಯಾಸ ಸ್ವೀಕರಿಸಲು ಆಗಮಿಸಿರುವವರು ಶ್ರೀಮಂತ ಕುಟುಂಬದವರು. ಇವರು ನಾಳೆಯಿಂದ ವಾಹನಗಳಲ್ಲಿ ಓಡಾಡುವಂತಿಲ್ಲ. ಯಾರೋ ಕೊಟ್ಟಿರುವುದನ್ನು ತಿನ್ನಬೇಕಾಗುತ್ತದೆ. ಇದೊಂದು ಕಠೋರವಾದ ತಪಸ್ಸು ಎಂದರು.
ಉದಯ್ ಗರುಡಾಚಾರ್ಯ. ಆಚರಿಯಾ ನಾರಥನ್ಸುರಿಜಿ, ಆಚಾರ್ಯ ವರ್ಧಮಾನ್ ಸಾಗರ್ ಜೀ, ಮಿಥಾಲಾಲ್ ಜೈನ್ ಆಂಕೋರ್ ಅವರು ಪ್ರವಚನ ನೀಡಿದರು. ಸಮಾರಂಭದಲ್ಲಿ ಶಾಸಕರಾದ ಜಮೀರ್ ಅಹಮದ್ ರಾಜಸ್ಥಾನ್ ಜೈನ ಶ್ವೇತಾಂಬರ ಮೂರ್ತಿ ಪೂಜಕ್ ಸಂಘ ಟ್ರಸ್ಟ್ ನ ಮುಖಂಡರಾರದ ಇಂದರ್ ಚಂದ್ ನಹಾರ್, ಪ್ರಕಾಶ್ ಪಿರ್ಗಲ್, ಪ್ರವೀಣ್ ಚೌಹಾನ್ , ಕಿಶೋರ್ ಜೈನ್, ಇಂದರ್ ಚಂದ್ ನಹಾರ್ , ಹೀರಾಲಾಲ್ ಕೊಠಾರಿ , ಸುಶೀಲ್ ತಲೇಸಾರಾ, ಸಿದ್ದಾರ್ಥ್ ಬೋಹ್ರಾ, ತಾರಾಚಂದ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
Key words: adopt -moral education –curriculum-nationalist –education-Minister- B.C. Nagesh