ಬಹುಮುಖ ವ್ಯಕ್ತಿತ್ವದ ಪುನೀತ್ ಅಗಲಿಕೆ ದುರದೃಷ್ಟಕರ- ನಟ ಅಪ್ಪು ಅಗಲಿಕೆಗೆ ಸುತ್ತೂರು ಶ್ರೀಗಳ ಸಂತಾಪ.

 

ಮೈಸೂರು,ಅಕ್ಟೋಬರ್,29,2021(www.justkannada.in):  ಬಹುಮುಖ ವ್ಯಕ್ತಿತ್ವದ ಪುನೀತ್ ಅಗಲಿಕೆ ದುರದೃಷ್ಟಕರ. ಪುನೀತ್ ಸಾವಿನ ಸುದ್ದಿ ವಿಷಾದನೀಯ, ಆಶ್ಚರ್ಯ ಸಂಗತಿ ಎಂದು ಸುತ್ತೂರು ಶ್ರೀ ಡಾ.ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಸಂತಾಪ ಕಂಬನಿ ಮಿಡಿದಿದ್ದಾರೆ.

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿರುವ ಸುತ್ತೂರು ಶ್ರೀಗಳು, ಮೊನ್ನೆ ಅವರ ಸಹೋದರನ ಕಾರ್ಯಕ್ರಮದಲ್ಲಿ ಎಲ್ಲರೂ ಡ್ಯಾನ್ಸ್ ಮಾಡಿದ್ರು ಅಂತ ಕೇಳಿದ್ದೆ. ಆ ಸಂತೋಷದ ಕ್ಷಣ ಮನಸ್ಸಿನಿಂದ ಹೋಗುವ ಮುನ್ನ ಭೌತಿಕವಾಗಿ ಅಗಲಿರೋದು ಆಶ್ಚರ್ಯದ ಸಂಗತಿ. ಪುನೀತ್ ರಾಜ್‌ ಕುಮಾರ್ ಒಬ್ಬ ಪ್ರತಿಭಾನ್ವಿತ ಕಲಾವಿದ.

80ರ ದಶಕದಲ್ಲಿ ಮಠದಿಂದ ಡಾ.ರಾಜ್‌ ಗೆ ಸನ್ಮಾನ ಹಮ್ಮಿಕೊಂಡಿದ್ದವು. ಆಗ ಚಿಕ್ಕವರಿದ್ದ ಪುನೀತ್ ರಾಜ್ ಕುಮಾರ್ ಸೋಫಾ ಏರೋದು.. ಇಳಿಯೋದು.. ಮಾಡ್ತಿದ್ರು. ಪಾರ್ವತಮ್ಮನವರು  ಕಂಟ್ರೋಲ್ ಮಾಡೋಕೆ ಕಷ್ಟಪಡ್ತಿದ್ರು‌. ಹಿರಿಯ ಶ್ರೀಗಳು ಬಿಡಿ ಅವನು ತುಂಬಾ ಆಕ್ಟೀವ್ ಇದ್ದಾನೆ, ಆಟ ಆಡಲಿ ಅಂತ ಹೇಳಿದ್ರು. ಆ ಕ್ಷಣವನ್ನ ನಾವು ಮರೆಯಲು ಸಾಧ್ಯವಿಲ್ಲ ಎಂದು ಸುತ್ತೂರು ಶ್ರೀಗಳು ನೆನೆಸಿಕೊಂಡರು.

ದೊಡ್ಡ ಕಲಾವಿದರಾದರೂ ತಂದೆಯಂತೆ ನಯ, ವಿನಯ ಸದ್ಗುಣ ಬೆಳೆಸಿಕೊಂಡಿದ್ರು. ನಾನು ದುಬೈ ಕಾರ್ಯಕ್ರಮವೊಂದಕ್ಕೆ ಹೋಗಿ ಬಂದಿಳಿದಾಗ ಏರ್‌ಪೋರ್ಟ್‌ ನಲ್ಲಿ ಭಕ್ತರು ನಮಸ್ಕರಿದರು. ಆಗ ಭಕ್ತರ ಸಾಲಿನಲ್ಲಿ ಪುನೀತ್ ಕೂಡ ಇದ್ರು‌. ನಮ್ಮ ಮಠದ ಬಗ್ಗೆ ಅಪಾರ ಭಕ್ತಿ, ಗೌರವ ಇಟ್ಟುಕೊಂಡಿದ್ಧರು. ಒಳ್ಳೆ ವಾಗ್ಮಿ, ಅಮಿತಬಚ್ಚನ್‌ ರಂತೆ ಕನ್ನಡದಲ್ಲಿ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸುತ್ತಿದ್ದರು. ಚೆನ್ನಾಗಿ ಅಧ್ಯಯನ ಮಾಡ್ತಿದ್ರು, ವಿಷಯ ಗ್ರಹಿಸುತ್ತಿದ್ದರು. ಹೀಗೆ ಬಹುಮುಖ ವ್ಯಕ್ತಿತ್ವದ ಪುನೀತ್ ಅಗಲಿಕೆ ದುರಾದೃಷ್ಟ. ಡಾ.ರಾಜ್ ಕುಟುಂಬದ ಕುಡಿ ಇಲ್ಲದಂತಾಗಿದೆ ಎಂದು ಸುತ್ತೂರು ಶ್ರೀ ಡಾ.ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಂತಾಪ ಸೂಚಿಸಿದರು.

Key words: Unfortunate-death-actor- punith raj kumar-  suttur shri