ಬಿಜೆಪಿ ಸರ್ಕಾರದ ಕಾಯ್ದೆಗೂ ನಾವು ರೂಪಿಸಿದ್ಧ ಕಾಯ್ದೆಗೂ ಅಜಗಜಾಂತರ ವ್ಯತ್ಯಾಸ- ಸಿದ್ಧರಾಮಯ್ಯ ಸ್ಪಷ್ಟನೆ.

ಬೆಂಗಳೂರು,ಡಿಸೆಂಬರ್,23,2021(www.justkannada.in):  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ಮತಾಂತರ ನಿಷೇಧ ಕಾಯ್ದೆಯ ಕರಡನ್ನು ಸಚಿವ ಸಂಪುಟದ ಮುಂದೆ ತರುವಂತೆ ನಾನು ಸಹಿ ಹಾಕಿದ್ದೆ. ಆದರೆ ಬಿಜೆಪಿ ಸರ್ಕಾರದ ಕಾಯ್ದೆಗೂ, ನಾವಿದ್ದಾಗ ರೂಪಿಸಿದ್ದ ಕಾಯ್ದೆಗೂ ಅಜಗಜಾಂತರ ವ್ಯತ್ಯಾಸಗಳಿವೆ  ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದರು.

ಮತಾಂತರ ನಿಷೇಧ ಕಾಯ್ದೆ ಕುರಿತು ಸದನದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಿಷ್ಟು…

ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಎಂದರೆ ಸಮಾನರಲ್ಲಿ ಮೊದಲಿಗ ಎಂಬ ವ್ಯಾಖ್ಯಾನವಿದೆ. ಮುಖ್ಯಮಂತ್ರಿಯಾಗಿ ನಾನೊಬ್ಬನೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಬರಲ್ಲ, ಕರಡು ಸಂಪುಟ ಸಭೆಯಲ್ಲಿ ಚರ್ಚೆಯಾಗಲಿ ಎಂಬ ಕಾರಣಕ್ಕೆ ಸಹಿ ಮಾಡಿದ್ದೆ. ಸಹಿ ಮಾಡಿದ ಮಾತ್ರಕ್ಕೆ ಒಪ್ಪಿದ್ದೆ ಎಂದಲ್ಲ.

ಮತ್ತೊಂದು ಪ್ರಮುಖ ಅಂಶವೆಂದರೆ ನಮ್ಮ ಸರ್ಕಾರದ ಅವಧಿಯಲ್ಲಿ ಮತಾಂತರ ನಿಷೇಧ ಕಾಯ್ದೆಯ ಕರಡು ಸಂಪುಟದಲ್ಲಿ ಚರ್ಚೆಯೂ ಆಗಿಲ್ಲ, ಅನುಮೋದನೆಯೂ ಆಗಿಲ್ಲ. ಕೇವಲ ಸಂಪುಟದ ಚರ್ಚೆಗೆ ತನ್ನಿ ಎಂದು ಸಹಿ ಹಾಕಿದ ಕಡತಗಳೆಲ್ಲವೂ ಸರ್ಕಾರದ ನಿಲುವು ಹೇಗಾಗುತ್ತದೆ?

ನಾನು ಮತಾಂತರ ನಿಷೇಧ ಕಾಯಿದೆಯ ಕಡತವನ್ನು ಸಂಪುಟದ ಮುಂದೆ ತರುವಂತೆ ಸಹಿ ಹಾಕಿದ್ದು 2015 ರ ನವೆಂಬರ್ ತಿಂಗಳಿನಲ್ಲಿ. ಇದಾಗಿ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಅದನ್ನು ಸಂಪುಟದ ಮುಂದೆ ತರಲು ನಾವು ಪ್ರಯತ್ನ ಮಾಡಲಿಲ್ಲ. ಕಾರಣ ನಮ್ಮ ಸರ್ಕಾರಕ್ಕೆ ಇಂಥಾ ಮಸೂದೆಯ ಬಗ್ಗೆ ಆಸಕ್ತಿ ಇರಲಿಲ್ಲ. ಮತಾಂತರ ನಿಷೇಧ ಕುರಿತ ಈ ಹಿಂದಿನ ಕರಡು ಪ್ರತಿಗೂ, ಈಗಿನ ಮಸೂದೆಗೂ ಇರುವ ಪ್ರಮುಖ ವ್ಯತ್ಯಾಸಗಳೆಂದರೆ. ಮೊದಲನೆಯದು ಹಿಂದಿನ ಕರಡು ಪ್ರತಿಯ ನಿಯಮ 3ರಲ್ಲಿ  ವಿವಾಹ ಎಂಬ ಪದ ಬಳಕೆ ಇರಲಿಲ್ಲ. ಬಿಜೆಪಿಯವರು ತಮ್ಮ ಕಾಯ್ದೆಯಲ್ಲಿ ವಿವಾಹವನ್ನು ಹೊಸದಾಗಿ ಸೇರಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಪ್ರಕಾರ ಸಾಕ್ಷಾಧಾರಗಳ ಕೊರತೆ ಕಂಡುಬಂದರೆ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಈ ಹೊಸ ಕಾಯ್ದೆಯ ನಿಯಮ 12 ರ ಪ್ರಕಾರ ಸಾಕ್ಷಾಧಾರ ಕೊರತೆ ಇದ್ದರೂ ಅದು ದೂರುದಾರನಿಗೆ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಕಾಯ್ದೆಯು ಕಾನೂನಿನ ನಿಯಮಗಳಿಗೆ ವಿರುದ್ಧವಾಗಿದೆ.

ಸಂವಿಧಾನದ 21 ಮತ್ತು 25ನೇ ವಿಧಿಯನ್ವಯ ಒಬ್ಬ ವ್ಯಕ್ತಿ ತನಗಿಷ್ಟವಾದ (ಯಾವುದೇ ಧರ್ಮಕ್ಕೆ ಸೇರಿದವರಾದರೂ ಸರಿ) ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಲು ಸಂಪೂರ್ಣ ಸ್ವಾತಂತ್ರ್ಯ ನೀಡಿರುವಾಗ, ಅದನ್ನು ಬೇಡ ಎನ್ನಲು ಸರ್ಕಾರಕ್ಕೇನು ಹಕ್ಕಿದೆ? ಇದೇ ಕಾರಣಕ್ಕೆ ಗುಜರಾತ್ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಮತಾಂತರ ನಿಷೇಧ ಕಾಯ್ದೆಗೆ ತಡೆಯಾಜ್ಞೆ ನೀಡಿರುವ ಅಲ್ಲಿನ ಹೈಕೋರ್ಟ್, ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಗುಜರಾತ್, ಉತ್ತರ ಪ್ರದೇಶ ಸರ್ಕಾರಗಳ ಮತಾಂತರ ನಿಷೇಧ ಕಾಯ್ದೆಯಲ್ಲಿ ಬಳಕೆ ಮಾಡಿರುವ ಪದಗಳು, ವಾಕ್ಯಗಳೇ ಇಲ್ಲಿಯೂ ಯಥಾವತ್ತಾಗಿವೆ. ಈ ಎಲ್ಲಾ ಸರ್ಕಾರಗಳ ಕರಡು ತಯಾರಿಕೆಯ ಹಿಂದೆ ಯಾವುದೊ ಒಂದು ಕಾಣದ ಕೈ ಇದೆ ಎಂಬ ಅನುಮಾನ ನನಗಿದೆ. ಅದು ಯಾವುದು ಎಂದು ಸರ್ಕಾರವೇ ಬಹಿರಂಗಪಡಿಸಬೇಕು?

ಬಲವಂತವಾಗಿ, ಆಸೆ ಆಮಿಷ ಒಡ್ಡಿ ಅಥವಾ ಮೋಸದಿಂದ ಮತಾಂತರ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ನಮ್ಮ ಸಂವಿಧಾನದಲ್ಲೇ ಸ್ಪಷ್ಟವಾಗಿ ಇರುವುದರಿಂದ ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯ ಅಗತ್ಯವೇನಿದೆ? ಇದೇ ಕಾರಣಕ್ಕೆ ನಾವು ವಿರೋಧ ಮಾಡುತ್ತಿದ್ದೇವೆ.

ದೇಶದಲ್ಲಿ ಶತಮಾನಗಳ ಹಿಂದಿನಿಂದಲೂ ಮತಾಂತರ ನಡೆದುಕೊಂಡು ಬಂದಿದೆ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಪಂಪ, ರನ್ನರು ಜೈನ ಧರ್ಮಕ್ಕೆ ಮತಾಂತರ ಗೊಂಡರು. ಸಾಮ್ರಾಟ್ ಆಶೋಕ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಹೋಗಿಲ್ಲವೇ? ಇದಕ್ಕೆ ಕಾರಣವೇನು ಎಂಬುದು ಯಾರಿಗೂ ತಿಳಿಯದ ವಿಷಯವಲ್ಲ.

ಕಾಯಕಯೋಗಿ ಬಸವೇಶ್ವರರು ಬ್ರಾಹ್ಮಣರಾಗಿ ಹುಟ್ಟಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲವೇ? ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಲಕ್ಷಾಂತರ ಜನರ ಜೊತೆಗೆ ಬೌದ್ಧ ಧರ್ಮಕ್ಕೆ ಮತಾಂತರ ಆಗಿಲ್ಲವೇ?  ಇವರು ಯಾರು ಅಧಿಕಾರವೋ ಅಥವಾ ಇನ್ಯಾವುದೋ ಕಾರಣಕ್ಕೆ ಮತಾಂತರಗೊಂಡವರಲ್ಲ.

ರಾಜ್ಯದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಕ್ರಿಶ್ಚಿಯನ್ ಮತ್ತು ಮುಸ್ಲಿಂಮರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ.  2001 ಮತ್ತು 2011 ರ ಜನಗಣತಿಯನ್ನು ನೋಡಿದರೆ ಸತ್ಯ ಏನೆಂದು ಅರಿವಾಗುತ್ತದೆ. 2001 ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ 83.86% ಹಿಂದೂಗಳ ಪ್ರಮಾಣ 2011 ಕ್ಕೆ ಶೇ. 84 ಕ್ಕೆ ಏರಿಕೆಯಾಗಿದೆ.  ಮುಸ್ಲಿಮರ ಪ್ರಮಾಣ 12.23% ಇಂದ 12.92 ಆಗಿದೆ.  ಕ್ರೈಸ್ತರ ಪ್ರಮಾಣ 1.91% ಇಂದ 1.87% ಗೆ ಇಳಿಕೆಯಾಗಿದೆ. ಇದು ನಮ್ಮ ರಾಜ್ಯದ ವಾಸ್ತವ ಸ್ಥಿತಿ.

ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಸಂವಿಧಾನದ ಮೂಲ ನಿಯಮ. ಆದರೆ ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯಲ್ಲಿ ಮಹಿಳೆಯರು, ಅಪ್ರಾಪ್ತರು, ಬುದ್ಧಿಭ್ರಮಣೆಯಾದವರು, ಪರಿಶಿಷ್ಟ ಜಾತಿ ಮತ್ತು ವರ್ಗದವರನ್ನು ಕಾನೂನು ಬಾಹಿರವಾಗಿ ಮತಾಂತರ ಮಾಡಿದರೆ ಮಾತ್ರ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಈ ಅಸಮಾನತೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ.

ಹಿಂದೂ ಧರ್ಮದ ಜಾತಿಯತೆ, ಅಸ್ಪೃಶ್ಯತೆ, ಅಸಮಾನತೆಗಳನ್ನು ಸರಿಪಡಿಸಲು ಸತತವಾಗಿ ಪ್ರಯತ್ನ ಮಾಡಿದ ಬಾಬಾ ಸಾಹೇಬರು ಕೊನೆಗೆ ಅದು ಸಾಧ್ಯವಾಗದಿದ್ದಾಗ “ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ” ಎಂದು ಹೇಳಿ ಬೌದ್ಧ ಧರ್ಮಕ್ಕೆ ಮತಾಂತರ ಗೊಂಡರು. ಜೊತೆಗೆ ಲಕ್ಷಾಂತರ ಜನರಿಗೆ ಸ್ವ ಇಚ್ಛೆಯಿಂದ ಮತಾಂತರಗೊಳ್ಳಲು ಕರೆ ನೀಡಿದರು.

ಬಲವಂತದಿಂದ, ಆಸೆ ಆಮಿಷ ಒಡ್ಡಿ, ಹೆದರಿಸಿ ಬೆದರಿಸಿ, ಮೋಸದ ಮೂಲಕ ಮತಾಂತರ ಮಾಡುವುದನ್ನು ನಾನು ವಿರೋಧಿಸುತ್ತೇನೆ. ಇದರ ಜೊತೆಗೆ ಜಾತೀಯತೆ, ಅಸ್ಪೃಶ್ಯತೆ ಅನುಸರಿಸುತ್ತಿರುವವರಿಗೂ ಕಠಿಣ ಶಿಕ್ಷೆಯಾಗಬೇಕು ಎಂಬುದು ನನ್ನ ಒತ್ತಾಯ.

ಮತಾಂತರವನ್ನು ದೂಷಿಸುವ ಬದಲು, ಮತಾಂತರವಾಗಲು ನಮ್ಮಲ್ಲಿರುವ ದೋಷಗಳೇನು ಎಂಬುದನ್ನು ಗುರುತಿಸಿ ಸರಿಪಡಿಸುವ ಕೆಲಸವನ್ನು ಮಾಡಬೇಕು ಎಂದು ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಇದು ನಾವು ಮಾಡಲೇಬೇಕಾದ ಕೆಲಸ.

ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆ ಅಮಾನವೀಯ, ಸಂವಿಧಾನ ಬಾಹಿರ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು, ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದರು.

Key words: Conversion Prohibition Act-difference -between – BJP government -act –  Siddaramaiah -clarified.