ಹುಬ್ಬಳ್ಳಿ:ಜೂ-25: ‘ಮಣ್ಣಿನ ಮಕ್ಕಳ’ ರಾಜ್ಯಭಾರದಲ್ಲಿ ರೈತರಿಗೇ ಅನ್ಯಾಯವಾಗಿದೆ. ರೈತ, ರೈತ ಮಹಿಳೆಯನ್ನು ಮದುವೆಯಾದ ಶಿಕ್ಷಕರಿಗೇ ವರ್ಗಾವಣೆ ಭಾಗ್ಯವಿಲ್ಲದಂತಾಗಿದೆ!
ರಾಜ್ಯ ಸರ್ಕಾರ ಪ್ರಕಟಿಸಿರುವ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿಯಲ್ಲಿ ಇಂಥ ಹಲವು ಅಂಶಗಳು ಮಾರಕವಾಗಿ ಕಾಣುತ್ತಿವೆ. ಹಿಂದಿನ ಮಾರ್ಗಸೂಚಿ ಕಡ್ಡಾಯ ವರ್ಗಾವಣೆಗೆ ದಂಪತಿ ಪ್ರಕರಣಗಳನ್ನು ಪರಿಗಣಿಸಿರಲಿಲ್ಲ. ಆದರೆ ತಿದ್ದುಪಡಿ ನಂತರ ದಂಪತಿ ಪ್ರಕರಣಗಳಲ್ಲಿ ಸರ್ಕಾರಿ ಮತ್ತು ಸರ್ಕಾರಿ ಪ್ರಾಯೋಜಿತ ಸಂಘ-ಸಂಸ್ಥೆ, ಕೇಂದ್ರ ಸರ್ಕಾರದ ಸಂಸ್ಥೆಗಳು ಹೀಗೆ ಹಲವು ಇಲಾಖೆಗಳಲ್ಲಿ ಪತಿ, ಪತ್ನಿ ಕಾರ್ಯನಿರ್ವಹಿಸುತ್ತಿದ್ದರೆ, ಅಂತಹ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ದೊರೆಯಲಿದೆ ಎಂದು ಹೇಳಿದೆ. ಆದರೆ, ರೈತ, ವ್ಯಾಪಾರಿ, ಉದ್ಯಮಿ ಸೇರಿ ಇತರೆ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ದಂಪತಿಗಳಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ದೊರಕಿಲ್ಲ. ಖಾಸಗಿ ವಲಯದಲ್ಲಿ ಕೆಲಸ ಮಾಡುವವರು ಮನುಷ್ಯರಲ್ಲವೇ? ಎಲ್ಲರೂ ಸರ್ಕಾರಿ ನೌಕರಿಯನ್ನೇ ಆಶ್ರಯಿಸಬೇಕೇ? ಸರ್ಕಾರಿ ಕೆಲಸದಲ್ಲಿದ್ದವರು ಸರ್ಕಾರಿ ಕೆಲಸ ಇರುವವರನ್ನೇ ಮದುವೆ ಮಾಡಿಕೊಳ್ಳಲು ಕಾಯಬೇಕೇ? ಒಂದು ಸ್ಥಳದಲ್ಲಿರುವ ಖಾಸಗಿ ಕಂಪನಿ, ಅಂಗಡಿ, ಕ್ಲಿನಿಕ್, ವ್ಯವಹಾರಗಳನ್ನು ಸರ್ಕಾರ ವರ್ಗಾಯಿಸಿದ ಕಡೆ ಪ್ರಾರಂಭಿಸಲು ಸಾಧ್ಯವೇ? ಎಂಬ ಆಕ್ರೋಶದ ಪ್ರಶ್ನೆ ಕೇಳಿಬರುತ್ತಿದೆ.
ವರ್ಗಾವಣೆ ಪ್ರತ್ಯೇಕಿಸಿ
‘ಎ’ ವಲಯದವರಿಗೆ ಮಾತ್ರ ಕಡ್ಡಾಯ ವರ್ಗಾವಣೆಯಾಗಬಾರದು. ‘ಸಿ’ ಮತ್ತು ‘ಬಿ’ ವಲಯದಲ್ಲಿ ಹತ್ತು ವರ್ಷ ಪೂರೈಸಿದವರಿಗೂ ಕಡ್ಡಾಯ ವರ್ಗಾವಣೆಯಾಗಬೇಕು. ಈ ರೀತಿಯ ವರ್ಗಾವಣೆಯನ್ನು ಕೋರಿಕೆ ವರ್ಗಾವಣೆಯಿಂದ ಪ್ರತ್ಯೇಕಿಸಬೇಕು. ‘ಎ’ ಯಿಂದ ‘ಸಿ’, ‘ಸಿ’ ಯಿಂದ ‘ಬಿ’, ‘ಎ’ ವಲಯಕ್ಕೆ ಸ್ಥಳಾಂತರ ಪ್ರಕ್ರಿಯೆ ನಡೆಯಬೇಕು. ಆಗ ಕೊನೆಗೆ ಒಂದೇ ಜಿಲ್ಲೆಯಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುವಂತಾಗುತ್ತದೆ. ಈಗ ಎಷ್ಟೋ ಮಂದಿ ವರ್ಗಾವಣೆಗೆ ಕಾಯುತ್ತಿದ್ದಾರೆ. ಅವರಿಗೆ ವರ್ಗಾವಣೆಯಾಗಲಿ. ಆದರೆ ಕಡ್ಡಾಯ ವರ್ಗಾವಣೆಗೆ ಸೂಕ್ತ ನಿಯಮ ಜಾರಿಗೊಳ್ಳಬೇಕು. ಅದರಲ್ಲಿ ಸರ್ಕಾರಿ ಕೆಲಸದವರು, ಖಾಸಗಿಯವರು, ಕೆಲಸದಲ್ಲಿ ಇಲ್ಲದವರು ಎಂಬ ಭೇದಭಾವ ಬೇಡ ಎನ್ನುವುದು ಹಲವರ ಆಗ್ರಹವಾಗಿದೆ.
ನನ್ನ ಪತಿ ಸ್ವಂತ ಉದ್ಯೋಗ ಮಾಡಿಕೊಂಡಿದ್ದಾರೆ. ಮಕ್ಕಳನ್ನು ಈಗ ಇರುವಲ್ಲೇ ಶಾಲೆಗೆ ಸೇರಿಸಿ ತಿಂಗಳಾಗಿದೆ. ಈಗ ಬೇರೆ ಕಡೆಗೆ ವರ್ಗಾವಣೆ ಮಾಡಿದರೆ ಇಡೀ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿದ್ದರೆ ಮಾತ್ರ ವರ್ಗಾವಣೆಯಿಂದ ವಿನಾಯಿತಿ ನೀಡುವ ನಿಯಮ ಹೇಗೆ ಸರಿ?
| ಹೆಸರು ಹೇಳಲು ಇಚ್ಛಿಸದ ಪ್ರೌಢಶಾಲಾ ಶಿಕ್ಷಕಿ
ಕೃಪೆ:ವಿಜಯವಾಣಿ