ಹಿರೇಕೆರೂರು,ಫೆಬ್ರವರಿ,15,2021(www.justkannada.in); ತಂದೆಯವರಂತೆ ಪುತ್ರರಾದ ವಿಜಯೇಂದ್ರ ಅವರಿಗೂ ಸಾಕಷ್ಟು ಉಳಿಪೆಟ್ಟುಗಳು ಬೀಳಲಿದ್ದು, ಸುಂದರ ಮೂರ್ತಿಯಾಗಿ ರೂಪುಗೊಳ್ಳಲಿದ್ದೀರಿ. ಮುಂದೆ ಯಡಿಯೂರಪ್ಪ ಅವರಂತೆ ರಾಜಾಹುಲಿಯಾಗಿ ಹೊರಹೊಮ್ಮಲಿ, ಕರ್ನಾಟಕದಲ್ಲಿ ಸೇವೆ ಮಾಡಲಿ ಎಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾರೈಸಿದ್ಧೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಬಸರೀಹಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಹೆಲಿಪ್ಯಾಡ್ ಅನ್ನು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಉದ್ಘಾಟಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ ಅವರು, ಯಡಿಯೂರಪ್ಪ ಅವರು ಸುಮಾರು 40 ವರ್ಷದ ರಾಜಕಾರಣದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಾವಿರಾರು ಉಳಿಪೆಟ್ಟುಗಳು ಬಿದ್ದಿವೆ. ಈಗ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡುತ್ತಿದ್ದು, ಕರ್ನಾಟಕದ ರಾಜಾಹುಲಿ ಎಂದೆನಿಸಿಕೊಂಡಿದ್ದಾರೆ. ತಂದೆಯವರಂತೆ ಪುತ್ರರಾದ ವಿಜಯೇಂದ್ರ ಅವರಿಗೂ ಸಾಕಷ್ಟು ಉಳಿಪೆಟ್ಟುಗಳು ಬೀಳಲಿದ್ದು, ಸುಂದರ ಮೂರ್ತಿಯಾಗಿ ರೂಪುಗೊಳ್ಳಲಿದ್ದೀರಿ. ಮುಂದೆ ಯಡಿಯೂರಪ್ಪ ಅವರಂತೆ ರಾಜಾಹುಲಿಯಾಗಿ ಹೊರಹೊಮ್ಮಲಿ, ಕರ್ನಾಟಕದಲ್ಲಿ ಸೇವೆ ಮಾಡಲಿ ಎಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾರೈಸಿದ್ದಾಗಿ ಪತ್ರಕರ್ತರ ಪ್ರಶ್ನೆಗೆ ಸಚಿವರಾದ ಸೋಮಶೇಖರ್ ಉತ್ತರಿಸಿದರು.
ಒಂದು ಟಿವಿ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು; ಹೆಚ್ಚಿನ ಮಾಹಿತಿ ಇಲ್ಲ
ಬಿಪಿಎಲ್ ಕಾರ್ಡ್ ಹೊಂದಲು ಕೆಲವೊಂದು ನಿಯಮಗಳಿವೆ. ಅದನ್ನು ಉಲ್ಲಂಘಿಸಿದರೆ ಮಾತ್ರ ರದ್ದುಪಡಿಸಿರುವುದಾಗಿ ಸಚಿವರಾದ ಉಮೇಶ್ ಕತ್ತಿಯವರು ಹೇಳಿರಬಹುದು. ಆ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಒಂದು ಬೈಕ್ ಅಥವಾ ಟೀವಿ ಇದ್ದರೆ ರದ್ದು ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಇದ್ದಂತೆ ಕಾಣುತ್ತಿಲ್ಲ. ಕೆಲವೊಂದು ಮನೆಗಳಲ್ಲಿ 3-4 ಬೈಕ್ ಗಳನ್ನು ಇಟ್ಟುಕೊಂಡಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಿಯಮಗಳಿಗನುಸಾರವಾಗಿ ರದ್ದು ಮಾಡುವ ಬಗ್ಗೆ ಸಚಿವರು ಪ್ರಸ್ತಾಪ ಮಾಡಿರಬಹುದು ಎಂದು ಸಚಿವರಾದ ಸೋಮಶೇಖರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪೆಟ್ರೋಲ್ ದರ ಏರಿಕೆ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರಾದ ಸೋಮಶೇಖರ್, ಲಾಕ್ಡೌನ್ ಸಂದರ್ಭ ಇದ್ದ ಕಾರಣ, ಈಗ ಕೆಲವೊಂದು ಸೆಸ್ ಗಳನ್ನು ಹಾಕಿದ್ದಾರಷ್ಟೇ. ಪೆಟ್ರೋಲ್ ದರ ಏರಿಳಿತ ಆಗುತ್ತಲೇ ಇರುತ್ತದೆ. ಇದಕ್ಕೆ ಒಮ್ಮೊಮ್ಮೆ ಸಹಕಾರ ಕೊಡಬೇಕಾಗುತ್ತದೆ ಎಂದು ತಿಳಿಸಿದರು.
ಸೋಮಶೇಖರ್ ಕ್ರಿಯಾಶೀಲ ಮಂತ್ರಿಗಳು- ಸಚಿವ ಬಿ.ಸಿ.ಪಾಟೀಲ್
ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಮಾತನಾಡಿ, ಹಂಸಭಾವಿಯಲ್ಲಿ ಸಹಕಾರ ಸಂಘದ ಶತಮಾನೋತ್ಸವ ಸಂಬಂಧ ಕಾರ್ಯಕ್ರಮಕ್ಕೆ ಬರಬೇಕೆಂದು ಸಹಕಾರ ಸಚಿವರಾದ ಎಸ್. ಟಿ. ಸೋಮಶೇಖರ್ ಅವರಿಗೆ ಮನವಿ ಮಾಡಿದ್ದೆ. ಅದಕ್ಕೆ ಒಪ್ಪಿ ಬಂದಿದ್ದಕ್ಕಾಗಿ ನನಗೆ ತುಂಬ ಸಂತೋಷವಾಗಿದೆ. ಸೋಮಶೇಖರ್ ಅವರು ಒಬ್ಬ ಕ್ರಿಯಾಶೀಲ ಮಂತ್ರಿಗಳಾಗಿದ್ದಾರೆ. ಕೃಷಿಗೆ ಸಂಪೂರ್ಣ ಸಹಕಾರವನ್ನು ಕೊಡುತ್ತಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಪಳಗಿರುವ ಚಿಂತನಾಶೀಲ ಮಂತ್ರಿಗಳಾದ ಅವರ ಸಹಕಾರ ಹೀಗೆಯೇ ಮುಂದುವರಿಯಲಿ ಎಂದು ನಾನು ಬಯಸುತ್ತೇನೆ ಎಂದು ಹೇಳಿದರು.
Key words: Minister- ST Somashekhar-minister- bc patil-haveri