ಮೈಸೂರು,ಡಿಸೆಂಬರ್,2,2021(www.justkannada.in): ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ರಾಣಿ ಗೇಟು ಜೇನು ಕುರುಬರ ಹಾಡಿ ನಿವಾಸಿ ಬಸವ ಎಂಬುವವರನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ ಆರೋಪ ಪ್ರಕರಣ ಸಂಬಂಧ ಘಟನೆಯನ್ನ ನಟ ಚೇತನ್ ಖಂಡಿಸಿದ್ದಾರೆ.
ಈ ಕುರಿತು ಮೈಸೂರಿನ ಜಿಲ್ಲಾಪತ್ರಕರ್ತರ ಭವನದಲ್ಲಿ ನಟ ಚೇತನ್ ಹಾಗೂ ಇತರ ಪ್ರಮುಖರು ಸುದ್ದಿಗೋಷ್ಠಿ ಅಸಮಾಧಾನ ವ್ಯಕ್ತಪಡಿಸಿದರು. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ನಟ ಚೇತನ್, ಆದಿವಾಸಿಗಳು ಅರಣ್ಯದ ಮೂಲ ನಿವಾಸಿಗಳು.ಅವರ ಸಂಸ್ಕೃತಿ ಪರಂಪರೆಯನ್ನು ರಕ್ಷಿಸಬೇಕಾಗಿದೆ. ಆದರೆ ಅವರ ಮೇಲೆ ನಿರಂತರ ಶೋಷಣೆ ನಡೆಯುತ್ತಿರುವುದು ಸರಿಯಲ್ಲ. ಆದಿವಾಸಿ ಸಮುದಾಯದ ವ್ಯಕ್ತಿಯ ಮೇಲೆ ಗುಂಡು ಹಾರಿಸಿರುವುದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಅರಣ್ಯದ ಮೂಲ ನಿವಾಸಿಗಳಿಗೆ ಸೂಕ್ತ ರಕ್ಷಣೆ ನೀಡಿ ಅವರ ಹಕ್ಕುಗಳನ್ನು ರಕ್ಷಣೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯ ಆಗಿದೆ. ಆದಿವಾಸಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಬೇಕು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಈ ಮೂರು ಪಕ್ಷಗಳು ಆದಿವಾಸಿಗಳನ್ನು ಕಡೆಗಣಿಸುತ್ತಾ ಬಂದಿವೆ ಎಂದು ನಟ ಚೇತನ್ ವಾಗ್ದಾಳಿ ನಡೆಸಿದರು.
ಪ್ರಕರಣ ಕುರಿತು ಸೂಕ್ತ ತನಿಖೆಯಾಗಬೇಕು.
ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಗ್ರೀನ್ ಇಂಡಿಯಾ ಟ್ರೈಬಲ್ಸ್ ಸಂಸ್ಥೆಯ ಸಂಸ್ಥಾಪಕ ಡಾ ಮಹೇಂದ್ರ ಕುಮಾರ್, ಪ್ರಕರಣ ಕುರಿತು ಸೂಕ್ತ ತನಿಖೆಯಾಗಬೇಕು. ನಮ್ಮ ದೇಶದಲ್ಲಿ ಜನ ಸಾಮಾನ್ಯರಿಗೆ ಕಾನೂನುಗಳು ಇಲ್ಲವೇ.? ಬಸವ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಆದರೆ ಆತನ ಮೇಲೆ ಗುಂಡು ಹಾರಿಸಿರುವುದು ಎಷ್ಟರ ಮಟ್ಟಿಗೆ ಸರಿ. ಹಾಡಿ ನಿವಾಸಿಗಳು ಅಮಾಯಕರು. ಅವರಿಗೆ ಕಾನೂನಿನ ಬಗ್ಗೆ ಅರಿವಿಲ್ಲ. ಹಾಗಾಗಿ ನಾವು ದೂರು ನೀಡುತ್ತೇವೆ. ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಒತ್ತಾಯಿಸುತ್ತೇವೆ. ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
Key words: Actor -Chetan – condemns – incident – forest guard- firing-hadi person