ಅಪ್ಪನ ಆಸೆ ಪೂರೈಸಿದ ಮಗ:  ಗ್ರಾಮೀಣ ಪ್ರತಿಭೆ, ಉಪನ್ಯಾಸಕ ಗಿರೀಶ್ ಗೆ ಒಲಿದ ರಾಜ್ಯ ಪ್ರಶಸ್ತಿ.

ಮೈಸೂರು,ಸೆಪ್ಟಂಬರ್,4,2023(www.justkannada.in): ತುಂಬಿದ ಕುಟುಂಬ, ಅಪ್ಪಟ ಗ್ರಾಮೀಣ ಪ್ರತಿಭೆ, ಅಪ್ಪನ ಆಸೆಯಂತೆ ಶಿಕ್ಷಣ ಕ್ಷೇತ್ರವನ್ನು  ಸೇವೆಯೆಂದು ಪರಿಗಣಿಸಿ ದುಡಿಯುತ್ತಿರುವ  ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಹೆಚ್ ಎನ್ ಗಿರೀಶ್ ಅವರಿಗೆ ರಾಜ್ಯ ಸರ್ಕಾರದ 2023ನೇ ಸಾಲಿನ ಉತ್ತಮ ಉಪನ್ಯಾಸಕ ಪ್ರಶಸ್ತಿ ಒಲಿದಿದೆ.

ಹೆಚ್ ಎನ್ ಗಿರೀಶ್  ಅವರ ಹುಟ್ಟೂರು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಹನಗೋಡು ಹೋಬಳಿಯ ಹಿಂಡಗೂಡ್ಲು. ಹೆಚ್ ಎನ್ ಗಿರೀಶ್ ಹುಟ್ಟಿದ್ದು ತುಂಬಿದ ಕುಟುಂಬದಲ್ಲಿ. ತಂದೆ ಹೆಚ್ ಎನ್ ನಿಂಗೇಗೌಡ ಶಿಕ್ಷಕರಾಗಿದ್ದರು. ತಾಯಿ ಎಂ. ಟಿ ಲಲಿತಮ್ಮ ಗೃಹಿಣಿ. ತಂದೆ ಹೆಚ್ ಎನ್ ನಿಂಗೇಗೌಡರಿಗೆ ಮಕ್ಕಳಿಗೆ ಪಾಠ ಕಲಿಸುವುದು ಅಂದರೆ ಎಲ್ಲಿಲ್ಲದ ಆಸಕ್ತಿ. ಶಾಲೆಯಲ್ಲಿ ಮಾತ್ರ ಇವರು ಪಾಠ ಮಾಡುತ್ತಿರಲಿಲ್ಲ. ಬದಲಿಗೆ ಶಾಲೆ ಮುಗಿದ ಮೇಲೆ ತಮ್ಮ ಗ್ರಾಮ ಹಿಂಡಗೂಡ್ಲು ಮಾತ್ರವಲ್ಲ ಬದಲಿಗೆ ಹನಗೋಡು ಹೋಬಳಿಯ ಎಲ್ಲಾ ಮಕ್ಕಳಿಗೂ ಪಾಠ ಹೇಳಿಕೊಡುತ್ತಿದ್ದರು.

ನಿಂಗೇಗೌಡರಿಗೆ ಒಟ್ಟು ನಾಲ್ಕು ಮಕ್ಕಳು. ಹಿರಿಯ ಮಗ ಹೆಚ್ ಎನ್ ವೆಂಕಟೇಶ್ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಇನ್ನು ಕಿರಿಯ ಮಗನಾಗಿರುವ ಹೆಚ್ ಎನ್ ಗಿರೀಶ್  ಭೌತಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ಹೆಚ್ ಎನ್ ನಿಂಗೇಗೌಡರಿಗೆ ಕಿರಿಯ ಮಗ ತನ್ನಂತೆ ಶಿಕ್ಷಣ ಕ್ಷೇತ್ರದಲ್ಲಿರಬೇಕೆಂಬ ಆಸೆಯಿತ್ತು. ಅದರಂತೆ ಗಿರೀಶ್ ಕಷ್ಟಪಟ್ಟ ಓದಿ ಉಪನ್ಯಾಸಕರಾಗಿದ್ದು, ಶಿಕ್ಷಣ ಕ್ಷೇತ್ರವನ್ನು ಕೇವಲ ವೃತ್ತಿಯನ್ನಾಗಿಸಿಕೊಳ್ಳದೇ ಸೇವೆಯೆಂದು ಪರಿಗಣಿಸಿ ಇದೀಗ ಉತ್ತಮ ಉಪನ್ಯಾಸಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹೆಚ್ ಎನ್ ಗಿರೀಶ್ ಕಳೆದ 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು. ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆ ಹಾಗೂ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಸಮಯ ಪಾಲನೆ, ಸೌಜನ್ಯ ವರ್ತನೆ, ಸಮಾಜಮುಖಿ ಸೇವೆಗಳಿಂದ ವೃತ್ತಿ ಹಾಗೂ ಇಲಾಖೆಯ ಗೌರವ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಗಿರೀಶ್ ಅವರಿಗೆ ಹುಣಸೂರು ತಾಲ್ಲೂಕು ಪತ್ರಕರ್ತರ ಸಂಘದಿಂದ  ಶಿಕ್ಷಣ ರಕ್ಷಕ ಪ್ರಶಸ್ತಿ,  ನೇಗಿಲ ಯೋಗಿ ಟ್ರಸ್ಟ್ (ರಿ.) ನಿಂದ ಶಿಷ್ಯರು ಮೆಚ್ಚಿದ ಶಿಕ್ಷಕ ಪ್ರಶಸ್ತಿ 2021, ಮೈಸೂರು ರೋಟರಿ ಸಂಸ್ಥೆಯಿಂದ ದಕ್ಷಿಣ ಕೇಸರಿ ಉತ್ತಮ ಶಿಕ್ಷಕ ಪ್ರಶಸ್ತಿ, ಬೆಳಗಾವಿಯ ಸಾಹಿತ್ಯ ಶಿಕ್ಷಣ ಸಂಸ್ಥೆಯಿಂದ ಗುರುಕುಲ ರಾಜ್ಯ ಪ್ರಶಸ್ತಿ ಮುಂತಾದವು ಲಭಿಸಿವೆ.

Key words: hunsur-lecturer- Girish – state award.