ಕಾಬುಲ್, ಜುಲೈ 23, 2021(www.justkannada.in): ಇತ್ತೀಚೆಗೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯಲ್ಲಿ ಅಫ್ಘಾನ್ ಭದ್ರತಾ ಪಡೆಗಳು ಹಾಗೂ ತಾಲಿಬಾನ್ ಉಗ್ರರ ನಡುವೆ ನಡೆದಂತಹ ದಾಳಿಯಲ್ಲಿ ಭಾರತದ ಪತ್ರಕರ್ತ ಡ್ಯಾನಿಷ್ ಸಿದ್ದಿಕಿ ಮೃತಪಟ್ಟರು.
ಘಟನೆ ಜರುಗಿದಾಗ, ಪುಲಿಟ್ಜರ್ ಪ್ರಶಸ್ತಿ ವಿಜೇತರಾಗಿದ್ದ ಫೋಟೊ ಜರ್ನಲಿಸ್ಟ್ ಡ್ಯಾನಿಷ್ ಸಿದ್ದಿಕಿ ಅಫ್ಘಾನಿಸ್ತಾನದ ಭದ್ರತಾ ಪಡೆಗಳ ಜೊತೆಗಿದ್ದರು. ಘಟನೆಯ ಕುರಿತು ಅಫ್ಘಾನ್ ನ ಅಧಿಕಾರಿಗಳು, ತಾಲಿಬಾನ್ ಹೋರಾಟಗಾರರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಡ್ಯಾನಿಷ್ ಸಿದ್ದಿಕಿ ಮತ್ತು ಓರ್ವ ಹಿರಿಯ ಅಫ್ಘಾನ್ ಅಧಿಕಾರಿ ಮೃತಪಟ್ಟ ಸಂಗತಿಯನ್ನು ತಿಳಿಸಿದರು. ಅಫ್ಘಾನಿಸ್ತಾನದ ಕಾಬುಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ವಿತರಿಸಲ್ಪಟ್ಟಿರುವ ಮರಣ ಪ್ರಮಾಣಪತ್ರದ ಪ್ರಕಾರ ಭಾರತದ ಫೋಟೊ ಜರ್ನಲಿಸ್ಟ್ ಡ್ಯಾನಿಷ್ ಸಿದ್ದಿಕಿಯವರು ಗುಂಡೇಟಿನಿಂದ ಮೃತಪಟ್ಟಿರುವುದಾಗಿ ತಿಳಿಸಿದೆ.
ಈ ಘಟನೆಯ ಕುರಿತು ಅಫ್ಘಾನ್ ನ ಕಮಾಂಡರ್ ಅವರು ಕೆಲವು ಹೃದಯವಿದ್ರಾವಕ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಇಂಡಿಯಾ ಟುಡೆ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನವೊಂದಲ್ಲಿ ಅಫ್ಘಾನ್ ನ ಕಮಾಂಡರ್ ಬಿಲಾಲ್ ಅಹ್ಮದ್ ಅವರು, “ತಾಲಿಬಾನಿಗಳು ಡ್ಯಾನಿಷ್ ಸಿದ್ದಿಕಿ ಅವರಿಗೆ ಗುಂಡಿಕ್ಕಿದ್ದಷ್ಟೇ ಅಲ್ಲದೆ, ಅವರ ಶರೀರವನ್ನು ವಿರೂಪಗೊಳಿಸಿದ್ದಾರೆ. ಡ್ಯಾನಿಷ್ ಭಾರತೀಯ ಎನ್ನುವ ಕಾರಣದಿಂದಾಗಿಯೇ ಈ ದುಷ್ಕೃತ್ಯ ಎಸಗಿದ್ದಾರೆ. ತಾಲಿಬಾನಿಗಳು ಭಾರತೀಯರನ್ನು ದ್ವೇಷಿಸುತ್ತಾರೆ,” ಎಂದರು.
ಬಿಲಾಲ್ ಅಹ್ಮದ್ ಅವರು ಅಫ್ಘಾನ್ ಭದ್ರತಾ ಪಡೆಯಲ್ಲಿ ಐದು ವರ್ಷಗಳಿಂದ ಸಹಯೋಗ ಹೊಂದಿದ್ದಾರೆ. “ಪಾಕಿಸ್ತಾನದ ಗಡಿ ಸ್ಪಿನ್ ಬೊಲ್ಡಾಕ್ ಎಂಬ ಪಟ್ಟಣದಲ್ಲಿ ನಡೆದಂತಹ ಚಕಮಕಿಯಲ್ಲಿ ಅಫ್ಘಾನ್ ನ ಅಧಿಕಾರಿಯೊಬ್ಬರ ಜೊತೆಗೆ ಡ್ಯಾನಿಷ್ ಸಿದ್ದಿಕಿ ಅವರಿಗೆ ಗುಂಡಿಕ್ಕಲಾಯಿತು. ಡ್ಯಾನಿಷ್ ಭಾರತೀಯ ಎಂದು ಗೊತ್ತಾದ ನಂತರ ತಾಲಿಬಾನಿಗಳು ಆತನ ತಲೆಯ ಮೇಲೆ ವಾಹನವನ್ನು ಚಲಾಯಿಸಿದ್ದಾರೆ. ಆದರೆ ಡ್ಯಾನಿಷ್ ಆಗಲೇ ಮೃತಪಟ್ಟಿರುವುದು ಆಗ ಅವರಿಗೆ ಗೊತ್ತಾಗಿದೆ,” ಎಂದು ವಿವರಿಸಿದರು.
ಇಂಡಿಯಾ ಟುಡೆ ತಾಲಿಬಾನ್ ನ ವಕ್ತಾರರೊಬ್ಬರನ್ನೂ ಸಹ ದೂರವಾಣಿ ಮೂಲಕ ಸಂಪರ್ಕಿಸಿತು. ಆದರೆ ಡ್ಯಾನಿಷ್ ಸಿದ್ದಿಕಿ ಅವರ ಸಾವಿಗೆ ತಾವು ಜವಾಬ್ದಾರರಲ್ಲ ಎಂದು ಅವರು ತಿಳಿಸಿದ್ದಾರೆ. “ನಾವು ಆತನನ್ನು ಕೊಲ್ಲಲಿಲ್ಲ. ಆತ ನಮ್ಮ ಶತ್ರು ಪಡೆಗಳ ಜೊತೆಗಿದ್ದ. ಯಾರಾದರೂ ಪತ್ರಕರ್ತರು ಇಲ್ಲಿಗೆ ಬರಬೇಕಾದರೆ ನಮ್ಮೊಂದಿಗೆ ಮೊದಲೇ ಮಾತನಾಡಬೇಕು. ನಾವು ಈಗಾಗಲೇ ದೇಶದಲ್ಲಿರುವ ಪತ್ರಕರ್ತರ ಸಂಪರ್ಕದಲ್ಲಿದ್ದೇವೆ,” ಎಂದು ತಾಲಿಬಾನ್ ನ ವಕ್ತಾರ ಹಾಗೂ ಕಮಾಂಡರ್ ಮೌಲಾನ ಯೂಸುಫ್ ಅಹ್ಮದಿ ದೂರವಾಣಿ ಮೂಲಕ ಮಾತನಾಡಿದಾಗ ತಿಳಿಸಿದ್ದಾರೆ.
ಡ್ಯಾನಿಷ್ ಸಿದ್ದಿಕಿಯ ಅಂತಿಮ ಸಂಸ್ಕಾರ
ರಾಯರ್ಸ್ ಸಂಸ್ಥೆಯ ಫೋಟೊ ಜರ್ನಲಿಸ್ಟ್ ಆಗಿದ್ದಂತಹ ಡ್ಯಾನಿಷ್ ಸಿದ್ದಿಕಿ ಅವರ ಮೃತದೇಹವನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಸ್ಮಶಾನದಲ್ಲಿ ಜುಲೈ 18, 2021, ಭಾನುವಾರದಂದು ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಡ್ಯಾನಿಷ್ ಸಿದ್ದಿಕಿಯ ಮೃತದೇಹವನ್ನು ತಾಲಿಬಾನ್ ನಿಂದ ಇಂಟರ್ನ್ಯಾಷನಲ್ ಕಮಿಟಿ ಆಫ್ ರೆಡ್ ಕ್ರಾಸ್ (ಐಸಿಆರ್ಸಿ)ಗೆ ಹಸ್ತಾಂತರಿಸಲಾಯಿತು. ನಂತರ ದೇಹವನ್ನು ಭಾನುವಾರ ಸಂಜೆ ದೆಹಲಿ ವಿಮಾನನಿಲ್ದಾಣಕ್ಕೆ ತರಲಾಯಿತು. ಡ್ಯಾನಿಷ್ ಸಿದ್ದಿಕಿ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಹಳೆಯ ವಿದ್ಯಾರ್ಥಿಯಾಗಿದ್ದು, 2018ರಲ್ಲಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿದ್ದರು.
ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ?
ಅಫ್ಘಾನಿಸ್ತಾನದಿಂದ ಬಹುತೇಕ ಅಮೆರಿಕಾ ಪಡೆಗಳು ಕಳೆದ ಕೆಲವು ವಾರಗಳಲ್ಲಿ ಹಿಂದಿರುಗಿದ ನಂತರ ಅಫ್ಘಾನಿಸ್ತಾನದಲ್ಲಿ ಸರಣಿ ಉಘ್ರ ದಾಳಿಗಳು ನಡೆದಿವೆ. ಕಳೆದ ಎರಡು ದಶಕಗಳಿಂದ ಅಫ್ಘಾನಿಸ್ತಾನದಲ್ಲಿದ್ದಂತಹ ಮಿಲಿಟರಿ ಉಪಸ್ಥಿತಿಯನ್ನು ಆಗಸ್ಟ್ 31ರೊಳಗೆ ತೆರವುಗೊಳಿಸುವ ಗುರಿ ಹೊಂದಲಾಗಿತ್ತು.
2001ರಲ್ಲಿ ಅಮೆರಿಕಾ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಕಿತ್ತೊಗೆದಿತ್ತು. ಈಗ ಅಮೆರಿಕಾ ತನ್ನ ಭದ್ರತಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾಲಿಬಾನ್ ನ ಹೋರಾಟಗಾರರು ಪುನಃ ದೇಶದ ಮೇಲೆ ತಮ್ಮ ಹಿಡಿತವನ್ನು ಸಾಧಿಸುವ ಪ್ರಯತ್ನದಲ್ಲಿದ್ದಾರೆ.
Key words: Report -final moments – death – Danish Siddiqui- India’s- journalist.