ಮೈಸೂರು,ಜನವರಿ,17,2022(www.justkannada.in): ಕೆಲವೊಮ್ಮೆ ನೀವು ಕೇಳಿರುತ್ತೀರಿ. ಒಬ್ಬ ವ್ಯಕ್ತಿ ಇರುತ್ತಾನೆ, ಅವನ ಬಗ್ಗೆ ಹಲವರು “ಅವನು ಸರಿ ಇಲ್ಲ. ಅವನು ಹಾಗೆ ಮಾಡಿದ್ದಾನೆ, ಹೀಗೆ ಮಾಡಿದ್ದಾನೆ”- ಅಂತಲ್ಲ ಅವನ ಮೇಲೆ ಏನೆಲ್ಲಾ ಆಪಾದನೆಗಳನ್ನು ಮಾಡುತ್ತಿರುತ್ತಾರೆ. ಇರಲಿ. ಅವನು ಕೆಟ್ಟವನು ಅಂತಲೇ ಇಟ್ಟುಕೊಳ್ಳೋಣ. ಆದರೆ ಅವನಲ್ಲೂ ಕೆಲವು ಒಳ್ಳೆಯ ಗುಣಗಳಿರಬಹುದಲ್ಲ? ಅವುಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಕೆಟ್ಟ ಗುಣಗಳನ್ನು ಮರೆತಾಯಿತು!
ನೀವು ಮಾರುಕಟ್ಟೆಯಿಂದ ಹಣಕೊಟ್ಟು ತರಕಾರಿ ತರುತ್ತೀರಿ. ಕೆಲವು ತರಕಾರಿಗಳಲ್ಲಿ ಒಂದಿಷ್ಟು ಭಾಗ ಹುಳುಕಾಗಿ ಕೆಟ್ಟು ಹೋಗಿರುತ್ತದೆ. ಆಗ ನೀವು ಇಡೀ ತರಕಾರಿಯನ್ನು ತಿಪ್ಪೆಗೆ ಎಸೆದು ಬಿಡುತ್ತೀರಾ? ಇಲ್ಲ ಅಲ್ಲವೇ? ತರಕಾರಿಯಲ್ಲಿನ ಹುಳುಕಾದ ಭಾಗವನ್ನು ಕೊಯ್ದು ಬಿಸಾಡಿ ಒಳ್ಳೆಯ ಭಾಗವನ್ನು ಮಾತ್ರ ಅಡುಗೆಗೆ ಉಪಯೋಗಿಸುತ್ತೀರಲ್ಲವೇ?
ಪತ್ರಿಕೆಯೊಂದನ್ನು ಕೊಂಡುಕೊಳ್ಳುತ್ತೀರಿ. ಅದರಲ್ಲಿ ಕಥೆಗಳಿರುತ್ತವೆ, ಲೇಖನಗಳಿರುತ್ತವೆ, ಸ್ತ್ರೀ ವಿಭಾಗ, ಮಕ್ಕಳ ವಿಭಾಗ, ಕ್ರೀಡಾ ವಿಭಾಗ, ಸಿನಿಮಾ ವಿಭಾಗ, ಹಾಸ್ಯ, ಜಾಹೀರಾತು – ಹೀಗೆ ಅನೇಕ ಅಂಶಗಳಿರುತ್ತವೆ. ನಿಮಗೆ ಈ ಎಲ್ಲವೂ ಬೇಕಾಗಿಲ್ಲ. ಲೇಖನಗಳನ್ನು ಮಾತ್ರ ಓದುತ್ತೀರಿ. ನಂತರ ಪತ್ರಿಕೆಯನ್ನು ಮೂಲೆಗೆ ಎಸೆಯುತ್ತೀರಿ. ಆದರೆ ಇಡೀ ಪತ್ರಿಕೆಗೆ ನೀವು ಹಣ ಕೊಟ್ಟಿರುತ್ತೀರಿ. ಹಾಗೆಯೇ, ಮನುಷ್ಯನೊಬ್ಬನಲ್ಲಿ ಕೂಡ ಹುಳುಕುಗಳು ಇರಬಹುದು. ಅಂದ ಮಾತ್ರಕ್ಕೆ ಅವನನ್ನು ಸಾರಾಸಗಟಾಗಿ ತಿರಸ್ಕರಿಸುವುದು ತಪ್ಪು. ಯಾಕೆಂದರೆ, ಯಾರೊಬ್ಬರೂ ನೂರಕ್ಕೆ ನೂರು ಪರಿಪೂರ್ಣರಾಗಿರುವುದು ಅಸಂಭವ. ಆತನಲ್ಲಿರುವ ತಪ್ಪುಗಳನ್ನು ಬೊಟ್ಟು ಮಾಡಿ ತೋರಿಸುವ ನಿಮ್ಮಲ್ಲಿ ತಪ್ಪುಗಳಿಲ್ಲವೇನು? ನೀವೇನು ಪರಿಪೂರ್ಣರೇ? ಮನುಷ್ಯನೊಬ್ಬನಲ್ಲಿರಬಹುದಾದ ಒಂದಿಷ್ಟು ಹುಳುಕುಗಳಿಗೆ ಭೂತಗನ್ನಡಿ ಹಿಡಿದು ದೊಡ್ಡದು ಮಾಡಿ ತೋರಿಸದೆ, ಅವನಲ್ಲಿರಬಹುದಾದ ಒಳ್ಳೆಯ ಅಂಶಗಳನ್ನು ಮಾತ್ರ ಗ್ರಹಿಸಿ ವ್ಯವಹರಿಸುವುದು ಒಳ್ಳೆಯದು. ಇದನ್ನೇ ಹಿಂದಿನವರು ಹಂಸಕ್ಷೀರ ನ್ಯಾಯ ಅಂತ ಕರೆದಿರುವುದು.
ರಾವಣನಂತಹ ರಾಕ್ಷಸ ವ್ಯಕ್ತಿತ್ವದವನಲ್ಲೂ ಅನುಕರಣೀಯ ಒಳ್ಳೆಯ ಗುಣಗಳಿದ್ದವು.
– ಜಿ. ವಿ. ಗಣೇಶಯ್ಯ.