ಬೆಳಗಾವಿ, ಡಿಸೆಂಬರ್,17,2021(www.justkannada.in): ಕರ್ನಾಟಕದಲ್ಲಿ ಸೂಕ್ತ ಜಾಗ ಗುರುತಿಸಿ ಶೀಘ್ರದಲ್ಲೇ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ಕೊಡಗಿನಲ್ಲಿ ಕ್ರೀಡಾ ವಿವಿ ಸ್ಥಾಪನೆ ಹಾಗೂ ಕೊಡಗು ಜಿಲ್ಲೆಗೆ ಕ್ರೀಡಾ ಇಲಾಖೆಯಿಂದ ನೀಡಿರುವ ಅನುದಾನ ಕುರಿತು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ಕರ್ನಾಟಕದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಕೊಡಗಿನಿಂದಲೂ ಪ್ರಸ್ತಾವನೆ ಬಂದಿದೆ. ಆದರೆ ವಿವಿ ಸ್ಥಾಪನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಿಯಮಗಳ ಅನ್ವಯ ಪರಿಶೀಲನೆ ನಡೆಸಿ ಸೂಕ್ತ ಜಾಗದಲ್ಲಿ ರಾಜ್ಯದ ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪಿಸುವುದಾಗಿ ಸಚಿವ ಡಾ.ನಾರಾಯಣಗೌಡ ಅವರು ಉತ್ತರಿಸಿದರು.
ಕೊಡಗು ಕ್ರೀಡೆ ಮೂಲಕ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದ ಜಿಲ್ಲೆ. ಕೊಡಗು ಜಿಲ್ಲೆಗೆ ವಿವಿಧ ಕ್ರೀಡಾ ಯೋಜನೆಗಳಿಗೆ ಪ್ರಸಕ್ತ ಸಾಲಿನಲ್ಲಿ ಇಲಾಖೆಯಿಂದ 2.18 ಕೋಟಿ ರೂ. ಅನುದಾನ ನೀಡಲಾಗಿದೆ. ಅಲ್ಲದೇ ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಹಾಕಿ ಟರ್ಫ್ ನಿರ್ಮಿಸಲಾಗಿದೆ. ಇಲ್ಲಿನ ಕ್ರೀಡಾ ಶಾಲೆಯಲ್ಲಿ ಒಟ್ಟು 290 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಪೊನ್ನಂಪೇಟೆಯಲ್ಲಿ ಹಾಕಿ ಸಿಂಥೆಟಿಕ್ ಟರ್ಫ್, ಸೋಮವಾರಪೇಟೆಯಲ್ಲಿ 4.02 ಕೋಟಿ ವೆಚ್ಚದಲ್ಲಿ ಹಾಕಿ ಟರ್ಫ್ ನಿರ್ಮಾಣ, ವಿರಾಜಪೇಟೆಯಲ್ಲಿ 3.26 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಅಲ್ಲದೇ, ಒಲಂಪಿಕ್ಸ್ ನಲ್ಲಿ ಭಾಗವಹಿಸಿದ ವಿವಿಧ ಕ್ರೀಡೆಗಳ ತರಬೇತುದಾರರಾದ ಅಂಕಿತಾ ಸುರೇಶ್, ಕುಟ್ಟಪ್ಪ ಹಾಗೂ ಗಣಪತಿ ಅವರಿಗೆ ಒಂದು ಲಕ್ಷ ರೂ ಗೌರವ ಧನ ನೀಡಲಾಗಿದೆ. ಕು.ಭವಾನಿ ತೆಕ್ಕಡ ಅವರಿಗೆ ಒಲಂಪಿಕ್ ಗೇಮ್ಸ್ನಲ್ಲಿ ಭಾಗವಹಿಸಲು ಅಗತ್ಯ ತರಬೇತಿ ಪಡೆಯಲು ಎರಡು ಲಕ್ಷ ರೂ ಸಹಾಯಧನ ನೀಡಲಾಗಿದೆ. ಈ ಮೂಲಕ ಕ್ರೀಡೆಗೆ ಕೀರ್ತಿ ತಂದಿರುವ ಕೊಡಗು ಜಿಲ್ಲೆಗೆ ಕ್ರೀಡಾ ಇಲಾಖೆಯಿಂದ ಕೊಡುಗೆ ನೀಡಲಾಗುತ್ತಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
Key words: Steps – establish- Sports university- soon – Karnataka-Minister-Dr. Narayana Gowda