ಬೆಂಗಳೂರು,ಡಿಸೆಂಬರ್,6,2021(www.justkannada.in): ಡಿಸೆಂಬರ್ 10 ರಂದು ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ ಟೀಕೆಗಳಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಿಷ್ಟು…
ಬಸವರಾಜ್ ಬೊಮ್ಮಾಯಿಯವರ ಬಗ್ಗೆ ನನಗೆ ಕೆಲವು ನಿರೀಕ್ಷೆಗಳಿದ್ದವು. ನಮ್ಮ ಜೊತೆ ಬೆಳೆದ ಮನುಷ್ಯ. ಬಿಜೆಪಿಯ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದನೆಗೊಂಡ ಮನುಷ್ಯರಲ್ಲ. ನಿಜ ಮತ್ತು ನೈತಿಕತೆಯ ಆಧಾರದ ಮೇಲೆ ಆಡಳಿತ ನಡೆಸಬಹುದು, ನಮ್ಮ ಸರ್ಕಾರದ ಅವಧಿ ಮುಗಿದಾಗ ಅಭಿವೃದ್ಧಿ ಕೆಲಸಗಳು ಯಾವ ಹಂತದಲ್ಲಿದ್ದವೋ ಅಲ್ಲಿಂದ ಮುಂದಕ್ಕೆ ಕೊಂಡೊಯ್ಯುವ ಕಾಳಜಿಯನ್ನು ಬೊಮ್ಮಾಯಿಯವರು ತೋರಿಸುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ನಮ್ಮ ನಿರೀಕ್ಷೆಗಳನ್ನೆಲ್ಲ ಸುಳ್ಳು ಮಾಡಿ ಬಿಜೆಪಿಯ ಬಹಳ ದೊಡ್ಡ ಸುಳ್ಳುಗಾರರಾಗಿ ಹೊರ ಹೊಮ್ಮುತ್ತಿರುವುದನ್ನು ನೋಡಿದರೆ, ಬೊಮ್ಮಾಯಿಯವರು ಕೆಲವೆ ದಿನಗಳಲ್ಲಿ ಜನರಿಂದ ಗೇಲಿಗೆ ಒಳಗಾಗುತ್ತಾರೆ ಎನ್ನಿಸುತ್ತಿದೆ ಎಂದು ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ.
ಸುಳ್ಳು ಹೇಳುವುದರ ಮೂಲಕ ಸತ್ಯವನ್ನು ಮುಚ್ಚಿಡಲಾಗುವುದಿಲ್ಲ. ಬೊಮ್ಮಾಯಿಯವರು ನಿನ್ನೆ ಆನೇಕಲ್ ಮತ್ತು ಬೀದರ್ ಗಳಲ್ಲಿ ಹಲವಾರು ಸುಳ್ಳುಗಳನ್ನು ಹೇಳಿದ್ದಾರೆ. ಒಂದು; ಕಾಂಗ್ರೆಸ್ ನವರು ಮನೆಗಳನ್ನೆ ನೀಡಿರಲಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ೨೦೧೭ ರಲ್ಲಿ ಚುನಾವಣೆಗಳು ಮೂರು ತಿಂಗಳು ಇರುವಾಗ ೧ ಲಕ್ಷ ಮನೆಗಳನ್ನು ಘೋಷಿಸಿದರು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯವರಿಗೆ ಮಾಹಿತಿ ಪಡೆದುಕೊಳ್ಳುವುದು ಕಷ್ಟವಲ್ಲ. ಮಾಹಿತಿ ಇದ್ದರೂ ಸುಳ್ಳು ಹೇಳುವುದು ತಪ್ಪು. ಬೊಮ್ಮಾಯಿಯವರು ಹೇಳುತ್ತಿರುವ ಒಂದು ಲಕ್ಷ ಮನೆಗಳು ಬೆಂಗಳೂರಿನ ವಸತಿ ಯೋಜನೆಗೆ ಮಾತ್ರ ಸಂಬಂಧಿಸಿದ್ದು.
ನಾವು ಅಧಿಕಾರಕ್ಕೆ ಬಂದಿದ್ದರೆ ಆ ಯೋಜನೆಯನ್ನು ಪೂರ್ಣಗೊಳಿಸಿ ಮತ್ತೆ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದೆವು. ಮುಂದೆ ಅಧಿಕಾರಕ್ಕೆ ಬಂದು ಅದನ್ನು ಮಾಡಿಯೇ ತೀರುತ್ತೇವೆ. ಬಿಜೆಪಿಯವರು ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾದರೂ ಆ ಯೋಜನೆ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ
೨೦೧೩ ರಿಂದ ೨೦೧೮ ರ ಮಾರ್ಚ್ ವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ೧೫ ಲಕ್ಷ ಮನೆಗಳನ್ನು ೧೬೭೭೫.೫೨ ಕೋಟಿರೂಗಳ ವೆಚ್ಚದಲ್ಲಿ ಜನರಿಗಾಗಿ ನಿರ್ಮಾಣ ಮಾಡಿಕೊಟ್ಟಿದ್ದೆವು. ಈ ಮಾಹಿತಿಯನ್ನು ವಸತಿ ಸಚಿವ ಸೋಮಣ್ಣನವರ ಕಛೇರಿಯಿಂದಲೆ ನನಗೆ ಲಿಖಿತವಾಗಿ ಕಳಿಸಿದ್ದಾರೆ. ಮಾಹಿತಿ ಇಲ್ಲದಿದ್ದರೆ ಬೊಮ್ಮಾಯಿಯವರು ಸೋಮಣ್ಣನವರನ್ನು ಕೇಳಿ ಪಡೆದುಕೊಳ್ಳಲಿ ಎಂದು ಸಿದ್ಧರಾಮಯ್ಯ ಕುಟುಕಿದರು.
ನಾವು ಹಾಕಿಕೊಂಡಿದ್ದ ಗುರಿ ಮೀರಿ ಸಾಧನೆ ಮಾಡಿದ್ದೆವು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾಗುತ್ತಿವೆ. ಇದುವರೆಗೂ ಕೂಡ ಪಂಚಾಯಿತಿಗಳಿಗೆ ಮನೆ ನಿರ್ಮಿಸಲು ಹೊಸ ಗುರಿಗಳನ್ನು ನೀಡಿ ಅದನ್ನು ಅನುಷ್ಟಾನ ಮಾಡಿಲ್ಲ.
ಎರಡನೆಯದಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಯಾದ ಬೀದರ್ ನಲ್ಲಿ ಬಸವಣ್ಣನವರ ಕರ್ಮಭೂಮಿಯಲ್ಲಿ ನಿಂತು ಸುಳ್ಳು ಹೇಳಿ ಬಸವತತ್ವಕ್ಕೆ ಅಪಚಾರ ಮಾಡಿದ್ದಾರೆ. ಕಾಂಗ್ರೆಸ್ ನವರು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಖಾಲಿ ಇದ್ದ ಸರ್ಕಾರಿ ಹುದ್ದೆಗಳನ್ನು ತುಂಬಿಲ್ಲ ಎಂದು ಹೇಳಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ೩೨ ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. ಬಿಜೆಪಿಯದ್ದೇ ಇನ್ನೂ ಶೂನ್ಯ ಸಾಧನೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಪಂಚಾಯಿತಿಗಳ ಕಡೆಗೆ ತಿರುಗಿ ನೋಡಿರಲಿಲ್ಲ ಎಂದಿದ್ದಾರೆ. ನಾನು ಮುಖ್ಯ ಮಂತ್ರಿಯಾಗಿದ್ದಾಗ ನಮ್ಮ ಸರ್ಕಾರದ ಅವಧಿಯಲ್ಲಿ ಗ್ರಾಮ ವಿಕಾಸ ಮತ್ತು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಜಾರಿಗೆ ತಂದೆವು.
ಆ ಯೋಜನೆಯಡಿ ೧೭೫೦ ಕೋಟಿ ರೂಪಾಯಿಗಳನ್ನು ನೀಡಿ ೨೦೦೦ ಗ್ರಾಮಗಳನ್ನು ಅಭಿವೃದ್ಧಿ ಪಡಿಸಿದ್ದೆವು. ಪ್ರತಿ ಗ್ರಾಮಕ್ಕೆ ತಲಾ ಒಂದೊಂದು ಕೋಟಿರೂಗಳನ್ನು ನೀಡಿದ್ದೆವು. ಈ ಬಿಜೆಪಿಯವರು ಬಂದ ಮೇಲೆ ಅದಕ್ಕೂ ಕಲ್ಲು ಹಾಕಿ ಯೋಜನೆ ನಿಲ್ಲಿಸಿದರು.
ಈಗ ಅಮೃತ ಯೋಜನೆಯಡಿ ಕೆಲವೆ ಗ್ರಾಮಗಳಿಗೆ ಕೇವಲ ೨೫ ಲಕ್ಷ ನೀಡುತ್ತೇವೆಂದು ಬೊಮ್ಮಾಯಿವರು ಹೇಳುತ್ತಾರೆ. ೨೫ ಲಕ್ಷ ರೂಪಾಯಿಗಳಲ್ಲಿ ಏನು ಮಾಡುತ್ತಾರೆ. ಈ ಬಿಜೆಪಿ ಸರ್ಕಾರದಲ್ಲಿ ಲಂಚಕ್ಕಾಗಿ ಶೇ ೪೦-೫೨ ಹೋಗುತ್ತಿದೆಯೆಂದು ಗುತ್ತಿಗೆದಾರರ ಸಂಘದವರು ಪ್ರಧಾನಮಂತ್ರಿಗೆ, ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಜಿಎಸ್ ಟಿ ಗೆ ೧೮-೨೮% ಹೋಗುತ್ತದೆ. ಅಲ್ಲಿಗೆ ಶೇ ೭೦ ರಷ್ಟು ಕೊಚ್ಚಿ ಕೊಂಡು ಹೋಯಿತಲ್ಲ. ಗುತ್ತಿಗೆದಾರನಿಗೆ ೧೦ ಪರ್ಸೆಂಟ್ ಲಾಭ ಬೇಕು. ಉಳಿದದ್ದು ೨೦ ಪರ್ಸೆಂಟ್ ಮಾತ್ರ. ಬೊಮ್ಮಾಯಿಯವರು ೨೫ ಲಕ್ಷ ನೀಡುತ್ತೇನೆ ಎಂದರೆ ಗ್ರಾಮಗಳ ಕಾಮಗಾರಿಗಳಿಗೆ ಸಿಗುವುದು ಕೇವಲ ೫ ಲಕ್ಷ. ಅದಕ್ಕಾಗಿ ಅಮೃತ ಎಂದು ಯೋಜನೆ. ಇದು ಬಿಜೆಪಿಯವರ ಜೇಬಿಗೆ ಮಾತ್ರ ಅಮೃತ. ಜನರ ಪಾಲಿಗೆ ವಿಷ ಎಂದು ಸಿದ್ಧರಾಮಯ್ಯ ಹರಿಹಾಯ್ದರು.
೧೫ ನೆ ಹಣಕಾಸು ಯೋಜನೆಯಲ್ಲಿ ಪಂಚಾಯತಿಗಳಿಗೆ ಮೊದಲು ೩೩೦೦ ಕೋಟಿ ಕೊಡುತ್ತೇವೆ ಅಂದರು. ಆದರೆ ಈಗ ಕೇವಲ ೨೪೦೦ ಕೊಟಿಗೆ ಇಳಿಸಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಗ್ರಾಮೀಣ ಸುಮಾರ್ಗ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಪ್ರಾರಂಭಿಸಿದ್ದೆವು. ಅದನ್ನೂ ನಿಲ್ಲಿಸಿದ್ದಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕಳೆದ ವರ್ಷ ಗ್ರಾಮೀಣ ರಸ್ತೆಗಳಿಗೆಂದು ೧೩೫೦ ಕೋಟಿ ನೀಡುವುದಾಗಿ ಆದೇಶ ಹೊರಡಿಸಿ ಕೆಲಸ ಮಾಡಿಸಿದರು. ಆದರೆ ಇದುವರೆಗೆ ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ. ಕೆಲಸ ಮಾಡಿದ ಗುತ್ತಿಗೆದಾರ ಏನು ಮಾಡಬೇಕು? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಗ್ರಾಮಚಾಯತಿಯ ನೌಕರರಿಗೆ ಸಂಬಳ ನೀಡಲೆಂದು ಪ್ರತಿ ವರ್ಷ ೯೧೨ ಕೋಟಿ ರೂಗಳನ್ನು ನೀಡುವ ನಿರ್ಧಾರ ತೆಗೆದುಕೊಂಡೆವು. ಅದರಿಂದ ಸಾವಿರಾರು ನೌಕರರಿಗೆ ಅನುಕೂಲವಾಯ್ತು. ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವಧನ ಹೆಚ್ಚಿಸುವ ಮಾತನ್ನು ಬಿಜೆಪಿಯವರು ಆಡುತ್ತಿದ್ದಾರೆ. ಅದು ಇವರು ಮಾಡುವುದಿಲ್ಲ. ನಮ್ಮ ಪಕ್ಷಕ್ಕೆ ಮಾತ್ರ ಅಂಥ ಬದ್ಧತೆ ಇರುವುದು.
ಪುಣ್ಯಾತ್ಮ ಅಂತ ಇದ್ದರೆ ಅದು ಮನಮೋಹನ್ ಸಿಂಗ್ ಮಾತ್ರ. ಮೋದಿಯವರಲ್ಲ..
೨೦೧೪ ಕ್ಕಿಂತ ಮೊದಲು ಗ್ರಾಮ ಪಂಚಾಯತ್ ಗಳಿಗೆ ನೇರವಾಗಿ ಒಂದು ರೂಪಾಯಿಯೂ ಬರುತ್ತಿರಲಿಲ್ಲ. ನರೇಂದ್ರ ಮೋದಿ ಎಂಬ ಪುಣ್ಯಾತ್ಮ ಬಂದ ಮೇಲೆ ಗ್ರಾಮ ಪಂಚಾಯತಿಗಳಿಗೆ ದುಡ್ಡು ಬಂತು ಅಂತ ಬಿಜೆಪಿಯ ಅಧ್ಯಕ್ಷರು ಇತ್ತೀಚೆಗೆ ಕಲ್ಬುರ್ಗಿಯಲ್ಲಿ ಹೇಳಿದ್ದರು. ಇದೂ ಕೂಡ ದೊಡ್ಡ ಸುಳ್ಳು. ಗ್ರಾಮ ಪಂಚಾಯತಿಗಳಿಗೆ ಹಣ ಬರಲು ಪ್ರಾರಂಭಿಸಿದ್ದು ಮನಮೋಹನ್ಸಿಂಗ್ ರವರು ನರೇಗಾ ಯೋಜನೆ ಪ್ರಾರಂಭಿಸಿದ ಮೇಲೆ.
ನರೇಗಾ ಯೋಜನೆ ಸೆಪ್ಟೆಂಬರ್ ೨೦೦೫ ರಲ್ಲಿ ಜಾರಿಗೆ ಬಂತು. ಅಧಿಕೃತವಾಗಿ ಫೆಬ್ರವರಿ ೨೦೦೬ ರ ಫೆಬ್ರವರಿಯಿಂದ ಅಸ್ತಿತ್ವಕ್ಕೆ ಬಂತು. ಇದು ಮನಮೋಹನಸಿಂಗ್ ಅವರ ಯುಪಿಎ ಸರ್ಕಾರದ ಕೊಡುಗೆ. ಹಾಗೆ ನೋಡಿದರೆ ಪುಣ್ಯಾತ್ಮ ಅಂತ ಇದ್ದರೆ ಅದು ಮನಮೋಹನ್ ಸಿಂಗ್ ಮಾತ್ರ. ಮೋದಿಯವರಲ್ಲ ಎಂದು ಸಿದ್ಧರಾಮಯ್ಯ ಟಾಂಗ್ ನೀಡಿದರು.
ನರೇಗಾ ಯೋಜನೆಯನ್ನು ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿಯವರು ನಖ ಶಿಖಾಂತ ವಿರೋಧಿಸಿದ್ದರು, ೨೦೧೫ರ ವರೆಗೂ ಗೇಲಿ ಮಾಡುತ್ತಲೆ ಇದ್ದರು. ವಿರೋಧ ಮಾಡಿದವರು, ಜನಪರವಾದ ಒಂದು ಯೋಜನೆಯನ್ನು ಹಂಗಿಸಿದವರು ಹೇಗೆ ಪುಣ್ಯಾತ್ಮರಾಗುತ್ತಾರೆ?
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು ೩ ಕೋಟಿಗೂ ಹೆಚ್ಚು ಜನ ಬಿಪಿಎಲ್ ಕಾರ್ಡುದಾರರಿದ್ದಾರೆ. ಅದರಲ್ಲಿ ಒಂದು ಕೋಟಿ ಜನರಿಗೆ ೧೦೦ ಮಾನವ ದಿನಗಳಷ್ಟು ಕೆಲಸ ಕೊಟ್ಟರೆ ೧೦೦ ಕೋಟಿ ಮಾನವ ದಿನಗಳ ಗುರಿ ನೀಡಬೇಕಾಗುತ್ತದೆ. ಆದರೆ ರಾಜ್ಯಕ್ಕೆ ೧೩ ಕೋಟಿ ಮಾನವ ದಿನಗಳ ಗುರಿಯನ್ನು ನೀಡಲಾಗುತ್ತಿದೆ.
ಇದು ಕೇವಲ ೧೩ ಲಕ್ಷ ಜನರಿಗೆ ಮಾತ್ರ ಸಾಕಾಗುತ್ತಿದೆ. ರಾಜ್ಯದಲ್ಲಿ ಈಗಾಗಾಲೆ ಸೆಪ್ಟೆಂಬರ್ ಅಂತ್ಯದ ವೇಳೆಗಾಗಲೆ ಈ ಟಾರ್ಗೆಟ್ ಮುಗಿದು ಹೋಗಿದೆ. ಆರ್ಥಿಕ ವರ್ಷ ಮುಗಿಯಲು ಇನ್ನೂ ಆರು ತಿಂಗಳಿದ್ದಾಗಲೆ ಟಾರ್ಗೆಟ್ ಮುಗಿದು ಹೋಗಿದೆ. ಬೊಮ್ಮಾಯಿಯವರು ಸುಳ್ಳು ಹೇಳಿಕೊಂಡು ಓಡಾಡುವ ಬದಲು ಡೆಲ್ಲಿಗೆ ಹೋಗಿ ನರೇಗಾ ಯೋಜನೆಗೆ ಬೇಡಿಕೆ ಆಧಾರಿತವಾಗಿ ಹೊಸ ಟಾರ್ಗೆಟ್ ತರಲಿ. ಇದನ್ನು ಮಾಡದೆ ರಾಜ್ಯದ ಜನರಿಗೆ ಟೋಪಿ ಹಾಕಿಕೊಂಡು ಓಡಾಡಿದರೆ ರಾಜ್ಯದ ಜನರಿಗೇನು ಲಾಭ. ಮೋದಿಯವರು ಸಂಸದರ ಆದರ್ಶ ಗ್ರಾಮ ಎಂದು ಯೋಜನೆ ಘೋಷಿಸಿದರು. ಅದೂ ಸಹ ಇನ್ನೂ ಪೇಪರ್ ಮೇಲೆ ಇದೆ.
ಬೊಮ್ಮಾಯಿಯವರು ಇನ್ನೂ ಒಂದು ಮಾತನ್ನು ಹೇಳಿದ್ದಾರೆ. ಕಾಂಗ್ರೆಸ್ ವಯಸ್ಸಾದ ಪಕ್ಷ ಅದನ್ನು ವಿಸರ್ಜಿಸಬೇಕು ಅಂದಿದ್ದಾರೆ. ಅವರಿಗೆ ತಿಳಿಸಬಯಸುತ್ತೇನೆ. ಪಕ್ಷಗಳು ಸಿಂಬಲ್ ಮೇಲೆ ಮಾತ್ರ ನಿಂತಿರುವುದಿಲ್ಲ. ಸಿದ್ಧಾಂತಗಳ ಮೇಲೆ ನಿಂತಿರುತ್ತವೆ. ಬಿಜೆಪಿಯವರ ಸಿದ್ಧಾಂತ ಯಾವುದು? ಮನುವಾದ ಅಲ್ಲವೆ? ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ಈ ಸಿದ್ಧಾಂತವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನವು ಸಂಪೂರ್ಣ ಅಳಿಸಿ ಹಾಕಿದೆ. ಸಮಾನತೆ, ಭ್ರಾತೃತ್ವ, ನ್ಯಾಯ, ಸಾಮಾಜಿಕ ನ್ಯಾಯ, ಸರ್ವೋದಯ ತತ್ವ ಮುಂತಾದವುಗಳು ನಮ್ಮ ಸಂವಿಧಾನದ ಪ್ರಮುಖ ಆಶಯಗಳು. ಕನಿಷ್ಠ ಎರಡೂವರೆ ಸಾವಿರ ವರ್ಷಗಳಷ್ಟು ಓಬೀರಾಯನ ಕಾಲದ ಮನುವಾದವನ್ನು ಅಳವಡಿಸಿಕೊಂಡ ಬಿಜೆಪಿಯನ್ನು ವಿಸರ್ಜಿಸಬೇಕೋ, ಸಾಮಾಜಿಕ ನ್ಯಾಯವನ್ನು ಸಿದ್ದಾಂತವಾಗಿಸಿಕೊಂಡ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೊ ಎಂದು ಬೊಮ್ಮಾಯಿಯವರೇ ಹೇಳಲಿ ಎಂದು ತಿರುಗೇಟು ನೀಡಿದರು.
ಈ ಕಾಲಕ್ಕೆ ಹೊಂದಿಕೆಯಾಗದ ಪಳಿಯುಳಿಕೆಯಂಥ ಸಿದ್ಧಾಂತವನ್ನು ಹೊತ್ತುಕೊಂಡು ಓಡಾಡುತ್ತಿರುವ ಬಿಜೆಪಿಯನ್ನು ವಿಸರ್ಜನೆ ಮಾಡಬೇಕೆ ಹೊರತು ಯುಗಧರ್ಮದ ಜೊತೆ ಹೆಜ್ಜೆ ಹಾಕುತ್ತಿರುವ ಕಾಂಗ್ರೆಸ್ ಪಕ್ಷವನ್ನಲ್ಲ.
ಬಾಬಾ ಸಾಹೇಬರು ಮನು ಸಿದ್ಧಾಂತವನ್ನು ತಿರಸ್ಕರಿಸಿ ಬೌದ್ಧರಾಗಿ ಪರಿನಿಬ್ಬಾಣಗೊಂಡ ಪವಿತ್ರ ದಿನ ಇಂದು. ಅವರು ಯಾಕೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದು ಇತಿಹಾಸದ ಪುಟಗಳನ್ನು ತಿರುವಿ ನೋಡಿ. ಸತ್ಯ ನಿಮಗೆ ತಿಳಿಯುತ್ತದೆ.
ನೀವು ಕೂಡ ಮನುಷ್ಯ ವಿರೋಧಿಯಾದ ಮನು ಸಿದ್ಧಾಂತವನ್ನು ತೊರೆದು ಹೊರ ಬನ್ನಿ. ಕನಿಷ್ಟ ಪಕ್ಷ ಸುಳ್ಳು ಹೇಳುವುದನ್ನು ನಿಲ್ಲಿಸಿ. ಕಳಬೇಡ, ಕೊಲಬೇಡ, ಹುಸಿಯ ನಡಿಯಲು ಬೇಡ ಎಂದ ಬಸವಣ್ಣನವರ ತತ್ವವನ್ನು ಹಾಗೂ ಬಾಬಾ ಸಾಹೇಬರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಸಿದ್ಧರಾಮಯ್ಯ ಆಗ್ರಹಿಸಿದರು.
Key words: Former CM-Siddaramaiah-tong-cm-basavaraj bommai