ಮೈಸೂರು,ಡಿಸೆಂಬರ್,1,2021(www.justkannada.in): ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇತ್ತೀಚೆಗೆ ಹಲವು ಬಾರಿ ಭೂ ಕುಸಿತವಾಗಿದ್ದು, ಭೂ ಕುಸಿತ ಸ್ಥಳದಲ್ಲಿ ಮುಂದೆ ಕೈಗೊಳ್ಳಬೇಕಾದ ಪರ್ಯಾಯ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಸಲುವಾಗಿ ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯು ಸ್ವಯಂ ಪ್ರೇರಿತವಾಗಿ ವರದಿ ಸಿದ್ಧಪಡಿಸಿದೆ.
ತಾವು ಸ್ವಯಂಪ್ರೇರಿತವಾಗಿ ಸಿದ್ಧಪಡಿಸಿದ ವರದಿಯನ್ನ ಇಂದು ಮೈಸೂರು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಗೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯ ಸದಸ್ಯರು ಸಲ್ಲಿಸಿದರು.
ನಿವೃತ್ತ ಮೇಜರ್ ಜನರಲ್ ಎಸ್ ಜಿ ಒಂಬತ್ಕೆರೆ, ಎಂ ಲಕ್ಷ್ಮಣ್ ಸೇರಿದಂತೆ ಇತರ ಸದಸ್ಯರನ್ನು ಒಳಗೊಂಡ ನಿಯೋಗ 7 ಪುಟಗಳ ವರದಿ ಸಲ್ಲಿಕೆ ಮಾಡಿದೆ. ತಂಡ ಘಟನಾ ಸ್ಥಳಕ್ಕೆ ತೆರಳಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿತ್ತು.
ಚಾಮುಂಡಿ ಬೆಟ್ಟದಲ್ಲಿರುವ ನಂದಿ ಬಳಿಗೆ ತೆರಳಲು ಪರ್ಯಾಯ ಮಾರ್ಗಗಳಿವೆ. ತಾವರೆಕಟ್ಟೆ ಬಳಿಯಿಂದ ಹಾಗೂ ಮೆಟ್ಟಿಲುಗಳ ಮಾರ್ಗವಾಗಿಯೂ ನಂದಿ ಬಳಿಗೆ ತೆರಳಬಹುದು. ಹಾಗಾಗಿ ಭೂ ಕುಸಿತ ಆಗಿರುವ ರಸ್ತೆಯನ್ನು ಟ್ರಕ್ಕಿಂಗ್ ಟ್ಯ್ರಾಕ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಮತ್ತೆ ವಾಹನಗಳ ಓಡಾಟಕ್ಕೆ ಅವಕಾಶ ನೀಡಬಾರದು. ಅಲ್ಲದೇ ರಸ್ತೆ ಪುನರ್ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಬೇಕಾಗಿದೆ. ಪುನರ್ ನಿರ್ಮಾಣ ಮಾಡಿದರೂ ಮತ್ತೆ ಮಳೆ ಬಂದಾಗ ಕುಸಿಯುವ ಸಾಧ್ಯತೆಯಿದೆ. ಹೀಗೆ ಮೊದಲಾದ ಪ್ರಮುಖ ವಿಷಯಗಳನ್ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಗೆಯೇ ರಸ್ತೆ ಪುನರ್ ನಿರ್ಮಾಣ ವಿಚಾರದಲ್ಲಿ ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯನ್ನು ಕೂಡ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿದೆ.
Key words: Land fall- case – Chamundi hill-Institute of Engineers- reports – mysore-DC