ಬೆಂಗಳೂರು:ಜೂ-30: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜು.5ರಂದು ಆಯವ್ಯಯ ಮಂಡಿಸಲಿದ್ದು, ಕರ್ನಾಟಕದ ಜನತೆ ರಾಜ್ಯಕ್ಕೇನು ಕೊಡುಗೆ ಸಿಗಲಿದೆ ಎಂಬ ಬಗ್ಗೆ ಕಾತರರಾಗಿದ್ದಾರೆ. ಈ ನಿಟ್ಟಿನಲ್ಲಿ ‘ನಮಗೇನು ಬೇಕು?’ ಎಂಬ ಆಶಯವನ್ನು ವಿಜಯವಾಣಿ ಮೂಲಕ ವಿವಿಧ ವಿಷಯತಜ್ಞರು ಹಂಚಿಕೊಂಡಿದ್ದಾರೆ.
ರಾಜ್ಯದ ಜನತೆಯ ಬೇಡಿಕೆಯನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೇ ತಲುಪಿಸುವ ನಿಟ್ಟಿನಲ್ಲಿ ‘ಬಜೆಟ್ ನಿರೀಕ್ಷೆ, ಜನರ ಅಪೇಕ್ಷೆ’ ಎಂಬ ಶೀರ್ಷಿಕೆಯಡಿ ರಾಜ್ಯದ ನಂ. 1 ದಿನಪತ್ರಿಕೆ ವಿಜಯವಾಣಿ ವೇದಿಕೆ ಒದಗಿಸಿಕೊಟ್ಟಿದೆ. ಕೇಂದ್ರ ಬಜೆಟ್ನಲ್ಲಿ ತಂತಮ್ಮ ಜಿಲ್ಲೆಗಳಿಗೆ ಏನೇನು ಬೇಕು? ಎಂಥ ಅಭಿವೃದ್ಧಿ ಯೋಜನೆಗಳು ಬೇಕಾಗುತ್ತವೆ? ಯಾವ ಯೋಜನೆಗಳನ್ನು ತಂದರೆ ಯಾವುದಕ್ಕೆ ಅನುಕೂಲ ಎಂಬ ಬಗ್ಗೆ ಓದುಗರ ಸಹಿತ ವಿವಿಧ ಕ್ಷೇತ್ರಗಳ ತಜ್ಞರ ಅಭಿಪ್ರಾಯ ಹಾಗೂ ಸಲಹೆಗಳನ್ನು ವಿಜಯವಾಣಿ ಕೇಂದ್ರದ ಗಮನಕ್ಕೆ ತರಲಿದೆ.
ಆ ಪೈಕಿ ರೈತರ ಆದಾಯ ದುಪ್ಪಟ್ಟುಗೊಳಿಸುವ ಶಾಶ್ವತ ಯೋಜನೆ ಜಾರಿ ಮೂಲಕ ಸಾಲದ ಸುಳಿಯಲ್ಲಿರುವ ಅನ್ನದಾತನ ರಕ್ಷಣೆ, ತುಂಗಭದ್ರ ಜಲಾಶಯ, ಮಹದಾಯಿಯಂಥ ಅಂತಾರಾಜ್ಯ ನೀರಿನ ಸಮಸ್ಯೆಗೆ ಎಲ್ಲ ರಾಜ್ಯಗಳಿಗೂ ಒಪ್ಪಿತವಾಗುವಂಥ ಪರಿಹಾರ ಸೂತ್ರ ಕಂಡುಕೊಳ್ಳುವುದು, ರೈತರಿಗೆ ‘ಬಾವಾಂತರ ಯೋಜನೆ’ ಜಾರಿ, ಮೈಸೂರಿನಲ್ಲಿ ಜಾನಪದ ಕಲೆಗಳ ಪ್ರದರ್ಶನಕ್ಕೆ ವೇದಿಕೆ, ಹಾಸನ ವಿಮಾನ ನಿಲ್ದಾಣ ಕಾಮಗಾರಿ ವೇಗಕ್ಕೆ ಒತ್ತು ನೀಡಬೇಕೆಂಬ ಬೇಡಿಕೆಗಳು ಬಂದಿವೆ. ಅಲ್ಲದೆ, ಐತಿಹಾಸಿಕ ಗೋಳಗುಮ್ಮಟ ಸೇರಿ 80ಕ್ಕೂ ಅಧಿಕ ಸ್ಮಾರಕಗಳಿರುವ ವಿಜಯಪುರವನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಬೇಕು, ರಾಜ್ಯದ ಪ್ರಮುಖ ಸಾರ್ವಜನಿಕ ಉದ್ದಿಮೆ ವಿಐಎಸ್ಎಲ್ ಉಳಿಸಿಕೊಂಡು ಅದರ ಪುನಶ್ಚೇತನಕ್ಕೆ ಬಜೆಟ್ನಲ್ಲಿ ಪ್ರಾಮುಖ್ಯತೆ ನೀಡಬೇಕು. ಭೌಗೋಳಿಕವಾರು ಹವಾಮಾನಕ್ಕೆ ಅನುಗುಣವಾದ ಬೆಳೆ ಪದ್ಧತಿ ಜಾರಿಗೆ ತರಬೇಕು. ಈವರೆಗೂ ಬೆಳೆವಾರು ಅರ್ಥಶಾಸ್ತ್ರ ರಚನೆಯಾಗಿಲ್ಲ, ಅರ್ಥಶಾಸ್ತ್ರದ ಮೂಲಕ ಬೆಳೆಗಳಿಗೆ ಶಾಸನಬದ್ಧ ಸ್ಥಾನಮಾನ ನೀಡಬೇಕು. ತೆಲಂಗಾಣದಲ್ಲಿ 66 ವಿಶೇಷ ಆರ್ಥಿಕ ವಲಯಗಳಿದ್ದು, ಹೈಕ ಭಾಗಕ್ಕೆ ವಿಶೇಷ ಆರ್ಥಿಕ ವಲಯ ಘೊಷಿಸಬೇಕು ಎಂಬ ಅತ್ಯುತ್ತಮ ಸಲಹೆಗಳೂ ವ್ಯಕ್ತವಾಗಿವೆ. ಇವುಗಳಲ್ಲಿ ಆಯ್ದ ಸಲಹೆ, ಬೇಡಿಕೆಗಳನ್ನು ಇಲ್ಲಿ ಪ್ರಕಟಿಸಿದ್ದು, ಸಂಪೂರ್ಣ ಸಂಗ್ರಹವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಪ್ರಮುಖ ಬೇಡಿಕೆಗಳು
ಯಾದಗಿರಿ ಸೇರಿ ರಾಜ್ಯದ ಕೆಲವು ಜಿಲ್ಲೆಗಳ ರೈತರು ಗುಳೆ ಹೋಗುವು ದನ್ನು ತಪ್ಪಿಸಲು ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು.
ಪಶ್ಚಿಮಘಟ್ಟಗಳ ಸಂರಕ್ಷಣೆಗಾಗಿ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರಗಳನ್ನೂ ವಿಶ್ವಾಸಕ್ಕೆ ಪಡೆದು ಬಜೆಟ್ನಲ್ಲಿ ಸಮಗ್ರ ನೀತಿ ರೂಪಿಸಬೇಕು.
ಬರಕ್ಕೆ ತುತ್ತಾಗುತ್ತಿರುವ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕೊಯ್ಲು ಸೇರಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಯೋಜನೆ ಹಾಗೂ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಒತ್ತು ನೀಡುವುದು.
ಅಂತಾರಾಜ್ಯ ಮಟ್ಟದಲ್ಲಿ ಕಾಡುತ್ತಿರುವ ಕೆಎಫ್ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ತಡೆಗಟ್ಟಲು ಅನುದಾನದ ಜತೆಗೆ ಯೋಜನೆ ಕೈಗೊಳ್ಳುವುದು.
ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆಗಳ ಆರ್ಥಿಕ ಬೆನ್ನೆಲುಬಾದ ಕಾಫಿ-ಅಡಕೆ ಬೆಳೆಗೆ ಪೂರಕ ಯೋಜನೆ ಜಾರಿಗೊಳಿಸಬೇಕು.
ಕಾಫಿ ಉದ್ಯಮ ಚೇತರಿಕೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು.
ಕಾಳುಮೆಣಸು ಬೆಳೆಯುವ ಪ್ರದೇಶಗಳಿಗೆ ಪೂರಕವಾಗುವಂತೆ ಪೆಪ್ಪರ್ ಪಾರ್ಕ್, ಜವಳಿ ಕ್ಷೇತ್ರಗಳ ಉತ್ತೇಜನಕ್ಕೆ ಜವಳಿ ಪಾರ್ಕ್ಗಳನ್ನು ಪ್ರದೇಶವಾರು ಸ್ಥಾಪಿಸಲು ಕ್ರಮಕೈಗೊಳ್ಳಬೇಕು.
ಕೆಜಿಎಫ್ನಲ್ಲಿರುವ 12 ಸಾವಿರ ಎಕರೆ ಚಿನ್ನದ ಪ್ರದೇಶವನ್ನು ಆರ್ಥಿಕಾಭಿವೃದ್ಧಿ ವಲಯವಾಗಿ ಘೊಷಿಸಿ ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಶಾಶ್ವತ ಯೋಜನೆ ಜಾರಿಗೆ ತರಬೇಕು.
ತುಮಕೂರಿನ ತಿಪಟೂರಿನಲ್ಲಿ ಜಾಗತಿಕ ಮಟ್ಟದ ‘ಕೊಬ್ಬರಿ ಸಂಶೋಧನಾ ಕೇಂದ್ರ’ ಸ್ಥಾಪಿಸಬೇಕು.
ತುಮಕೂರು ಇಂಡಸ್ಟ್ರಿಯಲ್ ಸ್ಮಾರ್ಟ್ ಸಿಟಿ, ಮುಂಬೈ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ ಯೋಜನೆಗಳ ಮೂಲಕ ಕೈಗಾರಿಕೆಗೆ ಒತ್ತು ಕೊಡಬೇಕು.
ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದೇಶೀಯ ರೇಷ್ಮೆ ಉತ್ಪಾದನೆಗೆ ಉತ್ತೇಜನ ನೀಡಬೇಕು.
ಉಗಿಬಂಡಿಗಾಗಿ ಬೇಡಿಕೆಗಳ ದಂಡಿ
ರಾಜ್ಯದಲ್ಲಿನ ಸಮೂಹ ಸಾರಿಗೆ ಹಾಗೂ ಸರಕು ಸಾಗಣೆಗೆ ದೊಡ್ಡ ಪ್ರಮಾಣದಲ್ಲಿ ನೆರವಾಗುವಂಥದ್ದೆಂದರೆ ರೈಲು. ಹೀಗಾಗಿ ರೈಲು ಕ್ಷೇತ್ರದ ಕುರಿತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಹಳಷ್ಟು ಬೇಡಿಕೆಗಳು ಬಂದಿವೆ. ಅದರಲ್ಲೂ ಘೋಷಣೆಯಾಗಿ ವರ್ಷಗಳ ಕಾಲ ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕ್ಷಿಪ್ರಗತಿಯಲ್ಲಿ ಮುಗಿಸುವ, ರೈಲು ನಿಲ್ದಾಣಗಳನ್ನು ಸುಸಜ್ಜಿತಗೊಳಿಸುವ, ಪ್ಲಾ್ಯಟ್ಫಾಮರ್್ಗಳನ್ನು ಹೆಚ್ಚಿಸುವ ಹಾಗೂ ಹೊಸ ರೈಲು ಮಾರ್ಗಗಳನ್ನು ಆರಂಭಿಸುವ ಕುರಿತ ಬೇಡಿಕೆಗಳೇ ಹೆಚ್ಚಿವೆ. ಕರಾವಳಿ ಮತ್ತು ಬಯಲುಸೀಮೆಯನ್ನು ಬೆಸೆಯುವ ಮಹತ್ವದ ಯೋಜನೆಯಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನನೆಗುದಿಗೆ ಬಿದ್ದು 20 ವರ್ಷಗಳಾಗಿವೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಪರಿಸರ ಹಾನಿ ಗರಿಷ್ಠ ಮಟ್ಟದಲ್ಲಿ ತಪ್ಪಿಸಿ ರೈಲುಮಾರ್ಗ ನಿರ್ವಿುಸಿ ಎಂದು ಒತ್ತಾಯಿಸಿ ಹಲವು ಬೇಡಿಕೆಗಳು ಬಂದಿವೆ. ಧಾರವಾಡ-ಬೆಳಗಾವಿ ನೇರ ರೈಲುಮಾರ್ಗ ಮಂಜೂರಾಗಿದ್ದರೂ ಅನುಷ್ಠಾನಗೊಂಡಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
ಬೆಂಗಳೂರು-ಚಾಮರಾಜನಗರ ರೈಲ್ವೆ ಯೋಜನೆಗೆ 10 ವರ್ಷಗಳ ಹಿಂದೆ ಅನುಮೋದನೆ ಸಿಕ್ಕಿ, ಸರ್ವೆ ಕೂಡ ಮುಗಿದಿದೆ. ಅಂದಾಜು ವೆಚ್ಚ 1334 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರವೇ ಭೂಸ್ವಾಧೀನ ಮಾಡಿಕೊಡಬೇಕೆಂಬ ಕೇಂದ್ರ ಸರ್ಕಾರದ ಸೂಚನೆ ಇರುವುದರಿಂದ ಯೋಜನೆ ಪೂರ್ಣಗೊಂಡಿಲ್ಲ. ಭೂಸ್ವಾಧೀನ ಪ್ರಕ್ರಿಯೆಗೆ ಇರುವ ಅಡ್ಡಿ ನಿವಾರಿಸಿ ಈ ಯೋಜನೆ ತ್ವರಿತವಾಗಿ ಮುಗಿಸಬೇಕು ಎಂಬ ಬೇಡಿಕೆ ಬಂದಿದೆ. ಕೋಲಾರ ಜಿಲ್ಲೆಗೆ ರೈಲ್ವೆ ಕೋಚ್ ಘಟಕ ಮಂಜೂರಾಗಿ 5 ವರ್ಷಗಳಾದರೂ ನಿರ್ಮಾಣ ಆರಂಭವಾಗಿಲ್ಲ. ಈ ಯೋಜನೆ ಅನುಷ್ಠಾನ ಸಾಧ್ಯವೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿ ಗೊಂದಲ ನಿವಾರಿಸಬೇಕು ಎಂದು ಜನತೆ ಒತ್ತಾಯಿಸಿದ್ದಾರೆ. ಉಳಿದಂತೆ ರೈಲ್ವೆ ಸಂಬಂಧಿತ ಇತರ ಬೇಡಿಕೆಗಳ ಸಂಕ್ಷಿಪ್ತ ವಿವರ ಇಂತಿದೆ.
ಗದಗ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಿಸಿ, ಸುಸಜ್ಜಿತ ಗೂಡ್ಸ್ಶೆಡ್ ನಿರ್ವಿುಸಬೇಕು. ಪ್ಲಾಟ್ಫಾರಂ ಸಂಖ್ಯೆ ಹೆಚ್ಚಿಸಬೇಕು. ಗದಗ-ಯಲವಗಿ, ಗದಗ-ವಾಡಿ, ಹೊಸಪೇಟೆ- ಕೊಟ್ಟೂರ-ಹರಿಹರ ಹೊಸ ರೈಲು ಮಾರ್ಗ ಆರಂಭಿಸಬೇಕು. ಹೊಸ ರೈಲುಗಳಾದ ಹುಬ್ಬಳ್ಳಿ-ಚೆನ್ನೈ, ಹುಬ್ಬಳ್ಳಿ-ಬೆಂಗಳೂರು ಇಂಟರ್ಸಿಟಿ ಹಾಗೂ ಪುಣೆ-ವಿಜಯಪುರ-ತಿರುಪತಿ ರೈಲನ್ನು ಗದಗ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಬೇಕು. ವಾಸ್ಕೋ-ವಿಜಯಪುರ, ಹುಬ್ಬಳ್ಳಿ-ಸೊಲ್ಲಾಪುರ ಹಾಗೂ ಗದಗ-ಹುಬ್ಬಳ್ಳಿ-ಪುಣೆ ಇಂಟರ್ಸಿಟಿ ರೈಲು ಆರಂಭಿಸಬೇಕು.
ಭೂಸ್ವಾಧೀನ ವಿಳಂಬದಿಂದ ಕುಂಟುತ್ತಿರುವ ತುಮಕೂರು-ದಾವಣಗೆರೆ ರೈಲು ಮಾರ್ಗ ಬೇಗ ನಿರ್ವಿುಸಬೇಕು. ದಾವಣಗೆರೆ ಅಶೋಕ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ವಣಕ್ಕೆ ಕೇಂದ್ರ ಸರ್ಕಾರ 35 ಕೋಟಿ ರೂ. ಮಂಜೂರು ಮಾಡಿದ್ದರೂ ಇನ್ನೂ ಕಾರ್ಯಗತವಾಗಿಲ್ಲ.
ಮುನಿರಾಬಾದ್-ಮೆಹಬೂಬ್ನಗರ, ಗದಗ-ವಾಡಿ, ಕೊಪ್ಪಳ-ಆಲಮಟ್ಟಿ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿ ಬೇಗ ಪೂರ್ಣಗೊಳಿಸಬೇಕು.
ಚಿಕ್ಕಮಗಳೂರಿಗೆ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಕಲ್ಪಿಸಬೇಕು. ಚಿಕ್ಕಬಳ್ಳಾಪುರ-ಬಾಗೇಪಲ್ಲಿ-ಪುಟ್ಟಪರ್ತಿ, ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ರೈಲು ಸಂಚಾರ ಅಭಿವೃದ್ಧಿ. ಬೆಂಗಳೂರು-ಚಿಕ್ಕಬಳ್ಳಾಪುರ-ಶಿಡ್ಲಘಟ್ಟ-ಚಿಂತಾಮಣಿ-ಶ್ರೀನಿವಾಸಪುರ ಮಾರ್ಗದ ರೈಲ್ವೆ ವ್ಯವಸ್ಥೆ ಮದನಪಲ್ಲಿಗೆ ವಿಸ್ತರಣೆ. ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಮನೆ ಕಳೆದುಕೊಳ್ಳುತ್ತಿರುವ ಅಂಬೇಡ್ಕರ್ ಕಾಲನಿಯ 210 ಕುಟುಂಬಗಳಿಗೆ ಪುನರ್ವಸತಿ ಸೌಲಭ್ಯ ಒದಗಿಸಬೇಕು.
ಧಾರವಾಡದಿಂದ ಬೆಳಗಾವಿವರೆಗೆ ಹೆದ್ದಾರಿಗೆ ಹೊಂದಿಕೊಂಡು ರೈಲ್ವೆ ಮಾರ್ಗ ನಿರ್ವಿುಸಿ, ಅದನ್ನು ಮಹಾರಾಷ್ಟ್ರದ ಕರಾಡ್ವರೆಗೆ ವಿಸ್ತರಿಸಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಭೂಮಿ ನೀಡಬೇಕು, ಕೇಂದ್ರ ರೈಲ್ವೆ ಮಾರ್ಗ ನಿರ್ವಿುಸಬೇಕು ಎಂದು ನಿರ್ಣಯವಾಗಿತ್ತಾದರೂ, ನಂತರ ನನೆಗುದಿಗೆ ಬಿದ್ದಿದೆ.
ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಮಹಾರಾಷ್ಟ್ರ- ಗೋವಾದಿಂದ ಬರುವ ಲಕ್ಷಾಂತರ ಭಕ್ತರಿಗೆ ಅನುಕೂಲ ಆಗುವಂತೆ ರೈಲ್ವೆ ಮಾರ್ಗ ನಿರ್ವಿುಸಬೇಕು. ಬೆಳಗಾವಿ ನಿಲ್ದಾಣದಲ್ಲಿ ಪ್ಲ್ಯಾಟ್ಫಾಮ್ರ್ 4ಕ್ಕೆ ಹೆಚ್ಚಿಸಬೇಕು.
ಬೆಳಗಾವಿಯಲ್ಲಿ ರೈಲ್ವೆ ವಾಷಿಂಗ್ ಘಟಕ ಪ್ರಾರಂಭಿಸಿ, ಲೋಕೋಮೋಟಿವ್ ಶೆಡ್ ನಿರ್ವಿುಸಬೇಕು. ಬೆಳಗಾವಿ ಯಿಂದ ಕರಾವಳಿಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕು.
ಹತ್ತು ವರ್ಷಗಳ ಹಿಂದೆ ಸಮೀಕ್ಷೆ ನಡೆದಿರುವ ಬೀದರ್- ನಾಂದೇಡ್ (ವಯಾ ಔರಾದ್, ದೇಗಲೂರ) ರೈಲು ಮಾರ್ಗ ಕಾಮಗಾರಿಗೆ ಬೇಗ ಚಾಲನೆ ಕೊಡಬೇಕು.
ಬಾಗಲಕೋಟೆ-ಕುಡಚಿ ರೈಲು ಯೋಜನೆ ಆಮೆಗತಿಯಲ್ಲಿ ಸಾಗುತ್ತಿದ್ದು, ಚುರುಕು ಮುಟ್ಟಬೇಕಿದೆ.
ನನೆಗುದಿಗೆ ಬಿದ್ದಿರುವ ಪಾಂಡವಪುರ-ತುಮಕೂರು, ಮದ್ದೂರು-ಚಾಮರಾಜನಗರ ರೈಲು ಮಾರ್ಗ ಯೋಜನೆ ಸಾಕಾರಗೊಳಿಸಬೇಕು.
ಯಶವಂತಪುರ- ಹುಬ್ಬಳ್ಳಿ-ಗದಗ ಮೂಲಕ ದೆಹಲಿಗೆ ಸಂಚರಿಸುವ ರೈಲು ಮತ್ತು ಸದ್ಯ ಚಲಿಸುತ್ತಿರುವ ಹುಬ್ಬಳ್ಳಿ- ವಿಜಯಪುರ ಪ್ರಯಾಣಿಕರ ರೈಲನ್ನು ಕಾಯಂ ಓಡಿಸಬೇಕು.
| ಮಲ್ಲಿಕಾರ್ಜುನ ಸುರಕೋಡ, ಅಧ್ಯಕ್ಷರು, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ.
ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಬೇಗ ನಿರ್ವಿುಸಿದರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಕೈಗಾರಿಕೆ, ಜೀವನಮಟ್ಟ ಹೆಚ್ಚುತ್ತದೆ.
| ಡಾ. ಎಸ್.ಡಿ. ನಾಯ್ಕ, ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರು, ಕಾರವಾರ
ರಾಣೆಬೆನ್ನೂರ- ಶಿಕಾರಿಪುರ, ಯಲವಿಗಿ- ಗದಗ ರೈಲು ಮಾರ್ಗ ನಿರ್ವಿುಸಬೇಕು. ಗದಗ- ಯಲವಿಗಿ ಮಾರ್ಗದ ಕಾಮಗಾರಿ ಬೇಗ ಆರಂಭಿಸಬೇಕು. ಬೆಂಗಳೂರು-ಹುಬ್ಬಳ್ಳಿ ಜೋಡಿ ಹಳಿ ಮಾರ್ಗದ ಕಾಮಗಾರಿ ತ್ವರಿತವಾಗಿ ಮಾಡಬೇಕು.
| ವಿ.ಪಿ. ಲಿಂಗನಗೌಡ್ರ, ಚೇರ್ಮನ್, ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ
ಮೈಸೂರಿನಲ್ಲಿ ಜಾನಪದ ಕಲೆಗಳ ಪ್ರದರ್ಶನಕ್ಕೆ ವೇದಿಕೆ ಸೃಷ್ಟಿಸಿ, ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು. ಜತೆಗೆ ಮೈಸೂರು, ಮಂಡ್ಯ, ಹಾಸನ, ಮತ್ತು ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ‘ಪ್ರವಾಸೋದ್ಯಮ ಪ್ರಾಧಿಕಾರ ರಚನೆ’ ಸ್ಥಾಪನೆಯ ಬಹುದಿನದ ಬೇಡಿಕೆ ಈಡೇರಿಸಬೇಕು. ರಾಜ್ಯದ 30 ಜಿಲ್ಲೆಗಳ ಪ್ರವಾಸಿಗಳ ತಾಣ, ಕಲೆ-ಸಂಸ್ಕೃತಿ ಪ್ರತಿರೂಪವನ್ನು ಮೈಸೂರಿನಲ್ಲಿ ಚಿತ್ರಿಸಬೇಕು. ಆಯಾ ಜಿಲ್ಲೆಯ ಸಾಂಪ್ರದಾಯಿಕ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸಬೇಕು.
| ಪ್ರೊ. ಕೆ.ಎಸ್. ನಾಗಪತಿ, ಪ್ರವಾಸೋದ್ಯಮ ತಜ್ಞ
ಕೃಪೆ:ವಿಜಯವಾಣಿ