ಬಳ್ಳಾರಿ,ಅಕ್ಟೋಬರ್,28,2021(www.justkannada.in): ಜವಳಿ ಇಲಾಖೆಯಲ್ಲಿ 12 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ ಅವರು ಹೇಳಿದರು.
ನಗರದ ಜಿಪಂ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ವಿಭಾಗ (ಉತ್ತರ ವಲಯ) ಮಟ್ಟದ ಕೈಮಗ್ಗ ಮತ್ತು ಜವಳಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಢಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ್ಯಾಷನಲ್ ಹ್ಯಾಂಡಲೂಮ್ ಡೆವಲಪ್ಮೆಂಟ್ ಪ್ರೋಗ್ರಾಂ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ನಮ್ಮ ರಾಜ್ಯಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.
ರಾಜ್ಯದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 132 ಕೋಟಿ ರೂ.ಸಬ್ಸಿಡಿ ಹಣ ಅರ್ಹ ಫಲಾನುಭವಿಗಳಿಗೆ ನೀಡಿದ್ದು, ಪರಿಶಿಷ್ಟ ವರ್ಗಗಳ ಹೊರತುಪಡಿಸಿ 2020-21 ನೇ ಸಾಲಿನಲ್ಲಿ 121 ಕೋಟಿ ಸಾಲಮನ್ನಾ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮೆಗಾ ಟೆಕ್ಸ್ಟ್ಟೈಲ್ ಪಾರ್ಕ್ ಆರಂಭಕ್ಕೆ ಚಿಂತನೆ ನಡೆದಿದೆ ಎಂದರು.
ಜವಳಿ ಇಲಾಖೆಯು ನೇಕಾರ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ. ನ್ಯಾಷನಲ್ ಹ್ಯಾಂಡಲೂಮ್ ಡೆವಲಪ್ ಮೆಂಟ್ ಪ್ರೋಗ್ರಾಂ ಎಂಬ ಮಹತ್ವಾಕಾಂಕ್ಷಿ ಯೋಜನೆ ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಕೈಮಗ್ಗ ಮತ್ತು ಜವಳಿ ಇಲಾಖೆಗೆ ರೂ.10 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಿದ್ದು, ಇದರಿಂದ ಇಲಾಖೆಯ ಪುನಶ್ಚೇತನವಾಗಲಿದೆ ಎಂದರು.
ಜವಳಿ ಇಲಾಖೆ ಶೇ.90 ರಷ್ಟು ಸಬ್ಸಿಡಿ ನೀಡುವ ಮೂಲಕ ನೇಕಾರ ಸಮುದಾಯದ ನೆರವಿಗೆ ನಿಲ್ಲುವ ಕೆಲಸ ಮಾಡಲಾಗುತ್ತಿದೆ. ಸಮಾಜದ ಎಲ್ಲರಿಗೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಬ್ಸಿಡಿ ಹೆಚ್ಚಿಸಲಾಗಿದೆ. ಆಯುಷ್ಮಾನ ಯೋಜನೆಯ ಮುಖಾಂತರ ಬಿಪಿಎಲ್ ಪಡಿತರ ಚೀಟಿ ಹೊಂದಿದವರೆಗೆ ಉಚಿತ ಆರೋಗ್ಯ ಸೇವೆ ನಿಡಲಾಗುತ್ತದೆ. ಇದರ ಕುರಿತು ಹಲವರಿಗೆ ಮಾಹಿತಿಯ ಕೊರತೆಯಿದೆ. ಇದರ ಕುರಿತು ಅರಿವು ಮೂಡಿಸುವ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ 20 ರಿಂದ 30 ಯೋಜನೆಗಳಿದ್ದು,ಅವುಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಮೂಲಕ ನೇಕಾರ ಸಮುದಾಯದ ಕಟ್ಟ ಕಡೆಯ ವ್ಯಕ್ತಿಯ ಜೀವನ ಸುಧಾರಣೆಗೆ ಕ್ರಮಹಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಎಲ್ಲ ಕಬ್ಬುಬೆಳೆಗಾರರಿಗೆ ಹಣ ಬಿಡುಗಡೆ ಮಾಡಲಾಗಿದೆ. ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಈ ಹಿಂದೆ ಬಾಕಿ ಇರುವ ಹಣದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಗಿರೀಶ ಮೈಸೂರು, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ವಿಠ್ಠಲ್ ರಾಜು ಮತ್ತಿತರರು ಇದ್ದರು.
ನಂತರ ನಗರದ ಪೊಲೇಕ್ಸ್ ಜೀನ್ಸ್ ತಯಾರಿಕಾ ಘಟಕ ಮತ್ತು ವಾಶಿಂಗ್ ಯೂನಿಟ್ ಗೆ ಭೇಟಿ ನೀಡಿದ ಸಚಿವ ಮುನೇನಕೊಪ್ಪ ಅವರು ಪರಿಶೀಲನೆ ನಡೆಸಿ ಮಾಲೀಕರು ಹಾಗೂ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪೊಲೆಕ್ಸ್ ಹನುಮಂತಪ್ಪ,ಪೊಲೇಕ್ಸ್ ಮಲ್ಲಿಕಾರ್ಜುನ,ಸಚಿವರ ವಿಶೇಷ ಕರ್ತವ್ಯಾಧಿಕಾರಿ ಗಿರೀಶ ಮೈಸೂರು, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ವಿಠ್ಠಲ್ರಾಜು ಮತ್ತಿತರರು ಇದ್ದರು.
Key words: 12 lakh -job creation – textile -department- Minister- Shankar Patil Muneenakoppa