ಮೈಸೂರು,ನವೆಂಬರ್,2,2021(www.justkannada.in): ಜ್ಞಾನ ಎಂಬುದು ಈ ಪ್ರಕೃತಿ ನೀಡಿರುವ ಅದ್ಭುತ ಶಕ್ತಿ, ಇದಕ್ಕೆ ನಮ್ಮನ್ನು ನಾವು ಈಗಿನಿಂದಲೇ ಅರ್ಪಿಸಿಕೊಂಡು ಏನಾದರೂ ಒಂದು ಉತ್ತಮವಾದುದನ್ನು ಸಾಧಿಸಬೇಕು ಗುಣಮಟ್ಟದ ಜ್ಞಾನದಿಂದ ಎಲ್ಲೇ ಆದರೂ ಉಳಿವು ಸಾಧ್ಯ ಎಂದು ಕಲಬುರಗಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ ಎಸ್ ಆರ್ ನಿರಂಜನ ಅವರು ಅಭಿಪ್ರಾಯ ಪಟ್ಟರು.
ಮೈಸೂರಿನ ರೂಪನಗರದ ದೀಪಾ ಸಂಯುಕ್ತ ಪದವಿ ಪೂರ್ವ ಕಾಲೇಜು ಇಂದು ಆಯೋಜಿಸಿದ್ದ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನವು ಮನುಷ್ಯನ ಕೆಲಸವನ್ನು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿಯೂ ವಿದ್ಯಾರ್ಥಿಗಳು ಎಲ್ಲಿ ಅವಕಾಶ ಸಿಗುವುದೋ ಅಲ್ಲಿಯೇ ಏನಾದರೂ ಸಾಧಿಸಬೇಕೆಂಬ ಹಂಬಲ ನಿಮ್ಮದಾಗಬೇಕು. ವಿದ್ಯೆ ನಮ್ಮ ಮೂರನೇ ಕಣ್ಣಾಗಿದೆ, ಇದರಿಂದ ಸಮಾಜವನ್ನು ನೋಡುವ ವಿಶೇಷ ದೃಷ್ಟಿ ನಮ್ಮದಾಗಬೇಕು, ಇದರ ಪೋಷಣೆಯಲ್ಲಿ ವಿದ್ಯಾಸಂಸ್ಥೆಗಳ ಪಾತ್ರವೂ ಅಷ್ಟೇ ಮುಖ್ಯ ಎಂದು ತಿಳಿಸಿದರು.
ಮೊಬೈಲ್ ನಿಂದ ಎಷ್ಟೋ ಮಂದಿ ದಾರಿ ತಪ್ಪುತ್ತಿದ್ದಾರೆ ಎನ್ನುವ ಮನೋಭಾವ ಈಗ ಚರ್ಚಾಸ್ಪದ ವಿಷಯ. ಆದರೆ ವಿದ್ಯಾರ್ಥಿಗಳಾದ ನಾವು ನಮ್ಮ ಪೋಷಕರಲ್ಲಿ ನಾವು ಮೊಬೈಲ್ ಬಳಕೆಯಿಂದ ಒಳ್ಳೆಯದನ್ನಷ್ಟೇ ಕಲಿವೆವು ಎಂಬ ಶಪಥದೊಂದಿಗೆ ಅವರ ಮನವೊಲಿಸಿ. ಇಂದಿನ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಇವುಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಇದೇ ಸಂದರ್ಭದಲ್ಲಿ ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ರಾಮಪ್ಪ , ಕಾರ್ಯದರ್ಶಿ ಸುಬ್ಬರಾವ್ , ನಿರ್ದೇಶಕರಾದ ಸುಂದರ್, ಸದಾಶಿವ ಪೂಜಾರಿ , ದೀಪಾ ಪಿಯು ಕಾಲೇಜಿನ ಪ್ರಾಂಶುಪಾಲೆ ಪ್ರಣೀತ ಎರ್ಮಾಳ್ , ದೀಪಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Key words: knowledge- nature-mysore- Fresher’s Day- Pro SR Niranjana