ನವದೆಹಲಿ,ಡಿಸೆಂಬರ್,28,2021(www.justkannada.in): ಭಾರತದಲ್ಲಿ ಕೊವಿಡ್ 19 ವಿರುದ್ಧ ಹೋರಾಟವನ್ನು ಇನ್ನಷ್ಟು ಬಲಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಎರಡು ಲಸಿಕೆಗಳು ಮತ್ತು ಒಂದು ಔಷಧಿಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ.
ಹೊಸದಾಗಿ ಕಾರ್ಬೆವ್ಯಾಕ್ಸ್, ಕೊವಾವ್ಯಾಕ್ಸ್ ಕೊರೊನಾ ಲಸಿಕೆಗಳು ಮತ್ತು ಮೊಲ್ನುಪಿರವಿರ್ ಆಯಂಟಿ ವೈರಲ್ ಔಷಧಿಗಳ ತುರ್ತು ಮತ್ತು ನಿಯಂತ್ರಿತ ಬಳಕೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಅನುಮೋದನೆ ನೀಡಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಎರಡು ಲಸಿಕೆಗಳು ಮತ್ತು ಒಂದು ಔಷಧಿಯ ತುರ್ತು ಬಳಕೆಗೆ ಒಂದೇ ದಿನ ಅನುಮೋದನೆ ನೀಡಿದ್ದು ವಿಶೇಷವಾಗಿದೆ.
ಭಾರತದಲ್ಲಿ ಕೊವಾವ್ಯಾಕ್ಸ್, ಕಾರ್ಬೆವ್ಯಾಕ್ಸ್ ಲಸಿಕೆಗಳ ತುರ್ತು ಬಳಕೆಗೆ, ಷರತ್ತು ಬದ್ಧ ಅನುಮತಿ ನೀಡಬೇಕು ಎಂದು ಕೊವಿಡ್ 19 ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿತ್ತು. ಹಾಗೇ, ರೋಗದ ಅಪಾಯ ತೀವ್ರವಾಗಿದ್ದು, ಅಪಾಯದಲ್ಲಿರುವ ರೋಗಿಗಳ ಚಿಕಿತ್ಸೆಗೆ ಮೊಲ್ನುಪಿರವಿರ್ ಔಷಧ ತುರ್ತು ಬಳಕೆಗೆ ಅನುಮತಿ ನೀಡಬೇಕು ಎಂದೂ ಈ ಸಮಿತಿ ಹೇಳಿತ್ತು. ಈ ಶಿಫಾರಸ್ಸನ್ನು ಕೇಂದ್ರ ಆರೋಗ್ಯ ಸಚಿವಾಲಯ ಮಾನ್ಯ ಮಾಡಿದೆ. ಅಲ್ಲಿಗೆ ದೇಶದಲ್ಲಿ ಒಟ್ಟು 8 ಕೊರೊನಾ ಲಸಿಕೆಗಳು ತುರ್ತು ಬಳಕೆಗೆ ಅನುಮೋದನೆ ಪಡೆದಂತಾಗಿದೆ.
Key words: Central government -approves – urgent -use – carbavax vaccine – country.