ಬೆಂಗಳೂರು,ಜುಲೈ,20,2021(www.justkannada.in): ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ದ್ವಿತೀಯ ಪಿಯು ಫಲಿತಾಂಶವನ್ನ ಪ್ರಕಟಿಸಿದ್ದು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ.
ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೪,೫೦,೭೦೬ ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ. ೧,೪೭,೦೫೬ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ ೬೮,೭೨೯ ವಿದ್ಯಾರ್ಥಿಗಳು ಜಸ್ಟ್ ಪಾಸಾಗಿದ್ದಾರೆ. ವಿದ್ಯಾರ್ಥಿಗಳಿಗೆ ಎಸ್ ಎಂ ಎಸ್ ಮೂಲಕ ಫಲಿತಾಂಶ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿದೆ ಎಂದರು.
ಎಸ್ ಎಸ್ ಎಲ್ ಸಿ ಅಂಕಗಳಲ್ಲಿ ಶೇಕಡಾ 45 ಹಾಗೂ ಪ್ರಥಮ ಪಿಯುಸಿ ಪರೀಕ್ಷೆಯ ಶೇಕಡಾ 45 ಹಾಗೂ ಆಂತರಿಕ ಮೌಲ್ಯಮಾಪನದ ಶೇಕಡಾ 10 ರಷ್ಟು ಅಂಕಗಳನ್ನು ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ೬,೬೬,೪೯೭ ವಿದ್ಯಾರ್ಥಿಗಳಿದ್ದರು. ಗ್ರೇಡ್ ಆಧಾರದಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ.
೯೫,೬೨೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೩,೫೫,೦೭೮ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ೧,೪೭,೦೫೫ ದ್ವಿತೀಯ ದರ್ಜೆ ಹಾಗೂ ೬೮,೭೨೯ ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.
600ಕ್ಕೆ 600 ಅಂಕ ಪಡೆದ ವಿದ್ಯಾರ್ಥಿಗಳು:
ದಕ್ಷಿಣ ಕನ್ನಡ ಜಿಲ್ಲೆ 445, ಬೆಂಗಳೂರು ದಕ್ಷಿಣ 302, ಬೆಂಗಳೂರು ಉತ್ತರ 261, ಉಡುಪಿ 149, ಹಾಸನ 104 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗ-2,51,686, ವಿಜ್ಞಾನ, 2,19,777, ಕಲಾ ವಿಭಾಗದಲ್ಲಿ 1,95,304 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಫಲಿತಾಂಶ ತಿರಸ್ಕರಿಸುವ ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಪರೀಕ್ಷೆ ಬರೆಯಲು ಬಯಸುವ ವಿದ್ಯಾರ್ಥಿಗಳು ಜುಲೈ 30 ರೊಳಗೆ ಹೆಸರು ನೋಂದಾಯಿಸಬೇಕು. ಈ ವಿದ್ಯಾರ್ಥಿಗಳಿಗೆ ಆಗಸ್ಟ್ 19 ರಿಂದ ಸೆಪ್ಟೆಂಬರ್ ೩ ರೊಳಗೆ ಪರೀಕ್ಷೆ ನಡೆಸಲಾಗುವುದು ಎಂದರು.
Key words: Second PU- Result-Dakshina Kannada -District –top