ಶಿಡ್ಲಘಟ್ಟ,ಡಿಸೆಂಬರ್,30,2021(www.justkannada.in): ನಮ್ಮ ಓಟು ನಮ್ಮ ಸ್ವಾಭಿಮಾನದ ಹಕ್ಕು, ಎಂದಿಗೂ ಆದು ಮಾರಿಕೊಳ್ಳುವ ಸರಕಲ್ಲ. ನಮ್ಮ ಮತವನ್ನ ನಾವು ಮಾರಿಕೊಳ್ಳುವುದು ಬೇಡ ಎಂದು ಮತದಾರರ ಸ್ವಾಭಿಮಾನ ಆಂದೋಲನದ ಸಂಚಾಲಕ ಕೆ.ಎಂ ಜಯರಾಮಯ್ಯ ನುಡಿದರು.
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಿಂದ ಮತದಾರರ ಸ್ವಾಭಿಮಾನ ಆಂದೋಲನ ಆರಂಭವಾಗಿದ್ದು ಇದರಡಿಯಲ್ಲಿ ಇಂದು ಭಕ್ತರಹಳ್ಳಿ ಬಿಎಂವಿ ಶಾಲೆಯ ಶ್ರೀ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮತದಾರರ ಜಾಗೃತಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕೆ.ಎಂ ಜಯರಾಮಯ್ಯ. 14 ಡಿಸೆಂಬರ್ 2019 ರಂದು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ರಾಷ್ಟ್ರೀಯ ವಕೀಲರ ಒಕ್ಕೂಟ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ಭಾಷಣ ಕೇಳಲು ಹೋಗಿದ್ದ ನಾನು, ಅವರ ಭಾಷಣ ಮುಗಿದ ನಂತರ ಚುನಾವಣೆಗಳಲ್ಲಿ ಮತದಾರರು ಅಭ್ಯರ್ಥಿಗಳ ವಿವಿಧ ಆಮಿಷಗಳಿಗೆ ಒಳಗಾಗದಂತೆ ತಿಳಿಹೇಳಲು ರಾಜ್ಯಾದ್ಯಂತ ಆಂದೋಲನ ತಮ್ಮ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದರೆ ಒಳಿತು” ಎಂದು ಹೇಳಿದಾಗ ನ್ಯಾಯ ಮೂರ್ತಿಗಳು – ನನಗೆ ವಯಸ್ಸಾಗಿದೆ. ನೀವ್ಯಾರಾದರೂ ಇಂತಹ ಕೆಲಸ ಮಾಡಲು ಪ್ರಾರಂಭಿಸಿರಿ” ಎಂದು ಹೇಳಿ ಸಭಾಂಗಣದಿಂದ ಹೊರಬರುತ್ತಾ – ನಿಮ್ಮ ಆಂದೋಲನ ಬರೀ ಒಂದೇ Point ಗೆ (ಅಂಶಕ್ಕೆ) ಅಂದರೆ ಮತದಾರರು ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದು ತಿಳಿಹೇಳುವುದಕ್ಕೆ ಮಾತ್ರ ಸೀಮಿತವಾಗದೆ, ಧನಿಕರಾಗಿಲ್ಲದಿದ್ದರೂ ಒಳ್ಳೆಯ ಹಿನ್ನೆಲೆ ಇರುವ ವ್ಯಕ್ತಿಗಳನ್ನು ಚುನಾವಣಾ ಅಭ್ಯರ್ಥಿಗಳನ್ನು ಮಾಡಿರಿ, ಇಲ್ಲದಿದ್ದರೆ ಬೇರೆ ಪಕ್ಷದವರು ನೀವು ಹೇಳುತ್ತಿರುವಂತಹವರನ್ನೇ: ಚುನಾವಣಾ ಅಭ್ಯರ್ಥಿಗಳನ್ನಾಗಿಸುವೆವು ಎಂದು ನಿಮ್ಮ ಆಂದೋಲನವನ್ನೇ ಹೈಜಾಕ್ ಮಾಡುವರು” ಎಂದು ಮುಂತಾಗಿ ಹೇಳಿದರು ಎಂದು ಸ್ಮರಿಸಿದರು.
ಹಣ, ಮದ್ಯ ಮೊದಲಾದ ಆಮಿಷಗಳಿಗೆ ಒಳಗಾಗಿ ಚುನಾವಣಾ ಅಭ್ಯರ್ಥಿಗಳಿಗೆ ಓಟ್ ಮಾಡುವುದು ನೀತಿಯಿಲ್ಲದೆ ರಾಜಕಾರಣ ಅಲ್ಲವೇ ? ರಾಜಕಾರಣ ಇಂತಹ ಕೆಟ್ಟ ಸ್ಥಿತಿಗೆ ತಲುಪಿರುವುದನ್ನು ನಾವೆಲ್ಲರೂ ನೋಡಿಕೊಂಡು ಇರುವುದು ಹೇಗೆ !? ಈಗ ನಮಗೆ ಉಳಿದಿರುವುದು ಒಂದೇ ದಾರಿ, ಅದು ನಮ್ಮ ಜನರ ಹತ್ತಿರ ಹೋಗಿ ತಮ್ಮ ಓಟನ್ನು ಮಾರಿಕೊಳ್ಳುವುದು ಬೇಡ, ಪ್ರತಿಯೊಂದು ಓಟು ಅಮೂಲ್ಯವಾದುದು ಎಂದು ತಿಳಿಹೇಳುವ ಆಂದೋಲನ ಪ್ರಾರಂಭಿಸುವುದು ಒಳ್ಳೆಯದು
ಈ ಆಂದೋಲನದಲ್ಲಿ ಡಾ| ಕೆ.ಎಂ. ಜಯರಾಮಯ್ಯ ಆದ ನಾನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಹ ಪ್ರಾಧ್ಯಾಪಕನಾಗಿ ನಿವೃತ್ತಿ ಹೊಂದಿದ್ದು, ಬೆಂಗಳೂರಿನ ಜನಪರ ಹೋರಾಟಗಾರರು ಹಾಗೂ ಕೇಂದ್ರ ಸಚಿವರಾಗಿದ್ದ ದಿ| ಜಾರ್ಜ್ ಫರ್ನಾಂಡಿಸ್ ಅವರ ಅನುಯಾಯಿಯಾದ ಎಲ್.ಕಾಳಪ್ಪ, ಮೈಸೂರಿನ ಬದುಕು ಟ್ರಸ್ಟ್ನ ನಿರ್ದೇಶಕ ಈ. ಧನಂಜಯ, ಹುಬ್ಬಳ್ಳಿಯ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ವಿಕಾಸ್ ಸೂಪ್ಪಿನ್, ತುಮಕೂರಿನ ರೈತ ಮುಖಂಡ ಎನ್.ಜಿ. ರಾಮಚಂದ್ರ, ಧಾರವಾಡದ ಪ್ರಗತಿಪರ ಹೋರಾಟಗಾರರಾದ ವೆಂಕನಗೌಡ ಪಾಟೀಲ್, ಆದ ನಾವುಗಳು ಸಂಚಾಲಕರುಗಳಾಗಿ ಸ್ವಾಭಿಮಾನದ ಈ ಆಂದೋಲನವನ್ನು ಕೋಲಾರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು, ಭಕ್ತರಹಳ್ಳಿ ಗ್ರಾಮದಿಂದ ಪ್ರಾರಂಭಿಸುತ್ತಿದ್ದೇವೆ.
ನಂತರ ರಾಜ್ಯದ ಆಯ್ದ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ, ನಗರಗಳಲ್ಲಿ ಈ ಆಂದೋಲನವು ಮುಂದುವರೆಯಲಿದೆ, ಚುನಾವಣಾ ಅಭ್ಯರ್ಥಿಗಳ ಆಮಿಷಗಳಿಗೆ ಕೈಚಾಚುವ ಬದಲು ಇಂತಹವರು ತಪ್ಪು ಮಾಡಿದಾಗ ಪ್ರಶ್ನಿಸಬೇಕು. ಗೌತಮ ಬುದ್ಧ ಹೇಳಿರುವಂತೆ ನಿಮ್ಮ ರೂವಾರಿಗಳು ನೀವು, ಪ್ರಶ್ನಿಸದೇ ಏನನ್ನೂ ಒಪ್ಪಬೇಡಿ. ಎಗ್ಗಿಲ್ಲದ ಆಪೇಕ್ಷೆ, ಕೋರಿಕೆಗಳು ಸಮಸಮಾಜಕ್ಕೆ ವಿಘ್ನಗಳು” ಎಂದು ಹೇಳಿರುವುದನ್ನು ಪಾಲಿಸೋಣ ಎಂದು ಕರೆ ನೀಡಿದರು.
Key words: Our vote-our right – KM Jayaramaiah- Voter -self-esteem- movement