ನಿಮಗೆ ಗೊತ್ತೆ?: 74 ಸ್ಥಳಗಳಲ್ಲಿ ಬೆಸ್ಕಾಂನ ಇವಿ ಚಾರ್ಜಿಂಗ್ ಠಾಣೆಗಳಿವೆ.

ಬೆಂಗಳೂರು, ಡಿಸೆಂಬರ್ 8, 2021 (www.justkannada.in): ಇಡೀ ಭಾರತದಲ್ಲೇ ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಸಂಖ್ಯೆ ವಿದ್ಯುತ್ ವಾಹನಗಳನ್ನು ಚಾರ್ಜ್ ಮಾಡುವ ಠಾಣೆಗಳಿವೆ, ಆದರೆ ವಿದ್ಯುತ್ ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಚಾರ್ಜಿಂಗ್ ಮಾಡಲಾಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಬೆಸ್ಕಾಂ ಬೆಂಗಳೂರು ನಗರದಲ್ಲಿ ಒಟ್ಟು ೭೪ ವಿವಿಧ ಸ್ಥಳಗಳಲ್ಲಿ ಸುಮಾರು ೧೩೬ ಪೋರ್ಟ್ ಗಳನ್ನು ಈಗಾಗಲೇ ಅಳವಡಿಸಿದೆ.

ಈ ವಿದ್ಯುತ್ ವಾಹನಗಳನ್ನು ಚಾರ್ಜ್ ಮಾಡುವ ಠಾಣೆಗಳು ಬೆಳಿಗ್ಗೆ ೬ ರಿಂದ ರಾತ್ರಿ ೧೦ ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿವೆ. ಇಷ್ಟಾದರೂ ಇನ್ನೂ ಯಾರಿಗೂ ಈ ಬಗ್ಗೆ ಹೆಚ್ಚು ಮಾಹಿತಿಯೇ ಇಲ್ಲ. ಅಮಿತ್ ಸುರಾನ ಎಂಬ ಬೆಂಗಳೂರಿನ ಅಂಚೆಪಾಳ್ಯದಲ್ಲಿರುವ ಬ್ರಿಗೇಡ್ ಪನೋರಮಾದ ನಿವಾಸಿ ಮಾರ್ಚ್ ತಿಂಗಳಿಂದಲೂ ವಿದ್ಯುತ್ ಚಾಲಿತ ಕಾರನ್ನು ನಡೆಸುತ್ತಿದ್ದಾರೆ. ಅವರು ವಾಸಿಸುವ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಕೇವಲ ಎರಡು ವಿದ್ಯುತ್ ವಾಹನಗಳಿವೆಯಂತೆ.

“ವಾಹನಗಳನ್ನು ಚಾರ್ಜ್ ಮಾಡುವ ಪೋರ್ಟ್ ಗಳನ್ನು ಒದಗಿಸುವಂತೆ ನಾವು ನಮ್ಮ ಅಪಾರ್ಟ್ಮೆಂಟ್ ಸಮಿತಿಯನ್ನು ಕೋರಿದೆವು. ಆದರೆ ಅವರು ಈಗ ಕೇವಲ ಎರಡೇ ವಾಹನಗಳಿದ್ದು, ಅದರ ಸಂಖ್ಯೆ ಹೆಚ್ಚಾದಾಗ ಮಾತ್ರ ಆ ಕುರಿತು ಯೋಚಿಸುತ್ತೇವೆ ಎಂದಿದ್ದಾರೆ,” ಎನ್ನುವುದು ಅವರ ವಾದವಂತೆ. ಮುಂದಿನ ಎರಡು ಅಥವಾ ನಾಲ್ಕು ತಿಂಗಳೊಳಗೆ ಏನಾದರೂ ವ್ಯವಸ್ಥೆಯಾಗಬಹುದು ಎಂಬ ವಿಶ್ವಾಸವನ್ನು ಅವರು ಹೊಂದಿದ್ದಾರೆ.

ಸುರಾನ ಅವರು ಟಾಟಾ ನೆಕ್ಸಾನ್ ವಾಹನವನ್ನು ಹೊಂದಿದ್ದು, ಕಂಪನಿ ವತಿಯಿಂದ ಅವರ ಅಪಾರ್ಟ್ಮೆಂಟ್‌ನಲ್ಲಿ ಅವರು ತಮ್ಮ ಕಾರು ನಿಲ್ಲಿಸುವ ಸ್ಥಳದಲ್ಲಿ ವಿದ್ಯುತ್ ಚಾರ್ಜಿಂಗ್ ಪಾಯಿಂಟ್ ಅನ್ನೂ ಒದಗಿಸಿದ್ದಾರಂತೆ. ಅದಕ್ಕಾಗಿ ವಿದ್ಯುತ್ ಮೀಟರ್‌ನಿಂದ ಸಂಪರ್ಕವನ್ನು ಪಡೆಯಲಾಗಿದೆ. “ನಾನು ಮೂರು ದಿನಗಳಿಗೊಮ್ಮೆ ನನ್ನ ಕಾರನ್ನು ಚಾರ್ಜ್ ಮಾಡಿಕೊಳ್ಳುತ್ತೇನೆ,” ಎನ್ನುತ್ತಾರೆ ಸುರಾನ. ಟ್ವಿಟ್ಟರ್‌ನಲ್ಲಿ ನೆಕ್ಸಾನ್ ವಾಹನದ ಮಾಲೀಕರ ಒಂದು ಕ್ಲಬ್ ಸಕ್ರಿಯವಾಗಿದೆ.

ಏರುತ್ತಿರುವ ಇಂಧನ ಬೆಲೆಗಳಿಂದಾಗಿ ಅನೇಕ ಬೆಂಗಳೂರಿನ ನಿವಾಸಿಗಳು ವಿದ್ಯುತ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ವಿದ್ಯುತ್ ವಾಹನವನ್ನು ಹೊಂದುವುದು ಆರಂಭದಲ್ಲಿ ದುಬಾರಿಯಾದರೂ ಸಹ ಅದರಿಂದ ಅನೇಕ ಅನುಕೂಲಗಳಿವೆ ಎನ್ನುವುದು ಬಳಕೆದಾರರ ಅನಿಸಿಕೆಯಾಗಿದೆ.

ಕೆಂಗೇರಿಯಲ್ಲಿರುವ ವಿಬಿಹೆಚ್‌ಸಿ ಪಾಮ್ ಹಾವೆನ್‌ನಂತಹ ಬಹುತೇಕ ಅಪಾರ್ಟ್ಮೆಂಟ್ ಸಂಕೀರ್ಣಗಳು ಇನ್ನೂ ಕಾಯುತ್ತಿವೆ. “ಚಾರ್ಜಿಂಗ್ ಪೋರ್ಟ್ ಗಳ ವ್ಯವಸ್ಥೆಯನ್ನು ಒದಗಿಸಲು ಕನಿಷ್ಠ ೧೦ ರಿಂದ ೧೫ ವಾಹನಗಳಾದರೂ ಇರಬೇಕು,” ಎನ್ನುವುದು ಈ ಸಂರ್ಕೀಣದ ನಿವಾಸಿಗಳ ಸಂಘದ ಕಾರ್ಯದರ್ಶಿ ಮೋಹನ್ ಕುಮಾರ್ ಅವರ ಅಭಿಪ್ರಾಯವಾಗಿದೆ.

ಈ ವಾಹನ ವಿದ್ಯುತ್ ಚಾರ್ಜಿಂಗ್ ಪೋರ್ಟ್ ಅಳವಡಿಸಲು ರೂ.೭,೦೦೦ ದಿಂದ ರೂ.೧೦,೦೦೦ ವೆಚ್ಚವಾಗುತ್ತದೆ. ಒಂದು ಪ್ರಾಥಮಿಕ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸುವ ವೆಚ್ಚ ರೂ.೭೦,೦೦೦ ದಿಂದ ಆರಂಭವಾಗುತ್ತದೆ ಎನ್ನುತ್ತಾರೆ ಎಟ್ಗಿ ಡಿಸೈನ್ಸ್ ಕೊಲಾಬೊರೇಷನ್‌ನ ಆರ್ಕಿಟೆಕ್ಟ್ ಪ್ರಶಾಂತ್ ನಂದಿಪ್ರಸಾದ್.

“ಆದರೆ ಇದು ಅಷ್ಟು ಕಷ್ಟವೂ ಅಲ್ಲ. ವಾಹನಗಳನ್ನು ಚಾರ್ಜ್ ಮಾಡುವ ಪೋರ್ಟ್ ಅನ್ನು ಅಳವಡಿಸಲು ಕಟ್ಟಡಕ್ಕೆ ಯಾವುದೇ ರೀತಿಯ ಬದಲಾವಣೆ ಮಾಡಬೇಕಾಗುವುದಿಲ್ಲ. ಆದರೆ ಇದರಲ್ಲಿ ಬರುವ ಬಹು ದೊಡ್ಡ ಪ್ರಶ್ನೆಯೆಂದರೆ ವಿದ್ಯುತ್ ಸಂಪರ್ಕದ ಲೈನ್ ಅನ್ನು ಎಲ್ಲಿಂದ ಎಳೆಯುವುದು?,” ಎನ್ನುತ್ತಾರೆ ಪ್ರಶಾಂತ್.

ವಿದ್ಯುತ್ ಕಾರಿನ ಮಾಲೀಕರ ಅಪಾರ್ಟ್ಮೆಂಟ್‌ನಿಂದಲೇ ಲೈನ್ ಅನ್ನು ಎಳೆದುಕೊಳ್ಳಬಹುದು ಅಥವಾ ಒಂದು ಕಾಮನ್ ಏರಿಯಾದಿಂದಲೂ ಎಳೆಯಬಹುದು. “ಆದರೆ ವಿದ್ಯುತ್ ವಾಹನಗಳು ಇಲ್ಲದಿರುವಂತಹ ಮಾಲೀಕರು ಏಕೆ ಇದರ ವೆಚ್ಚವನ್ನು ಭರಿಸಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ,” ಎನ್ನುತ್ತಾರೆ. ಹಾಗಾಗಿ ಕಾರಿನ ಮಾಲೀಕರು ವಾಸಿಸುತ್ತಿರುವ ಅಪಾರ್ಟ್ಮೆಂಟ್‌ನಿಂದಲೇ ವಿದ್ಯುತ್ ಸಂಪರ್ಕದ ಲೈನ್ ಅನ್ನು ಎಳೆಯುವುದು ಉತ್ತಮ ಪರಿಹಾರ ಎನ್ನುವುದು ಅವರ ಅಭಿಪ್ರಾಯವಾಗಿದೆ.

ವಿದ್ಯುತ್ ವಾಹನಗಳನ್ನು ಹೊಂದಿರುವ ವೈಯಕ್ತಿಕ ಮನೆಗಳಲ್ಲಿ ವಾಸಿಸುತ್ತಿರುವಂತಹವರು ಈಗಾಗಲೇ ಚಾರ್ಜಿಂಗ್ ಪಾಯಿಂಟ್‌ ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ.

ಪ್ಲಾಟಿನಂ ಸಿಟಿ ರೆಸಿಡೆಂಟ್ಸ್ ಫೋರಂನ ಅಧ್ಯಕ್ಷ ಅನಿಲ್ ಕುಮಾರ್ ಗೋಪಿನಾಥ್ ಅವರು ಹೇಳುವಂತೆ ಬೆಸ್ಕಾಂ ವತಿಯಿಂದ ಈ ಸಂಬಂಧ ಈವರೆಗೂ ಯಾವುದೇ ನಿರ್ದಿಷ್ಟವಧ ನಿಬಂಧನೆಗಳನ್ನು ಸ್ಪಷ್ಟಪಡಿಸಿಲ್ಲ.

ಕನ್ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲೆರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಬೆಂಗಳೂರು ಅಧ್ಯಾಯದ ಅಧ್ಯಕ್ಷ ಸುರೇಶ್ ಹರಿ ಅವರು ಹೇಳುವಂತೆ ವಿದ್ಯುತ್ ವಾಹನಗಳ ಮಾಲೀಕರು ಹಾಗೂ ರೆಸಿಡೆಂಟ್ ವೆಲ್‌ ಫೇರ್ ಸಂಘಗಳು ಎದುರು ಬದುರು ಭೇಟಿಯಾಗುವುದೇ ಇಲ್ಲವಂತೆ. “ಜನರು ಇನ್ನೂ ಸ್ವಯಂ ನಿರ್ವಹಣೆಯುಳ್ಳ ಚಾರ್ಜಿಂಗ್ ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳಲು ಸಿದ್ಧರಿಲ್ಲ ಹಾಗೂ ನಿವಾಸಿ ಸಂಘಗಳು ವಾಹನಗಳ ಸಂಖ್ಯೆ ಹೆಚ್ಚಾಗುವವರೆಗೂ ಚಾರ್ಜಿಂಗ್ ಪೋರ್ಟ್ ಗಳನ್ನು ಒದಗಿಸಲು ತಯಾರಿಲ್ಲ,” ಎನ್ನುತ್ತಾರೆ ಸುರೇಶ್.

ಬೆಸ್ಕಾಂ ಏನು ಹೇಳುತ್ತದೆ

“ಚಾರ್ಜರ್ ಮಾಡೆಲ್ ಎಸಿ೦೦೧ ಒಂದೇ ಬಾರಿಗೆ ಮೂರು ವಾಹನಗಳನ್ನು ಚಾರ್ಜ್ ಮಾಡಬಲ್ಲದು. ಡಿಸಿ೦೦೧ ನಲ್ಲಿ ಒಂದು ಬಾರಿಗೆ ಒಂದು ವಾಹನವನ್ನು ಮಾತ್ರ ಚಾರ್ಜ್ ಮಾಡಿಕೊಳ್ಳಬಹುದು,” ಎನ್ನುತ್ತಾರೆ ಬೆಸ್ಕಾಂನ ಓರ್ವ ಅಧಿಕಾರಿ. ಒಂದು ದ್ವಿಚಕ್ರ ವಾಹನವನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಮೂರರಿಂದ ನಾಲ್ಕು ಗಂಟೆಗಳ ಕಾಲ ಹಿಡಿಯುತ್ತದೆ. ಇದಕ್ಕೆ ರೂ.೨೪ ವೆಚ್ಚವಾಗುತ್ತದೆ (ಒಂದು ವೇಳೆ ನೀವು ನಿಧಾನವಾಗಿ ಚಾರ್ಜ್ ಆಗುವ ವ್ಯವಸ್ಥೆಯನ್ನು ಮಾಡಿಕೊಂಡರೆ ಇದರ ದರ ರೂ.೨ ನಷ್ಟು ಕಡಿಮೆಯಾಗುತ್ತದಂತೆ).

ವಿದ್ಯುತ್ ವಾಹನಗಳ ಸಂಖ್ಯೆ

ಆರ್‌ಟಿಒ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಪ್ರಸ್ತುತ ಒಟ್ಟು ೧,೪೮೬ ವಿದ್ಯುತ್ ದ್ವಿಚಕ್ರವಾಹನಗಳು, ೨೯ ತ್ರಿಚಕ್ರ ವಾಹನಗಳು ಮತ್ತು ೪೭೧ ನಾಲ್ಕು ಚಕ್ರಗಳ ವಾಹನಗಳಿವೆ.

ಎಲ್ಲಿ

ಇವಿ ಮಿತ್ರ ಆ್ಯಪ್ (EV Mithra) ಅನ್ನು ಡೌನ್‌ಲೋಡ್ ಮಾಡಿಕೊಂಡು ಬೆಸ್ಕಾಂನ ವಿದ್ಯುತ್ ಚಾರ್ಜಿಂಗ್ ಠಾಣೆಗಳು ಅಥವಾ ಘಟಕಗಳು ಎಲ್ಲೆಲ್ಲಿವೆ ಎಂಬ ಮಾಹಿತಿಯನ್ನು ನೀಡು ಪಡೆದುಕೊಳ್ಳಬಹುದು. ಈ ಆ್ಯಪ್ ಆ್ಯಂಡ್ರಾಯ್ಡ್ ಮತ್ತು iOS ಎರಡರಲ್ಲಿಯೂ ಲಭ್ಯವಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: 74 locations -Bescom’s- EV charging -stations.