ಮೈಸೂರು,ನವೆಂಬರ್,8,2021(www.justkannada.in): ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಸೋಮವಾರ ರಾಷ್ಟ್ರಪತಿಯವರಿಂದ ಸ್ವೀಕರಿಸಿದ ಮೈಸೂರಿನ ‘ಸುಧರ್ಮ’ಸಂಸ್ಕೃತ ಪತ್ರಿಕೆಯ ಸಂಪಾದಕಿ ಕೆ.ಎಸ್. ಜಯಲಕ್ಷ್ಮಿ ಹಾಗೂ ಅವರ ಪತಿ ದಿವಂಗತ ಕೆ.ವಿ.ಸಂಪತ್ ಕುಮಾರ್ ಅವರಿಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಮೈಸೂರಿನಿಂದ ಪ್ರಕಟವಾಗುತ್ತಿರುವ ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ “ಸುಧರ್ಮ” ಪತ್ರಿಕೆಯ ಸಂಪಾದಕರಾಗಿದ್ದ ಕೆ.ವಿ. ಸಂಪತ್ ಕುಮಾರ್ ಮತ್ತು ಕೆ.ಎಸ್.ಜಯಲಕ್ಷ್ಮಿ ದಂಪತಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದು ಮೈಸೂರಿಗೆ ಹಾಗೂ ಕರ್ನಾಟಕಕ್ಕೆ ಹೆಮ್ಮೆಯ ವಿಷಯ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಕೆ.ವಿ. ಸಂಪತ್ ಕುಮಾರ್ ಮತ್ತು ಅವರ ಪತ್ನಿ ಕೆ.ಎಸ್.ಜಯಲಕ್ಷ್ಮೀ ಅವರಿಗೆ ಪದ್ಮಶ್ರೀ ಪುರಸ್ಕಾರವನ್ನು ನೀಡುವ ಮೂಲಕ ಕಳೆದ ಮೂರು ದಶಕಗಳಿಂದ ಈ ದಂಪತಿ ನಡೆಸಿಕೊಂಡು ಬರುತ್ತಿದ್ದ ತಪಸ್ಸಿನಂಥ ಕಾರ್ಯವನ್ನು ಗುರುತಿಸಿತ್ತು. ಕೊರೊನಾ ಪರಿಣಾಮವಾಗಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿರಲಿಲ್ಲ. ದುರಾದೃಷ್ಟವಶಾತ್ ಕೆ.ವಿ.ಸಂಪತ್ ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸುವ ಮುನ್ನವೇ ನಮ್ಮನ್ನು ಅಗಲಿರುವುದು ದುರ್ದೈವದ ಸಂಗತಿ. ಬಹುಶಃ ದಂಪತಿಗಳಿಗೆ ಒಟ್ಟಿಗೆ ಪದ್ಮ ಪ್ರಶಸ್ತಿ ಸಂದಿರುವುದು ಅಪರೂಪ ಎನ್ನಬಹುದು ಎಂದು ಸಚಿವ ಎಸ್.ಟಿ ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Key words: Padma Shri –award- K.V. Sampath Kumar -his wife- K.S. Jayalakshmi- Minister -ST Somashekhar congratulated