ಕಲಬುರ್ಗಿ,ಅಕ್ಟೋಬರ್,13,2021(www.justkannada.in): ಪುಟಗೋಸಿ ವಿಪಕ್ಷ ನಾಯಕ ಸ್ಥಾನಕ್ಕಾಗಿ ಮೈತ್ರಿ ಸರ್ಕಾರವನ್ನು ತೆಗೆದರು ಎಂದು ಹೇಳಿಕೆ ನೀಡಿದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ಕಲಬುರ್ಗಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿ ಹೆಚ್.ಡಿಕೆ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಂವಿಧಾನಿಕವಾಗಿರುವ ವಿಪಕ್ಷ ನಾಯಕನ ಹುದ್ದೆ ಕುಮಾರಸ್ವಾಮಿ ಪ್ರಕಾರ ‘ಪುಟಗೋಸಿ’. ಅವರಿಗೆ ಇಂಥ ಅಭಿಪ್ರಾಯವಿದೆ ಎಂದು ಗೊತ್ತಿರಲಿಲ್ಲ. ಮುಖ್ಯಮಂತ್ರಿಯಾಗಿದ್ದವರು ಇಂತಹ ಮಾತುಗಳನ್ನಾಡಬಾರದು. ವಿಪಕ್ಷ ನಾಯಕನ ಹುದ್ದೆ ಅವರ ಪ್ರಕಾರ ಪುಟಗೋಸಿ ಎನ್ನುವುದಾದರೆ ಹೆಚ್.ಡಿ.ದೇವೇಗೌಡರೂ ವಿರೋಧ ಪಕ್ಷದ ನಾಯಕರಾಗಿದ್ದರು ಹಾಗಾದರೆ ಅದು ಕೂಡ ಪುಟಗೋಸಿನಾ? ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ. ಸಿಎಂ ಆಗಿದ್ದವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಸಾಂವಿಧಾನಿಕ ಹುದ್ದೆ ಬಗ್ಗೆ ಕೀಳಾಗಿ ಮಾತನಾಡಬಾರದು ಎಂದು ಹರಿಹಾಯ್ದರು.
ನನ್ನ ವಿರುದ್ಧ ಹೆಚ್,.ಡಿಕೆ ಮಾಡಿದ ಆರೋಪ ಅಪ್ಪಟ ಸುಳ್ಳು. ಮೈತ್ರಿ ಸರ್ಕಾರ ಪತನಕ್ಕೆ ಹೆಚ್.ಡಿ ಕುಮಾರಸ್ವಾಮಿಯೇ ಕಾರಣ. ನಾನು ಮೈತ್ರಿ ಸರ್ಕಾರ ತೆಗೆಯಬೇಕೆಂದಿದ್ದರೇ ಕುಮಾರಸ್ವಾಮಿಯನ್ನು ಸಿಎಂ ಮಾಡಲು ಒಪ್ಪುತ್ತಿರಲಿಲ್ಲ. ಮುಖ್ಯಮಂತ್ರಿಯಾದವರು ಯಾರಾದರೂ ಹೋಟೆಲ್ ನಲ್ಲಿ ಕುಳಿತು ಆಡಳಿತ ನಡೆಸುತ್ತಾರಾ? ಶಾಸಕರಿಗೆ ಸಿಎಂ ಭೇಟಿಯಾಗಲು ಆಗುತ್ತಿರಲಿಲ್ಲ, ಕುಮಾರಸ್ವಾಮಿ ಶಾಸಕರ ಸಮಸ್ಯೆಯನ್ನೂ ಆಲಿಸುತ್ತಿರಲಿಲ್ಲ. ಇದರಿಂದಾಗಿ ಶಾಸಕರಿಗೆ ಅಸಮಾಧಾನ ಉಂಟಾಯಿತು. ಹೀಗಾಗಿ ಕುಮಾರಸ್ವಾಮಿಯೇ ಮೈತ್ರಿ ಸರ್ಕಾರ ಉರುಳಲು ಕಾರಣ ಎಂದು ವಾಗ್ದಾಳಿ ನಡೆಸಿದರು.
ಇನ್ನು 23 ಶಾಸಕರು ನಮ್ಮ ಪಕ್ಷದಿಂದ ಬಿಜೆಪಿಗೆ ಹೋಗಿಲ್ಲ, ನಮ್ಮ ಪಕ್ಷದ 14 ಶಾಸಕರು ಬಿಜೆಪಿಗೆ ಹೋಗಿದ್ದಾರೆ. ಮೂವರು ಜೆಡಿಎಸ್ ಶಾಸಕರು ಬಿಜೆಪಿಗೆ ಹೋಗಿದ್ದಾರೆ. ಹಾಗಾದ್ರೆ ಜೆಡಿಎಸ್ ಶಾಸಕರನ್ನೂ ನಾನೇ ಬಿಜೆಪಿಗೆ ಕಳುಹಿಸಿದ್ನಾ? ಕುಮಾರಸ್ವಾಮಿಯವರೇ ನಿಮಗೆ ಎಷ್ಟು ನಾಲಿಗೆಯಿದೆ? ಮನುಷ್ಯನಿಗೆ ಒಂದು ನಾಲಿಗೆಯಿರಬೇಕು ಎಂದು ಸಿದ್ಧರಾಮಯ್ಯ ಗುಡುಗಿದರು.
Key words: Former CM Siddaramaiah –against-HD Kumaraswamy- responsible – fall – alliance government