ಬೆಂಗಳೂರು:ಜುಲೈ-7: ಶನಿವಾರ ನಡೆದ ರಾಜೀನಾಮೆ ಪ್ರಹಸನದಿಂದ ಕಂಗೆಟ್ಟಿರುವ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ರಿವರ್ಸ್ ಆಪರೇಷನ್ಗೆ ಮುಂದಾಗಿರುವ ಮಾಹಿತಿ ಹಿನ್ನೆಲೆಯಲ್ಲಿ ಬಿಜೆಪಿ ಬಹು ಎಚ್ಚರಿಕೆಯಿಂದ ಬೆಳವಣಿಗೆಗಳನ್ನು ಗಮನಿಸುತ್ತಿದೆ.
ಬಿಜೆಪಿಯ 5-6 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಉಭಯ ಪಕ್ಷಗಳ ಮುಖಂಡರು ಹೇಳಿಕೆ ನೀಡಿರುವುದರಿಂದ ಎಚ್ಚರಗೊಂಡಿರುವ ಬಿಜೆಪಿ ಮುಖಂಡರು ಅನುಮಾನ ಇರುವ ಶಾಸಕರನ್ನು ಕರೆಸಿ ಮಾತನಾಡಿಸುತ್ತಿದ್ದಾರೆ.
ರಿವರ್ಸ್ ಆಪರೇಷನ್ ಪಟ್ಟಿಯಲ್ಲಿ ಕನಕಗಿರಿ ಶಾಸಕ ಬಸವರಾಜ್ ದಡೇಸಗೂರ್ ಅವರ ಹೆಸರಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಅವರನ್ನು ಕರೆಸಿ ಬಿ.ಎಸ್.ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ಅವರ ಡಾಲರ್ಸ್ ಕಾಲನಿಯಲ್ಲಿ ಬಸವರಾಜ್ ಅವರನ್ನು ಶಾಸಕ ಗೋವಿಂದ ಕಾರಜೋಳ ಕರೆತಂದಿದ್ದರು. ಯಾವುದೇ ಕಾರಣಕ್ಕೂ ಅಮಿಷಕ್ಕೆ ಒಳಗಾಗದಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಪರಮೇಶ್ವರ್ ತಲೆದಂಡಕ್ಕೆ ಪಟ್ಟು
ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಲೆದಂಡಕ್ಕೆ ಬೆಂಗಳೂರಿನ ಶಾಸಕರು ಪಟ್ಟು ಹಿಡಿದಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ರಾಜೀನಾಮೆ ನೀಡಿರುವ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಹಾಗೂ ಅವರ ಪುತ್ರಿ ಶಾಸಕಿ ಸೌಮ್ಯರೆಡ್ಡಿ ಅವರನ್ನು ಖಾಸಗಿ ಹೋಟೆಲ್ಗೆ ಕರೆಸಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರಿನ ಸಮಸ್ಯೆ ಹಾಗೂ ನಗರ ಶಾಸಕರ ಅಸಮಾಧಾನಕ್ಕೆ ಪರಮೇಶ್ವರ್ ನಡೆಯೇ ಕಾರಣ. ಅವರು ರಾಜೀನಾಮೆ ನೀಡಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದು ಹೇಳಿದರೆನ್ನಲಾಗಿದೆ. ವೇಣುಗೋಪಾಲ್ ದೆಹಲಿಯಲ್ಲಿ ಈ ಬಗ್ಗೆ ವರಿಷ್ಠರೊಂದಿಗೆ ಚರ್ಚೆ ನಡೆಸುವ ಭರವಸೆ ನೀಡಿದರೆಂದು ಮೂಲಗಳು ಹೇಳಿವೆ.
ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿಯವರು ಮೌನವಹಿಸಿದ್ದಾರೆ. ಅವರು ಏನು ಮಾಡುತ್ತಿದ್ದಾರೆಂದು ಗೊತ್ತಿದೆ. ಹೋಗುವವರು ಹೋಗುತ್ತಾರೆ ಅವರನ್ನು ಹಿಡಿದುಕೊಳ್ಳಲು ಆಗುವುದಿಲ್ಲ. ನಾನು ಬಂಡಾಯ ಶಮನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
| ಡಿ.ಕೆ.ಶಿವಕುಮಾರ್ ಸಚಿವ
ತಿರುಪತಿಗೆ ಹೊರಟ ಜಿ.ಟಿ. ದೇವೇಗೌಡ!
ಮೈಸೂರು: ಶಾಸಕರ ರಾಜೀನಾಮೆ ನನಗೆ ಆಶ್ಚರ್ಯ ತಂದಿದೆ. ಈ ಕುರಿತು ನನಗೆ ಏನು ಹೆಚ್ಚಿಗೆ ಗೊತ್ತಿಲ್ಲ. ಆದರೆ, ಬೆಂಗಳೂರಿಗೆ ಹೋಗುತ್ತಿಲ್ಲ. ಇಲ್ಲಿಂದ ತಿರುಪತಿಗೆ ದೇವರ ದರ್ಶನಕ್ಕೆ ತೆರಳುತ್ತಿದ್ದೇನೆ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದರು. ರಾಜೀನಾಮೆ ನೀಡುತ್ತಿರುವ ಶಾಸಕರ ಮುಂದಾಳತ್ವ ವಹಿಸಿರುವ ಶಾಸಕ ಎಚ್.ವಿಶ್ವನಾಥ್ ನಡೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರನ್ನು ಜೆಡಿಎಸ್ಗೆ ನಾನು ಕರೆತಂದಿಲ್ಲ. ಕರೆತಂದವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ, ಹುಣಸೂರು ಕ್ಷೇತ್ರದಿಂದ ಅವರ ಗೆಲುವಿಗೆ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದರು.
ಕೃಪೆ:ವಿಜಯವಾಣಿ