ಬೆಂಗಳೂರು, ಡಿಸೆಂಬರ್ ೭, ೨೦೨೧ (www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಲೇಔಟ್ನಲ್ಲಿ (ಎನ್ಪಿಕೆಎಲ್) ೩,೩೭೦ ಮೂಲೆ ನಿವೇಶನಗಳನ್ನು ಹರಾಜು ಹಾಕಲು ನಿರ್ಧರಿಸಿದ್ದು, ಇದರಿಂದ ಕ್ರೋಢೀಕರಣವಾಗುವ ನಿಧಿಯನ್ನು ನಿರ್ಮಾಣ ಹಂತದಲ್ಲಿರುವಂತಹ ಈ ಬಡಾವಣೆಗೆ ಅಗತ್ಯವಿರುವ ಹೆಚ್ಚುವರಿ ವೆಚ್ಚಗಳಿಗೆ ಬಳಸಿಕೊಳ್ಳಲಿದೆ.
ಪ್ರಾಧಿಕಾರವು ಈ ೩,೩೭೦ ನಿವೇಶನಗಳ ಹರಾಜಿನಿಂದ ಕನಿಷ್ಠ ರೂ.೧,೫೦೦ ಕೋಟಿ ಗಳಿಸುವ ನಿರೀಕ್ಷೆಯನ್ನು ಹೊಂದಿದೆ. ಪ್ರಸ್ತುತ ನಿಧಾನಗತಿಯಲ್ಲಿ ಸಾಗಿರುವ ಬಡಾವಣೆ ನಿರ್ಮಾಣ ಕಾಮಗಾರಿಗಳು ಈ ನಿವೇಶನ ಹರಾಜಿನಿಂದ ಬರುವಂತಹ ಹಣದಿಂದ ವೇಗಗೊಳ್ಳಲಿದೆ. ಈ ನಡುವೆ ನಿವೇಶನ ಪಡೆದುಕೊಂಡಿರುವವರು ಒಂದು ಎಸ್ಕೊç ಖಾತೆಯನ್ನು ತೆರೆಯುವಂತೆ (escrow account) ಬಿಡಿಎ ಅನ್ನು ಕೋರಿದ್ದು, ನಿವೇಶನಗಳ ಹರಾಜನಿಂದ ಬಂದಂತಹ ಹಣವನ್ನು ಕೇವಲ ಈ ಬಡಾವಣೆ ಅಭಿವೃದ್ಧಿಗೆ ಮಾತ್ರ ವಿನಿಯೋಗಿಸುವಂತೆ ಒತ್ತಾಯಿಸಿದ್ದಾರೆ.
ಎನ್ಪಿಕೆಎಲ್ನಲ್ಲಿ ಮೊದಲು ೨೦೧೬ರಲ್ಲಿ ನಿವೇಶನಗಳು ಮತ್ತು ಪುನಃ ೨೦೧೮ರಲ್ಲಿ ನಿವೆಶನಗಳನ್ನು ಹಂಚಿಕೆ ಮಾಡಲಾಗಿತ್ತು.
ಈ ಸಂಬಂಧ ಮಾತನಾಡಿರುವ ಬಿಡಿಎ ಆಯುಕ್ತ ಎಂ.ಬಿ. ರಾಜೇಶ್ ಗೌಡ ಅವರು, “ಈ ಬಡಾವಣೆಯನ್ನು ಅಭಿವೃದ್ಧಿಪಡಿಸಲು ನಮ್ಮ ಬಳಿ ಸಾಕಷ್ಟು ಹಣವಿಲ್ಲ. ಹಾಗಾಗಿ ಕೆಂಪೇಗೌಡ ಲೇಔಟ್ನಲ್ಲಿರುವ ಮೂಲೆ ನಿವೇಶನಗಳ ಹರಾಜನ್ನು ಹಂತಗಳಲ್ಲಿ ಆರಂಭಿಸಲಿದ್ದೇವೆ. ಈವರೆಗೆ ಈ ಬಡಾವಣೆ ಅಭಿವೃದ್ಧಿಗೆ ನಾವು ರೂ.೨,೪೦೦ ಕೋಟಿ ವೆಚ್ಚ ಮಾಡಿದ್ದೇವೆ. ಆದರೆ ನಿವೇಶನ ಹಂಚಿಕೆದಾರರಿಂದ ನಮಗೆ ಬಂದಿರುವುದು ಕೇವಲ ರೂ.೨,೦೬೦ ಕೋಟಿ, ಇನ್ನೂ ರೂ.೩೦೦ ಕೋಟಿಗಳನ್ನು ನಿವೇಶನದಾರರು ನಮ್ಮ ಬಳಿ ಠೇವಣಿ ಇಡಬೇಕಿದೆ,” ಎಂದು ವಿವರಿಸದರು.
ಈ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಒಟ್ಟು ೨,೬೪೦ ಎಕರೆ ಭೂಮಿಯನ್ನು ವಶಪಡಿಸಿಕೊಂಡಿದ್ದು, ಸಾಮಾನ್ಯ ವರ್ಗದಡಿ ಈಗಾಗಲೇ ೧೦,೦೦೦ ನಿವೇಶನಗಳನ್ನು ಹಂಚಿಕೆ ಮಾಡಿದೆ. ಮೊದಲ ಬಾರಿಗೆ ಹಂಚಿಕೆ ಮಾಡಿದಾಗ ಈ ಬಡಾವಣೆಯಲ್ಲಿ ನಿವೇಶನಗಳ ಬೆಲೆ ಪ್ರತಿ ಚದರಡಿಗೆ ರೂ.೨,೦೦೦ ಇತ್ತು. ಈಗ ಪ್ರಾಧಿಕಾರವು ಬೆಲೆಯನ್ನು ಪ್ರತಿ ಚದರಡಿಗೆ ರೂ.೩,೨೦೦ ನಿಗಧಿಪಡಿಸಿದೆ. ಅಂದರೆ ಒಂದು ೩೦x೪೦ ನಿವೇಶನಕ್ಕೆ ರೂ.೩೮ ಲಕ್ಷ.
ಈವರೆಗೆ ಬಿಡಿಎ ವತಿಯಿಂದ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ (ಯುಜಿಡಿ) ಹಾಗೂ ವಿದ್ಯುತ್ ಸಂಪರ್ಕದಂತಹ ಮೂಲಭೂಸೌಕರ್ಯ ಒದಗಿಸುವ ಕೆಲಸಗಳ ಪೈಕಿ ಶೇ.೫೦ರಷ್ಟು ಪೂರ್ಣಗೊಳಿಸಲಾಗಿದೆ. ಈ ವರ್ಷ ಡಿಸೆಂಬರ್ ತಿಂಗಳೊಳಗೆ ಎಲ್ಲಾ ಮೂಲಭೂಸೌಕರ್ಯಗಳನ್ನು ಒದಗಿಸುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಿಳಿಸಿತ್ತಾದರೂ ಬಿಡಿಎ ತನ್ನ ಮಾತನ್ನು ಉಳಿಸಿಕೊಂಡಿಲ್ಲ. ಈ ಸಂಬಂಧ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರು, ಪ್ರಾಧಿಕಾರದ ವತಿಯಿಂದ ಕರ್ನಾಟಕ ರಿಯಲ್ ಎಸ್ಟೇಟ್ ರೆಗ್ಯೂಲೇಟರಿ ಅಥಾರಿಟಿ (ಕೆ-ರೆರಾ)ಗೆ ಮೂರರಿಂದ ಆರು ತಿಂಗಳ ಕಾಲಾವಧಿ ವಿಸ್ತರಿಸುವಂತೆ ಕೋರಲಾಗುವುದು ಎಂದು ತಿಳಿಸಿದ್ದಾರೆ.
ಕೋವಿಡ್-೧೯ರ ಸಂಬಂಧ ವಿಧಿಸಲಾಗಿದ್ದಂತಹ ನಿಬಂಧನೆಗಳಿಂದಾಗಿ ಕಾಮಗಾರಿಗಳು ವಿಳಂಬವಾಗಿದೆ ಎನ್ನುವುದು ಅವರ ವಾದ. “ನೀರು ಸರಬರಾಜು ಮತ್ತು ಯುಜಿಡಿ ಕಾಮಗಾರಿಗಳು ನಿಗಧಿತ ಗುರಿಯ ಬಹುಪಾಲು ಮುಗಿದಿದೆ,” ಎನ್ನುತ್ತಾರೆ. ಆದರೂ ಇನ್ನೂ ನೀರು ಅಥವಾ ವಿದ್ಯುತ್ ಸಂಪರ್ಕದ ವ್ಯವಸ್ಥೆ ಕಲ್ಪಿಸದೇ ಇರುವುದರಿಂದಾಗಿ ಇನ್ನೂ ಈ ಬಡಾವಣೆ ಒಂದು ಗ್ರಾಮದಂತೆ ಗೋಚರಿಸುತ್ತದೆ. ಈವರೆಗೂ ಕೇವಲ ಒಬ್ಬರೇ ಒಬ್ಬರು ಇಲ್ಲಿ ಮನೆ ನಿರ್ಮಿಸಿಕೊಳ್ಳುವ ಧೈರ್ಯ ಮಾಡಿದ್ದಾರೆ. ಬಿಡಿಎ ಈ ಬಡಾವಣೆಯಲ್ಲಿ ರಸ್ತೆಗಳಿಗೆ ಡಾಂಬಾರು ಹಾಕುವ ಸಂಬAಧವೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ಎಸ್ಕೊ ಬ್ಯಾಂಕ್ ಖಾತೆ
ಬಿಡಿಎ ಮೂಲೆ ನಿವೇಶನಗಳನ್ನು ಹರಾಜು ಹಾಕಲು ಯೋಜಿಸಿರುವ ನಡುವೆಯೇ, ನಿವೇಶನ ಹಂಚಿಕೆದಾರರು ಹರಾಜಿನಿಂದ ಬರುವಂತಹ ಹಣವನ್ನು ಸಂಪೂರ್ಣವಾಗಿ ಕೇವಲ ಈ ಬಡಾವಣೆಯ ಅಭಿವೃದ್ಧಿಗಾಗಿ ಮಾತ್ರ ಬಳಸುವಂತೆ ಒತ್ತಾಯಿಸಿದ್ದಾರೆ.
ಎನ್ಪಿಕೆಎಲ್ ಸಂಘದ ಓರ್ವ ಸದಸ್ಯರಾದ ಸೂರ್ಯ ಕಿರಣ್ ಅವರು ಈ ಸಂಬಂಧ ಮಾತನಾಡಿ, “ಬಿಡಿಎ ಒಂದು ಎಸ್ಕೊ ಬ್ಯಾಂಕ್ ಖಾತೆಯನ್ನು ಸೃಷ್ಟಿಸಬೇಕು. ಐದು ವರ್ಷಗಳ ಹಿಂದೆಯೇ ನಿವೇಶನಗಳನ್ನು ಹಂಚಿಕೆ ಮಾಡಿದ್ದರೂ ಸಹ ಬಿಡಿಎಗೆ ಈವರೆಗೂ ಮೂಲಭೂತಸೌಕರ್ಯವನ್ನು ಪೂರ್ಣಗೊಳಿಸುವುದು ಸಾಧ್ಯವಾಗಿಲ್ಲ. ಕಾಮಗಾರಿಗಳ ವಿಳಂಬದಿಂದಾಗಿ ಅನೇಕರು ಈ ಹರಾಜಿನಲ್ಲಿ ಪಾಲ್ಗೊಳ್ಳಲು ಹಿಂಜರಿಯುವ ಸಾಧ್ಯತೆಯೂ ಇದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Decision – auction – 3,370 corner -sites -Kempegowda layout – BDA