ಬೆಂಗಳೂರು,ಆಗಸ್ಟ್,26,2022(www.justkannada.in): ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ ಬ್ಯಾಂಕ್) 7.74 ಕೋಟಿ ರೂ. ಲಾಭ ಗಳಿಸುವ ಮೂಲಕ ಸಾಲ ವಿತರಣೆ ಮತ್ತು ಸಾಲ ವಸೂಲಾತಿಯಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಚಾಮರಾಜಪೇಟೆಯಲ್ಲಿನ ಬ್ಯಾಂಕ್ ನ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಚಿವರು, ಸರ್ಕಾರ ನಿಗದಿಪಡಿಸಿರುವ ಸಾಲದ ಗುರಿಯನ್ನು ತಲುಪಬೇಕು. ಸಾಲ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು. ಅರ್ಹ ರೈತರೆಲ್ಲರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆಯಾಗಬೇಕು ಎಂದರು.
ರೈತರಿಂದ ಹೆಚ್ಚುವರಿ ಹಣ ಸಂಗ್ರಹ ಮಾಡುತ್ತಿರುವ ಆರೋಪದ ಬಗ್ಗೆ ಏನೆಲ್ಲಾ ಕ್ರಮವಹಿಸಲಾಗಿದೆ ಎಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ನಾಲ್ಕು ಅಧಿಕಾರಿಗಳ ತಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ರೈತರೊಂದಿಗೆ ವಿಚಾರಣೆ ನಡೆಸಿದ್ದು, ಯಾವುದೇ ಹೆಚ್ಚುವರಿ ಬಡ್ಡಿ ವಸೂಲಿ ಮಾಡುತ್ತಿಲ್ಲ ಎಂದು ವರದಿ ನೀಡಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.
ಸಾಲ ವಿತರಣೆ ಕುರಿತಂತೆ ನಿಗದಿಪಡಿಸಿದ ಗುರಿಯನ್ನು ತಲುಪಬೇಕು. ವಸತಿ, ನಿವೇಶನ ಸಾಲ, ಚಿನ್ನದ ಸಾಲ ಸೇರಿದಂತೆ ಸಹಕಾರ ಸಂಘಗಳಿಗೆ, ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಣೆ ಮತ್ತು ಸಂಘಗಳ ಅಭಿವೃದ್ಧಿಗೆ ಬ್ಯಾಂಕ್ ಮುಂದಾಗಬೇಕು ಎಂದರು.
ಈ ವರ್ಷ ಬ್ಯಾಂಕ್ ಗೆ 818 ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ ನೀಡಲಾಗಿದ್ದು, ಏಪ್ರಿಲ್ ನಿಂದ ಇಲ್ಲಿಯವರೆಗೆ 200 ಕೋಟಿ ರೂ.ಗಳಷ್ಟು ಅಲ್ಪಾವಧಿ ಕೃಷಿ ಸಾಲ, 12 ಕೋಟಿ ರೂ. ಮಧ್ಯಮಾವಧಿ ಸಾಲ ವಿತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಬ್ಯಾಂಕ್ 1768 ಸದಸ್ಯರನ್ನು ಹೊಂದಿದ್ದು61.07 ಕೋಟಿ ರೂ.ಷೇರು ಬಂಡವಾಳವನ್ನು ಹೊಂದಿದೆ. 872.63 ಕೋಟಿ ರೂ. ಠೇವಣಿಗಳನ್ನು ಹೊಂದಿದ್ದು, 1010.01 ಕೋಟಿ ರೂ. ಸಾಲ ಮತ್ತು ಮುಂಗಡಗಳನ್ನು ಹೊಂದಿದೆ. 451 ಸ್ವಸಹಾಯ ಗುಂಪುಗಳಿಗೆ 25.30 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿಗಳಿಗೆ ಪ್ರಪ್ರಥಮವಾಗಿ ಕಲ್ಪಿಸಿರುವ 3 ಲಕ್ಷ ರೂ.ಗಳ ಆರೋಗ್ಯ ವಿಮೆ ಯೋಜನೆಯ ಕಾರ್ಡ್ ಗಳನ್ನು ಸಚಿವರು ವಿತರಿಸಿದರು. ಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷರಾದ ಡಿ.ಹನುಮಂತಯ್ಯ, ಉಪಾಧ್ಯಕ್ಷರಾದ ಎಂ.ಸಿ.ಪಟ್ಟಾಭಿರಾಮಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಪುಂಡಲಿಕ ಎಲ್ ಸಾಧುರೆ ಸೇರಿದಂತೆ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.
Key words: BDCC Bank -Rs 7.74 crore-. Benefit: -Cooperation Minister -ST Somasekhar