ಬೆಂಗಳೂರು,ಡಿಸೆಂಬರ್,18,2021(www.justkannada.in): ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ ಎಂಇಎಸ್ ಪುಂಡರ ಪುಂಡಾಡಿಕೆಗೆ ಇಡೀ ರಾಜ್ಯದಲ್ಲೇ ತೀವ್ರಖಂಡನೆ ವ್ಯಕ್ತವಾಗಿದ್ದು ಅವರನ್ನ ಬಂಧಿಸಿ ಜೈಲಿಗಟ್ಟುವಂತೆ ಆಕ್ರೋಶದ ಕೂಗು ಎದ್ದಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಬೆಳಗಾವಿಯಲ್ಲಿ ಶಾಂತಿ ಕದಡಲು ಈ ರೀತಿ ಪುಂಡಾಟಿಕೆ ನಡೆಸಿದ್ದಾರೆ. ರಾತ್ರಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿ, ಸರ್ಕಾರಿ ವಾಹನ ಖಾಸಗಿ ವಾಹನಗಳ ಜಖಂ ಮಾಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಶಿವಾಜಿ, ಸಂಗೊಳ್ಳಿ ರಾಯಣ್ಣ ಮಹಾನ ವ್ಯಕ್ತಿಗಳು. ಮಹಾನ್ ವ್ಯಕ್ತಿಗಳ ಹೆಸರಲ್ಲಿ ರಾಜಕೀಯ ಮಾಡಬಾರದು. ಪ್ರತಿಮೆ ಧ್ವಂಸಮಾಡಿದವರನ್ನ ಕ್ಷಮಿಸಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ಧಾರೆ.
ಕಿಡಿಗೇಡಿಗೆಳ ಕೃತ್ಯಕ್ಕೆ ಸಚಿವ ಗೋವಿಂದ ಕಾರಜೋಳ ಖಂಡನೆ.
ಕಿಡಿಗೇಡಿಗಳ ಈ ಕೃತ್ಯವನ್ನ ಖಂಡಿಸಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ದುಷ್ಕರ್ಮಿಗಳು ವಿಕೃತ ಗೊಳಿಸಿರುವ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆ ಖಂಡನಾರ್ಹ. ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಮರಣವನ್ನಪ್ಪಿ ದೇಶಕ್ಕೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡಿವರು. ಬ್ರಿಟಿಷರ ವಿರುದ್ಧ ಕಾದಾಡಿ ನಾಡಿನ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದವರು. ದೇಶಭಕ್ತನಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನಿನಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ನಾಡಿನ ಜನತೆ ಶಾಂತಿ ಕಾಪಾಡಲು ವಿನಂತಿಸುತ್ತೇನೆ ಎಂದಿದ್ದಾರೆ.
Key words: No politics – name -great men- action- Home Minister- Araga Jnanendra