ಬೆಂಗಳೂರು:ಮೇ-11:(www.justkannada.in) ಒಂದೆಡೆ ಬರ ಇನ್ನೊಂದೆಡೆ ಮಳೆ ಅಭಾವದಿಂದ ಹೆಚ್ಚುತ್ತಿರುವ ತಾಪನದಿಂದಾಗಿ ರಾಜ್ಯದ ಜನತೆ ತತ್ತರಿಸಿಹೋಗುತ್ತಿದ್ದಾರೆ. ಬಿಸಿಲ ಝಳದ ಜತೆಗೆ ಬಿಸಿಗಾಳಿ ಬೀಸುತ್ತಿದ್ದು ಜನರು ಬಸವಳಿದು ಹೋಗುತ್ತಿದ್ದು, ಮುಂಜಾನೆಯಿಂದಲೇ ಬಿಸಿಲ ಪ್ರಖರತೆ ಹೆಚ್ಚುತ್ತಿದ್ದು, ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಬಿಸಿಲ ಬೇಗೆ ಉಲ್ಬಣಗೊಳ್ಳಲು ಮುಂಗಾರುಪೂರ್ವ ಮಳೆ ಕೊರತೆ ಕಾರಣ ಎನ್ನುವುದು ಹವಾಮಾನ ತಜ್ಞರ ಅಭಿಮತ. ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮೇಲ್ಮೈ ಸುಳಿಗಾಳಿ, ಚಂಡಮಾರುತ ಪ್ರಭಾವದಿಂದ ಸ್ವಲ್ಪ ಮಳೆಯಾಗಿದೆಯಾದರೂ ವಾಡಿಕೆಯಷ್ಟು ಮಳೆ ಬಿದ್ದಿಲ್ಲ. ಹೀಗಾಗಿ, ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡಿನಲ್ಲಿ ಪರಿಸ್ಥಿತಿ ಗಂಭೀರವಾಗಿದೆ.
ಕಲಬುರಗಿ 43 ಡಿಗ್ರಿ ತಾಪಮಾನ, ರಾಯಚೂರಿನಲ್ಲಿ 41.50 ಡಿಗ್ರಿ, ಬೀದರ್ 39.60, ವಿಜಯಪುರ 39 ಡಿಗ್ರಿ, ಬಾಗಲಕೋಟೆ 37.60, ಗದಗ 37.10, ಕೊಪ್ಪಳ 36.50, ಚಿಂತಾಮಣಿ 36.90, ಕಾರವಾರ 36.80, ಚಾಮರಾಜನಗರ 36.2 ಡಿಗ್ರಿ ತಾಪಮಾನ ದಾಖಲಾಗಿದೆ.
ಇನ್ನು ಮಲೆನಾಡು ಜಿಲ್ಲೆಗಳಾಗದ ಶಿವಮೊಗ್ಗದಲ್ಲಿ 35 ಡಿಗ್ರಿ, ಮಡಿಕೇರಿ 26 ಡಿಗ್ರಿ, ಚಿಕ್ಕಮಗಳೂರು 30ಡಿಗ್ರಿ ಉಷ್ಣತೆ ದಾಖಲಾಗಿದೆ. ತಂಪಿನ ತಾಣವಾದ ಆಗುಂಬೆಯಲ್ಲಿ 33 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.