ಬೆಂಗಳೂರು,ಆ,1,2020(www.justkannada.in): ವಾಸಕ್ಕಾಗಿ ಬಳಸುವ ಆಸ್ತಿಗಳ ನೋಂದಣಿ ಶುಲ್ಕವನ್ನು ಕಡಿತಗೊಳಿಸುವ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಎಫ್.ಕೆ.ಸಿ.ಸಿ.ಐ. ಮನವಿ ಮಾಡಿದೆ.
ಈ ಸಂಬಂಧ ಸಿಎಂಗೆ ಮನವಿ ಮಾಡಿರುವ ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ಸಿ ಆರ್ ಜನಾರ್ಧನ್ , ಸರ್ಕಾರವು ಇತ್ತೀಚೆಗೆ ವಾಸಕ್ಕಾಗಿ ಬಳಸುವ ಆಸ್ತಿಗಳ ನೋಂದಣಿ ಶುಲ್ಕವನ್ನು ಆಸ್ತಿಗಳ ಒಟ್ಟು ಬೆಲೆಯ ಆಧಾರದಲ್ಲಿ ರೂ.21 ಲಕ್ಷದಿಂದ ರೂ.35 ಲಕ್ಷದ ಒಳಗಿನ ಆಸ್ತಿಗಳ ಖರೀದಿಗೆ ಶೇಕಡಾ 3ರಷ್ಟು ಮುದ್ರಾಂಕ ಶುಲ್ಕ ವಿಧಿಸಿದೆ, ರೂ. 35 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಕಟ್ಟಡಗಳಿಗೆ ಶೇಕಡಾ 5ರಷ್ಟು ಮುದ್ರಾಂಕ ಶುಲ್ಕ ವಿಧಿಸಿರುತ್ತಾರೆ. ಕೋವಿಡ್-19 ನಿಂದಾಗಿ ರಿಯಲ್ ಎಸ್ಟೇಟ್ ಉದ್ಯಮವು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದು, ಯೋಜನೆಗಳು ಪೂರ್ಣವಾಗಿ ವ್ಯಾಪಾರವಾಗದೇ, ಸಾಕಷ್ಟು ನಷ್ಟವನ್ನು ಉದ್ಯಮಿಗಳು ಭರಿಸಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ಕೇಂದ್ರ ಸರ್ಕಾರವು ಕೋವಿಡ್ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನ ನೀಡುವ ದೃಷ್ಠಿಯಿಂದ ಆತ್ಮ ನಿರ್ಭರ್ ಭಾರತ್ ಅಡಿಯಲ್ಲಿ ಅನೇಕ ಪರಿಹಾರಗಳನ್ನು ಘೋಷಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮವು ರಾಜ್ಯದ ಆರ್ಥಿಕತೆಗೆ ರಾಜಸ್ವ ಒದಗಿಸುವ ಕ್ಷೇತ್ರವಾಗಿದ್ದು, ರಾಜ್ಯ ಸರ್ಕಾರವು ಮುದ್ರಾಂಕ ಶುಲ್ಕವನ್ನು ಪುನರ್ ಪರಿಶೀಲಿಸಬೇಕೆಂದು ದಿನಾಂಕ: 22.07.2020ರ ಪತ್ರದಲ್ಲಿ ಮುಖ್ಯಮಂತ್ರಿಗಳನ್ನು ಕೋರಲಾಗಿದೆ.
ಮುದ್ರಾಂಕ ಶುಲ್ಕವನ್ನು ಮಿತಿಗೆ ಒಳಪಡಿಸದೇ ರೂ. 35 ಲಕ್ಷಕ್ಕೂ ಹೆಚ್ಚಿನ ಬೆಲೆಯುಳ್ಳ ವಾಸದ ಕಟ್ಟಡಗಳಿಗೆ ಶೇ.3ರಷ್ಟು ಮುದ್ರಾಂಕ ಶುಲ್ಕ ವಿಧಿಸುವುದರಿಂದ ರಾಜ್ಯವು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಚೈತನ್ಯ ನೀಡಿದಂತಾಗುತ್ತದೆ ಎಂದು ತಿಳಿಸುತ್ತಾ, ಸರ್ಕಾರವು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಎಫ್.ಕೆ.ಸಿ.ಸಿ.ಐ. ಮಹಾಸಂಸ್ಥೆಯು ಆಗ್ರಹ ಪಡಿಸುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Key words: Reduction – registration -fees –residential-FKCCI