ಮೈಸೂರು,ನವೆಂಬರ್,23,2021(www.justkannada.in): ಆಪರೇಷನ್ ಕಮಲದಲ್ಲಿ ಬಿಜೆಪಿಯವರು ಎಂಎಲ್ ಎ ಗಳನ್ನೆ ಹೈಜಾಕ್ ಮಾಡಿದ್ದಾರೆ. ಹಣ ಬಲದಿಂದ ಶಾಸಕರನ್ನೆ ಖರೀದಿಸಿದ್ದಾರೆ. ಈಗಿನ ಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಇತರರನ್ನು ಖರೀದಿ ಮಾಡುವ ಪ್ರಯತ್ನ ಮಾಡುತ್ತೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಆರೋಪ ಮಾಡಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ಆರ್.ಧೃವನಾರಾಯಣ್, ಶಾಸಕರನ್ನೇ ಖರೀದಿಸುವ ಬಿಜೆಪಿಯವರು ಗ್ರಾಮ ಪಂಚಾಯತ್ ಸದಸ್ಯರನ್ನು ಖರೀದಿಸಲು ಯತ್ನಿಸುವುದಿಲ್ವಾ..? ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆ ಗೆಲ್ಲಲು ಬಿಜೆಪಿ ಈ ತಂತ್ರ ಮಾಡುತ್ತಿದೆ. ತಮ್ಮ ಸದಸ್ಯರ ಸಂಖ್ಯೆ ಕಡಿಮೆ ಇದ್ದರೂ, ಬೇರೆ ಪಕ್ಷದ ಸದಸ್ಯರನ್ನ ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿಯವರು ಏನೇ ತಂತ್ರ ಮಾಡಿದರೂ ಮೈಸೂರು ಚಾಮರಾಜನಗರದದಲ್ಲಿ ನಮ್ಮ ಅಭ್ಯರ್ಥಿ ಗೆದ್ದೆ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯದ ಟಿಕೆಟ್ ವಿಚಾರದಲ್ಲಿ ಎಸ್.ಎಂ ಕೃಷ್ಣ ಪಾತ್ರ ಇದೆ ಎಂಬುದು ಸುಳ್ಳು. ಸ್ಥಳೀಯ ನಾಯಕರ ತೀರ್ಮಾನದಂತೆ ದಿನೇಶ್ ಗೂಳಿಗೌಡಗೆ ಟಿಕೆಟ್ ಕೊಡಲಾಗಿದೆ. ಬಿಜೆಪಿಯವರು ಪ್ರತಿ ಬಾರಿಯೂ ಇಂತಹ ಸುಳ್ಳುಗಳನ್ನ ಹರಿದು ಬಿಡುತ್ತಾರೆ. ಬಿಜೆಪಿ ಅಂದ್ರೆ ಅದು ಸುಳ್ಳಿನ ಪಕ್ಷ ಎಂದು ಆರ್.ಧೃವನಾರಾಯಣ್ ಕಿಡಿಕಾರಿದರು.
ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಕೇಳಿದ ಯಾವ ಪ್ರಶ್ನೆಗಳಿಗೂ ಬಿಜೆಪಿ ಉತ್ತರ ನೀಡುತ್ತಿಲ್ಲ. ಬಿಟ್ ಕಾಯಿನ್ ವಿಚಾರದಲ್ಲಿ ಬರಿ ಪಲಾಯನ ಮಾಡುತ್ತಿದೆ. ಪ್ರಶ್ನೆ ಕೇಳಿದರೆ ವೈಯಕ್ತಿಕ ತೇಜೋವಧೆಗೆ ಇಳಿಯುತ್ತಿದೆ. ಕಾಂಗ್ರೆಸ್ ಈ ವಿಚಾರದಲ್ಲಿ ತನ್ನ ಧ್ವನಿ ತಗ್ಗಿಸುವುದಿಲ್ಲ. ಪರಿಷತ್ ಚುನಾವಣೆ ಬಳಿಕ ಹೋರಾಟ ಆರಂಭಿಸುತ್ತೇವೆ ಎಂದು ಆರ್.ಧ್ರುವನಾರಾಯಣ್ ಹೇಳಿದರು.
Key words: mysore- legislative council-election –KPCC- Work president-R. Dhruvanarayan.