ಸಂಪೂರ್ಣವಾಗಿ ಅಸಹಾಯಕವಾಗಿರುವ ಬಿಬಿಎಂಪಿಯ ‘ಸಹಾಯ 2.0 ಆ್ಯಪ್’

 

ಬೆಂಗಳೂರು, ಆಗಸ್ಟ್ 4, 2021 (www.justkannada.in): ನಾಗರಿಕರಿಗೆ ತಮ್ಮ ಕುಂದುಕೊರತೆಗಳನ್ನು ಸಲ್ಲಿಸಲೆಂದು ಬಿಬಿಎಂಪಿ ಪರಿಚಯಿಸಿದ್ದಂತಹ ‘ಸಹಾಯ ೨.೦ ಮೊಬೈಲ್ ಅಪ್ಲಿಕೇಷನ್ ಕ್ರಮೇಣ ನಿರುಪಯುಕ್ತವಾಗುತ್ತಿದೆ. ತಮ್ಮ ಕುಂದುಕೊರತೆಗಳನ್ನು ಬಗೆಹರಿಸದೆ ಹಲವು ಬಾರಿ ಸುಮ್ಮನೆ ದೂರುಗಳನ್ನು ಮುಕ್ತಾಯಗೊಳಿಸಿದ ಕಾರಣದಿಂದಾಗಿ ಬೆಂಗಳೂರು ನಗರದ ಅನೇಕ ನಿವಾಸಿಗಳು ತಮ್ಮ ಮೊಬೈಲ್‌ ಗಳಿಂದ ಬಿಬಿಎಂಪಿಯ ಈ ಆ್ಯಪ್ ಅನ್ನು ಅನ್‌ ಇನ್ ಸ್ಟಾಲ್ ಮಾಡಿಕೊಂಡಿದ್ದಾರಂತೆ. ಬಿಬಿಎಂಪಿಯು ಬೆಂಗಳೂರು ನಗರದ ನಾಗರಿಕರಿಗೆ ಈ ಆ್ಯಪ್ ಮೂಲಕ ಯಾವುದೇ ನಾಗರಿಕ ಸಮಸ್ಯೆಗಳಿಗೆ ಅಥವಾ ಕುಂದುಕೊರತೆಗಳಿಗೆ ಪರಿಹಾರವನ್ನು ಒದಗಿಸುವುದಾಗಿ ಆಶ್ವಾಸನೆ ನೀಡಿತ್ತು. ಅದೇ ರೀತಿ ಈ ಆ್ಯಪ್ ಅನ್ನು ಅನೇಕ ನಾಗರಿಕರು ಬಳಸುತ್ತಲೂ ಇದ್ದರು.

ಈ ಆ್ಯಪ್‌ ನ ಕೆಲವು ನಿರಂತರ ಬಳಕೆದಾರರು ಹೇಳುವಂತೆ ಈ ಆ್ಯಪ್‌ ನ ಹೆಸರನ್ನು ಕ್ರಮೇಣ ‘ನಮ್ಮ ಬೆಂಗಳೂರು’ ಎಂದು ಮರುನಾಮಕಾರಣ ಮಾಡಲಾಯಿತು. ಅದಾದ ನಂತರ ಸುಮಾರು ಒಂದು ವಾರದವರೆಗೆ ಆ್ಯಪ್ ಕೆಲಸ ಮಾಡಲಿಲ್ಲ. “ಆದರೆ ಇಂದಿನಿಂದ ಪುನಃ ಆ್ಯಪ್‌ ನಲ್ಲಿ ದೂರುಗಳು ಸಲ್ಲಿಕೆ ಆಗುತ್ತಿದೆ. ಆದರೆ ನಮ್ಮ ದೂರುಗಳನ್ನು ಗಂಭೀರವಾಗಿ ಪರಿಗಣಿಸದೇ ಇದ್ದಾಗ ದೂರು ಸಲ್ಲಿಸಿ ಏನು ಪ್ರಯೋಜನ?” ಎನ್ನುವುದು ಬಿಇಎಂಎಲ್ ನಿವಾಸಿ ಸಂದೀಪ್ ಕೃಷ್ಣಮೂರ್ತಿ ಅವರ ಅಭಿಪ್ರಾಯ.

ಮೊಬೈಲ್ ಅಪ್ಲಿಕೇಷನ್ ಹಾಗೂ ವೆಬ್‌ಸೈಟ್ ಎರಡೂ ಕಡೆಯಿಂದ ಬಿಬಿಎಂಪಿಗೆ ಪ್ರತಿ ತಿಂಗಳು ೧೦,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ದೂರುಗಳು ಬರುತ್ತವಂತೆ. ಈ ಪೈಕಿ ಬಹುಪಾಲು ದೂರುಗಳು ಕೆಲಸ ಮಾಡದ ಬೀದಿ ದೀಪಗಳು, ಅಸಮರ್ಪಕ ಕಸ ಸಂಗ್ರಹ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವಿಕೆ, ಬ್ಲಾಕ್ ಆಗಿರುವ ಮೋರಿಗಳು, ಫುಟ್‌ ಪಾತ್ ಅತಿಕ್ರಮಣ, ಇತ್ಯಾದಿಗಳಿಗೆ ಸೇರಿವೆ.

ಘನತ್ಯಾಜ್ಯ ನಿರ್ವಹಣೆ ಹಾಗೂ ವಿದ್ಯುತ್ ವಿಭಾಗದ ದೂರುಗಳು ಸ್ವಲ್ಪ ಬೇಗ ಬಗೆ ಹರಿಯಲ್ಪಡುತ್ತದೆ ಎನ್ನುವುದು ಕೆಲವು ನಾಗರಿಕರ ಅಭಿಪ್ರಾಯವಾಗಿದೆ. ರಸ್ತೆ ಮೂಲಭೂತಸೌಕರ್ಯ ಹಾಗೂ ಆರೋಗ್ಯ ವಿಭಾಗಗಳ ದೂರುಗಳನ್ನೂ ಯಾರೂ ಆಲಿಸುವವರೇ ಇಲ್ಲ. ಬಿಬಿಎಂಪಿಗಿಂತ, ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂ ಹಾಗೂ ಸಂಚಾರಿ ಪೊಲೀಸ್ ವಿಭಾಗಗಳೇ ದೂರುಗಳನ್ನು ಆಲಿಸಿ, ಬಗೆಹರಿಸುವಲ್ಲಿ ಎಷ್ಟೋ ಮೇಲು ಎನ್ನುವುದು ಅವರ ಅಭಿಪ್ರಾಯವಾಗಿದೆ.Emergency –Notice- issued - 66 - Hospitals -BBMP -Chief Commissioner

ಈ ಹಿಂದೆ ಬಿಬಿಎಂಪಿ ದೂರುಗಳಿಗೆ ಸಂಬಂಧಪಟ್ಟಂತೆ ಕಾಲ್‌ ಸೆಂಟರ್‌ ನ ಕಾರ್ಯನಿರ್ವಾಹಕರು ದೂರು ನೀಡಿರುವವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿದಿರುವುದನ್ನು ಖಾತ್ರಿಪಡಿಸಿಕೊಂಡು ನಂತರವೇ ದೂರನ್ನು ಮುಕ್ತಾಯಗೊಳಿಸುತ್ತಿದ್ದರು. ಅದೇ ವ್ಯವಸ್ಥೆಯನ್ನು ಪುನರಾರಂಭಿಸಿ ಎನ್ನುವುದು ಜಾಲಹಳ್ಳಿ ಕ್ರಾಸ್‌ ನ ನಿವಾಸಿ ಅನಿಲ್ ಕುಮಾರ್ ಅವರ ಅಭಿಪ್ರಾಯ. “ದೂರನ್ನು ಮುಕ್ತಾಯಗೊಳಿಸಲು ವಾರ್ಡ್ ನ ಇಂಜಿನಿಯರ್‌ ಗಳಿಗೆ ಅನುಮತಿಸಿದ ನಂತರ, ನಮ್ಮ ದೂರುಗಳನ್ನು ಬಗೆಹರಿಸಲು ಯಾವುದೇ ಪ್ರಾಮಾಣಿಕ ಪ್ರಯತ್ನಗಳಾಗುತ್ತಿಲ್ಲ ಎನುವುದನ್ನು ಗಮನಿಸಿದ್ದೇವೆ. ಕಳೆದ ೮-೧೦ ವರ್ಷಗಳಲ್ಲಿ ಆ್ಯಪ್ ಬಳಸಿ ನಮ್ಮ ಬಡಾವಣೆಯಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಇಂಜಿನಿಯರುಗಳು ಏನೋ ಒಂದು ಕಾರಣ ನೀಡಿ ದೂರುಗಳನ್ನು ಮುಕ್ತಾಯಗೊಳಿಸುತ್ತಿದ್ದಾರೆ,” ಎನ್ನುತ್ತಾರೆ.

ಜಾಲಹಳ್ಳಿ ಕ್ರಾಸ್ (ಪೀಣ್ಯ ಕೈಗಾರಿಕಾ ಪ್ರದೇಶದ ಕಡೆಗೆ) ಹಿಂಭಾಗದಲ್ಲಿದ್ದಂತಹ ಯಾರೂ ಉಪಯೋಗಸದೇ ಇದ್ದಂತಹ ಶೌಚಾಲಯ ಬಹಳ ಗಲೀಜಾಗಿದೆ. ಈ ಕುರಿತಂತೆ ನಾನು ಕಳೆದ ಐದು ವರ್ಷಗಳಿಂದಲೂ ದೂರನ್ನು ನೀಡುತ್ತಲೇ ಇದ್ದೇನೆ. ಆದರೆ ಇಂಜಿನಿಯರುಗಳು ಈ ಕಡೆ ಗಮನವೇ ನೀಡಿಲ್ಲ. ಆದರೆ ನಾನು ಸಮಸ್ಯೆ ಬಗೆಹರಿಯುವವರೆಗೂ ದೂರು ನೀಡುವುದನ್ನು ಮುಂದುವರೆಸುತ್ತೇನೆ,” ಎನ್ನುತ್ತಾರೆ ಅವರು.

“ಬಿಬಿಎಂಪಿ ಎಸ್‌ಎಂಎಸ್ ಸೇವೆಗಳನ್ನೂ ಹಿಂದಕ್ಕೆ ಪಡೆದುಕೊಂಡಿದೆ. ಈ ಹಿಂದೆ ನಮ್ಮ ದೂರಿನ ಸ್ಥಿತಿಗತಿಯ ಕುರಿತು ಎಸ್‌ಎಂಎಸ್ ಬರುತ್ತಿತ್ತು. ಆದರೆ ಈಗ ಬರುತ್ತಿಲ್ಲ,” ಎನ್ನುತ್ತಾರೆ ಸಂದೀಪ್ ಕೃಷ್ಣಮೂರ್ತಿ.

ಹಗಡೂರಿನ ನಿವಾಸಿ ಮುರಳಿ ಅವರ ಪ್ರಕಾರ, ಈ ಕುಂದುಕೊರತೆ ಆಲಿಸುವ ವ್ಯವಸ್ಥೆಯನ್ನು ಬಿಬಿಎಂಪಿ ಸುಧಾರಿಸಬೇಕು. ಏಕೆಂದರೆ ಇದು ಅನೇಕರಿಗೆ ಸಹಾಯವಾಗಿದೆ. “ಬಿಬಿಎಂಪಿ ಎಲ್ಲಾ ವಾರ್ಡುಗಳಲ್ಲಿಯೂ ವಾಟರ್‌ ಮೆನ್ ಹಾಗೂ ವರ್ಕ್ ಇನ್ಸ್ಪೆಕ್ಟರ್‌ ಗಳನ್ನು ಹೊಂದಿದೆ. ಜೊತೆಗೆ ವಾರ್ಡುಗಳಲ್ಲಿ ಟ್ರ್ಯಾಂಕ್ಟರ್ ಹಾಗೂ ಗ್ಯಾಂಗ್‌ ಮೆನ್ ಸೇವೆಗಳನ್ನು ಪಡೆಯಲು ಹಣವೂ ಬಿಡುಗಡೆಯಾಗುತ್ತದೆ. ಆದರೆ ವಾರ್ಡುಗಳಲ್ಲಿ ಈ ವರ್ಕ್ ಇನ್ಸ್ಪೆಕ್ಟರ್‌ ಗಳು ಕಂಡು ಬರುವುದೇ ಇಲ್ಲ,” ಎನ್ನುತ್ತಾರೆ.

ಬಿಬಿಎಂಪಿಯ ವಿಶೇಷ ಆಯುಕ್ತರಾದ (ಐಟಿ) ರಣದೀಪ್ ಡಿ. ಅವರು ಈ ಕುರಿತು ಮಾತನಾಡಿ ನಾಗರಿಕರ ಸಲಹೆ ಅಭಿಪ್ರಾಯಗಳನ್ನು ಪಡೆದು, ವ್ಯವಸ್ಥೆಯನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ.

Key words: Completely- helpless-BBMP’-‘Help 2.0 App’