ಬೆಂಗಳೂರು,ಡಿಸೆಂಬರ್,10,2021(www.justkannada.in): ಕೇವಲ ವಾಣಿಜ್ಯ ಲಾಭದ ದೃಷ್ಟಿಯಿಂದ ಕಂಪನಿಗಳನ್ನು ನಡೆಸುವುದರ ಬದಲು ಸಮಾಜದ ಪ್ರತಿಯೊಬ್ಬರನ್ನೂ ಒಳಗೊಳ್ಳುವಂತಹ ದೃಷ್ಟಿಕೋನವು ಉದ್ಯಮಗಳಲ್ಲಿ ಬೇರೂರಬೇಕಾಗಿದೆ. ಇದರಿಂದ ಮಾತ್ರ ಸಮಾಜವು ಪ್ರಗತಿ ಸಾಧಿಸಬಲ್ಲದು ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಪ್ರತಿಪಾದಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ನಡೆದ 12ನೇ ಸಿಎಸ್ ಆರ್ ನಾಯಕತ್ವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅಶ್ವಥ್ ನಾರಾಯಣ್, ದೇಶದಲ್ಲಿರುವ ಯೂನಿಕಾರ್ನ್ ಕಂಪನಿಗಳಲ್ಲಿ ಶೇ.60ರಷ್ಟು ರಾಜ್ಯದಲ್ಲೇ ಇದ್ದು, ಇವು ಈಗ ಸಾಮಾಜಿಕ ವಲಯಗಳತ್ತಲೂ ಗಮನ ಹರಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದರು.
ರಾಜ್ಯದ ಸಮಗ್ರ ಬೆಳವಣಿಗೆಯ ದೃಷ್ಟಿಯಿಂದ ಇದುವರೆಗೂ ನಾನಾ ಇಲಾಖೆಗಳ ನಡುವೆ ಇದ್ದ ಪ್ರತ್ಯೇಕತೆಯ ಭಾವನೆಯನ್ನು ತೊಡೆದು ಹಾಕಲಾಗಿದೆ. ಕಂಪನಿಗಳು ಸಾಂಘಿಕ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಅವು ಭಾರತದ ಪುನಶ್ಚೇತನಕ್ಕೆ ಶಕ್ತಿಯನ್ನು ತುಂಬಬಲ್ಲವು ಎಂದು ಅವರು ಹೇಳಿದರು.
ಕಂಪನಿಗಳು ಜನರಿಗೆ ಸಮಾನ ಅವಕಾಶ ಕೊಡುವುದು ಅವುಗಳ ಆದ್ಯ ಕರ್ತವ್ಯವೆಂದು ಪರಿಗಣಿಸಬೇಕು. ಇಲ್ಲದೆ ಇದ್ದರೆ ಸಾಮಾಜಿಕ ಸಮತೋಲನವನ್ನು ಕಾಪಾಡುವುದು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಅಶ್ವಥ್ ನಾರಾಯಣ್ ಅಭಿಪ್ರಾಯಪಟ್ಟರು.
ಇವತ್ತು ಆಧುನಿಕ ತಂತ್ರಜ್ಞಾನಗಳ ಮೂಲಕ ಜನರಿಗೆ ಬೆರಳತುದಿಯಲ್ಲಿ ಸೇವೆಗಳನ್ನು ಒದಗಿಸಬಹುದು. ಒಂದು ಆಪ್ ನಲ್ಲಿರುವ ಮಾಹಿತಿಯನ್ನು ಸರಿಯಾಗಿ ಬಳಸಿಕೊಂಡರೆ ಇಡೀ ಸಮಾಜವನ್ನೇ ಮೇಲಕ್ಕೆತ್ತಬಹುದು. ರಾಜ್ಯ ಸರಕಾರವು ಈ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಆರಂಭಿಸಿದ್ದು, ಇವುಗಳ ಪರಿಣಾಮಕಾರಿ ಅನುಷ್ಠಾನವು ಉದ್ಯಮರಂಗಕ್ಕೆ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯ ಎದುರಿಗಿದೆ ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ನವೋದ್ಯಮ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಒನ್ ಬ್ರಿಡ್ಜ್ ಕಂಪನಿಯ ಸಂಸ್ಥಾಪಕ ಮದನ್ ಪದಕಿ, ಇಂಡಿಯಾ ಸಿಎಸ್ಆರ್ ನೆಟ್ವರ್ಕ್ ನಿರ್ದೇಶಕ ಅಪರೇಶ್ ಮಿಶ್ರ, ಉದ್ಯಮಿಗಳಾದ ಜ್ಯೋತ್ಸ್ನಾ ಬೆಳ್ಳಿಯಪ್ಪ, ಆರತಿ ಮೋಹನ್, ಇಶಾ ಚೌಧರಿ, ಅತುಲ್ ಸತೀಜಾ, ಅಂಕುಶ್ ಖನ್ನಾ, ಮನೋಜ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
Key words: Social- Inclusion- Perspectives – CSR-Companies –minister-Ashwath Narayan