ಮೈಸೂರು,ಡಿಸೆಂಬರ್,3,2021(www.justkannada.in): ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ರಾಣಿ ಗೇಟು ಜೇನು ಕುರುಬರ ಹಾಡಿ ಸಮೀಪ ನಡೆದಿದ್ದ ಹಾಡಿ ವಾಸಿ ಮೇಲೆ ಅರಣ್ಯ ಸಿಬ್ಬಂದಿಗಳಿಂದ ಗುಂಡು ಹಾರಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಗಂಧದ ಮರ ಕಳವು ಮಾಡಲು ಬಂದಾಗ ಹಾಡಿವಾಸಿ ಮೇಲೆ ಗುಂಡು ಹಾರಿಸಲಾಗಿದೆ ಎಂದು ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದೆ.
ಪಿರಿಯಾಪಟ್ಟಣದ ರಾಣಿ ಗೇಟು ಜೇನು ಕುರುಬರ ಹಾಡಿ ಸಮೀಪ ಹಾಡಿವಾಸಿ ಬಸವನ ಮೇಲೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದರು. ಹಾಡಿ ವಾಸಿ ಬಸವ ಗುಂಡೇಟಿನಿಂದ ಗಾಯಗೊಂಡಿದ್ದ. ಜಮೀನಿನಲ್ಲಿ ಜೋಳ ಕಟಾವು ಮಾಡಿ ಜಮೀನಿಗೆ ಬಹಿರ್ದೆಸೆಗೆ ಹೋಗಿದ್ದಾಗ ಗುಂಡು ಹಾರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಅರಣ್ಯ ಇಲಾಖೆ ವಾಚ್ ಮನ್ ಸುಬ್ರಮಣಿ ಸೇರಿ ಮೂವರಿಂದ ಕೊಲೆಗೆ ಯತ್ನ ಅಂತಾ ಆರೋಪ ಮಾಡಲಾಗಿತ್ತು. ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ. ದೊಡ್ಡಹರವೆ ಮೀಸಲು ಅರಣ್ಯ ಪ್ರದೇಶದಲ್ಲಿ ಗಂಧದ ಮರ ಕೆತ್ತನೆ ಮಾಡಲಾಗುತ್ತಿತ್ತು. ಮೂರು ಜನರಿಂದ ಈ ಕೃತ್ಯ ನಡೆದಿತ್ತು. ಈ ವೇಳೆ ಅವರನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಪ್ರಯತ್ನ ಮಾಡಿದ್ದರು.
ಶ್ರೀಗಂಧ ಕೆತ್ತನೆ ಮಾಡುತ್ತಿದ್ದ ಶ್ರೀಗಂಧಚೋರರು ಪ್ರತಿ ದಾಳಿ ಮಾಡಿದ್ದಾರೆ. ಈ ವೇಳೆ ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ. ಈ ವೇಳೆ ಆರೋಪಿಗೆ ಗುಂಡು ತಗುಲಿ ಗಾಯವಾಗಿದೆ. ಉಳಿದ ಇಬ್ಬರು ಆರೋಪಿಗಳಾದ ದಿಲೀಪ, ಸತೀಶ್ ಪರಾರಿಯಾಗಿದ್ದಾರೆ. ಗಾಯಗೊಂಡ ಆರೋಪಿಯನ್ನು ಇಲಾಖಾ ಸಿಬ್ಬಂದಿಗಳೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
Key words: mysore-Twist -case -firing -Hadi Vasi-Clarified – press release – Forest Department.