ಚಾಮರಾಜನಗರ,ಅಕ್ಟೋಬರ್,29,2021(www.justkannada.in): ಹಿಂದುಳಿದ ಜಿಲ್ಲೆ, ಮುಖ್ಯಮಂತ್ರಿ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಅಪವಾದ ಹೊತ್ತುಕೊಂಡಿದ್ದ ಚಾಮರಾಜನಗರ ಜಿಲ್ಲೆಯ ರೂಪುರೇಷೆ ಬದಲಿಸಿ, ಅಭಿವೃದ್ಧಿ ಮಾಡಲು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರಾಯಭಾರಿಯಾಗಿದ್ದರು.
ಹೌದು...ಸುರೇಶ್ ಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹೊತ್ತಿನಲ್ಲಿ ಡಿಸಿ ಡಾ.ಎಂ.ಆರ್.ರವಿ ‘ಚೆಲುವ ಚಾಮರಾಜನಗರ’ ಎಂಬ ವಿನೂತನ ಕಾರ್ಯಕ್ರಮ ರೂಪಿಸಿ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದರು. ಆ ವೇಳೆ, ಚಾಮರಾಜನಗರಕ್ಕೆ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಜಿಲ್ಲೆಯ ರಾಯಭಾರಿಯಾಗಬೇಕೆಂಬ ಕೋರಿಕೆಗೆ ಸಂತೋಷದಿಂದ ಒಪ್ಪಿದ್ದ ಅಪ್ಪು ರಾಯಭಾರಿಯಾಗಿ, ಜಿಲ್ಲೆಯ ಪ್ರಮೋಷನಲ್ ವಿಡಿಯೋದಲ್ಲೂ ಕಾಣಿಸಿಕೊಂಡು ಪ್ರವಾಸಿಗರನ್ನು ಕರೆದಿದ್ದರು.
ಕಳೆದ ದೀಪಾವಳಿ ಸಂದರ್ಭದಲ್ಲಿ ವರ್ಚ್ಯುಯಲ್ ಮೂಲಕ ” ಹುಲಿಗಳ ನಾಡು – ಚಾಮರಾಜನಗರ” ಎಂಬ ಪ್ರಮೋಷನಲ್ ವಿಡಿಯೋ ಬಿಡುಗಡೆ ಮಾಡಿ ಅಪ್ಪು ಮಾತನಾಡಿ, ಚಾಮರಾಜನಗರದ ರಾಯಭಾರಿಯಾಗಲು ಹೆಮ್ಮೆಯಿಂದ ಒಪ್ಪಿಕೊಂಡಿದ್ದೇನೆ, ನನ್ಮ ತಂದೆ ಊರಾದ ಚಾಮರಾಜನಗರದ ಅಭಿವೃದ್ಧಿಗೆ ಸದಾ ಸಿದ್ಧ, ನಮ್ಮ ರಾಜ್ಯ- ನಮ್ಮ ದೇಶ ಚೆನ್ನಾಗಿ ಬೆಳೆಯಬೇಕು ಎಂದು ಆಶಿಸಿದ್ದರು.
ಚಾಮರಾಜನಗರದ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಉತ್ಸುಕನಾಗಿದ್ದೇನೆ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಜೋಡಿಸುತ್ತೇನೆ, ಜಿಲ್ಲೆಯ ಸೌಂದರ್ಯವನ್ನು ಹೊರಭಾಗದ ಜನರಿಗೆ ತಲುಪಿಸಿ ಒಮ್ಮೆಯಾದರೂ ಭೇಟಿಕೊಡಬೇಕು ಎಂದನಿಸುವಂತೆ ಮಾಡಬೇಕು.
ಚಿತ್ರೀಕರಣ ಇಲ್ಲದಿದ್ದರೇ ನೇರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೆ ಎಂದು ತಿಳಿಸಿ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದರು.
Key words: power star –punith raj kumar- hometown-ambassador – Chamarajanagar- district