ಕೂನೂರು, ತಮಿಳುನಾಡು, ಡಿಸೆಂಬರ್ 9, 2021 (www.justkannada.in): ಗ್ರೂಪ್ ಕ್ಯಾಪ್ಟರನ್ ವರುಣ್ ಸಿಂಗ್, ತಮಿಳುನಾಡಿನ ವೆಲ್ಲಿಂಗ್ಟನ್ ನಲ್ಲಿರುವ ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನ (ಡಿಎಸ್ಎಸ್ಸಿ) ನಿರ್ದೇಶಕ ಸಿಬ್ಬಂದಿ, ಹಾಗೂ ನಿನ್ನೆ, ಅಂದರೆ ಬುಧವಾರದಂದು ಕೂನೂರು ಬಳಿ ನಡೆದ ಎಂಐ-೧೭ವಿ೫ ಹೆಲಿಕಾಪ್ಟರ್ ಅವಘಡದಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿ, ಶೇ.೮೦-೮೫ರಷ್ಟು ಸುಟ್ಟಗಾಯಗಳೊಂದಿಗೆ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ ಎಂದು ತಮಿಳುನಾಡು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಶೌರ್ಯಚಕ್ರ ವಿಜೇತರಾಗಿರುವ ವರುಣ್ ಸಿಂಗ್ ಅವರು ಬುಧವಾರ ನಡೆದಂತಹ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿಯಾಗಿದ್ದು, ಡಿಎಸ್ಎಸ್ಸಿಯಲ್ಲಿ ಅವರ ಚೇತರಿಕೆಗಾಗಿ ಪ್ರಾರ್ಥನೆಗಳು ನಡೆಯುತ್ತಿವೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ ಅವರ ಆರೋಗ್ಯಸ್ಥಿತಿಯ ಕುರಿತು ಏನೂ ಹೇಳುತ್ತಿಲ್ಲವೆಂದು, ಮುಂದಿನ 48 ಗಂಟೆಗಳ ಕಾಲ ಬಹಳ ಗಂಭೀರ ಎಂದು ತಿಳಿಸಿದ್ದಾರೆ.
ಸಿಂಗ್ ಅವರನ್ನು ಇತ್ತೀಚೆಗಷ್ಟೇ ವಿಂಗ್ ಕಮ್ಯಾಂಡರ್ ಪದವಿಯಿಂದ ಗ್ರೂಪ್ ಕ್ಯಾಪ್ಟನ್ ಪದವಿಗೆ ಬಡ್ತಿ ನೀಡಲಾಗಿದ್ದು, ಇತ್ತೀಚೆಗಷ್ಟೇ ಡಿಎಸ್ಎಸ್ಎಸ್ಸಿಗೆ ಸೇರ್ಪಡೆಯಾಗಿದ್ದರು. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರನ್ನೂ ಒಳಗೊಂಡಂತೆ ೧೩ ಮಂದಿ ಈ ಹೆಲಿಕಾಪ್ಟರ್ ಅಪಘಾತದಲ್ಲಿ ತಮ್ಮ ಪ್ರಾಣಗಳನ್ನು ಕಳೆದುಕೊಂಡರು.
ನಿಯಮಗಳ ಪ್ರಕಾರ, ಸರ್ಕಾರಿ ವೈದ್ಯರು ಹಾಗೂ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕೂನೂರಿನಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಮಿಲಿಟರಿ ವೈದ್ಯರು ಮೃತ ದೇಹಗಳ ಪೋಸ್ಟ್ ಮಾರ್ಟಮ್ ಅನ್ನು ನಡೆಸಿದರು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: helicopter –disaster-condition -valor champion -Varun Singh -critical – next 48 hours