ರಾಮನಗರ,ಡಿಸೆಂಬರ್,1,2020(www.justkannada.in): ಆಡಳಿತ ವಿಕೇಂದ್ರೀಕರಣವನ್ನು ಮತ್ತಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಿ ಪ್ರತಿ ಗ್ರಾಮ ಪಂಚಾಯಿತಿಗೂ ವರ್ಷಕ್ಕೆ 1.5 ರೂ. ಅನುದಾನವನ್ನು ನೇರವಾಗಿ ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಪ್ರಕಟಿಸಿದರು.
ರಾಮನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, 15ನೇ ಹಣಕಾಸು ಆಯೋಗದ ವರದಿಯಲ್ಲಿ ನೇರವಾಗಿ ಗ್ರಾಮ ಪಂಚಾಯಿತಿಗಳಿಗೇ ನೇರವಾಗಿ ಹೆಚ್ಚು ಅನುದಾನ ನೀಡುವ ಅಂಶಗಳಿವೆ. ಅದರಂತೆ, ಗ್ರಾಮೀಣಾಭಿವೃದ್ಧಿಗೆ ಬೇಕಾದ ಎಲ್ಲ ಹಣಕಾಸು ಒದಗಿಸಲಾಗುವುದು. ಜತೆಗೆ, ಆಯಾ ಗ್ರಾಮಗಳ ನರೇಗಾ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಜಿಲ್ಲಾ ಪಂಚಾಯಿತಿಯಿಂದ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುವುದು ಎಂದರು.
ನಮ್ಮ ಪಕ್ಷದ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಂತೆ ಆದರ್ಶ ಗ್ರಾಮಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಆರೋಗ್ಯ, ಮೂಲಸೌಕರ್ಯ, ಶಿಕ್ಷಣ, ರಸ್ತೆ, ಕೆರೆಕುಂಟೆ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು. ಕೇವಲ ಆರು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ವ್ಯವಸ್ಥೆ ಶೇ.30ರಷ್ಟು ಮಾತ್ರ ಇತ್ತು. ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಶೌಚಾಲಯ ಕಟ್ಟುವುದೂ ಅಸಾಧ್ಯ ಎನ್ನುವಂಥ ಸ್ಥಿತಿ ಇತ್ತು. ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನದಿಂದ ಇವತ್ತು ಗ್ರಾಮದ ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ಕಾಣಬಹುದು. ಸ್ವಚ್ಛತೆ ಎನ್ನುವುದು ಜನಜೀವನದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಎಲ್ಲೆಲ್ಲೂ ಕಾಣಬಹುದು ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
ಘೋಷಣೆಗಳಿಂದ ಉಪಯೋಗವಿಲ್ಲ:
ಗರೀಬಿ ಹಠಾವೋ ಸೇರಿದಂತೆ ಯಾವುದೇ ಘೋಷಣೆಗಳ ಮೂಲಕ ಗ್ರಾಮಗಳಲ್ಲಿ ಬಡತನ ನಿರ್ಮೂಲನೆ ಆಗಲಿಲ್ಲ. ಎಪ್ಪತ್ತು ವರ್ಷಗಳಾದರೂ ಬಡತನ ಜೀವಂತವಾಗಿದೆ. ಮಾತಿನ ಬದಲಿಗೆ ರಚನಾತ್ಮಕವಾಗಿ ಕೆಲಸ ಮಾಡಿದರೆ ಗ್ರಾಮಗಳು ಉದ್ಧಾರವಾಗುತ್ತವೆ. ಕಾಂಗ್ರೆಸ್ ಬರೀ ಘೋಷಣೆಗಳನ್ನು ಮಾಡುತ್ತಾ ಬಂದಿತ್ತು. ಅವುಗಳಲ್ಲಿ ಗರೀಬಿ ಹಠಾವೋ ಎನ್ನುವುದು ಕೂಡ ಒಂದು. ಇಂಥ ನೂರಾರೂ, ಸಾವಿರಾರು ಘೋಷಣೆಗಳನ್ನು ಕಾಂಗ್ರೆಸ್ ಮಾಡಿದೆಯಾದರೂ, ಸಿಕ್ಕಿರುವ ಫಲಿತಾಂಶ ಮಾತ್ರ ಶೂನ್ಯ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಟೀಕಿಸಿದರು. ಬಿಜೆಪಿ ಹಾಗೆ ಮಾಡುತ್ತಿಲ್ಲ. ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಮಾಡಲು ಯತ್ನಿಸುತ್ತಿದೆ. ಘೋಷಣೆ ಬದಲು ಕೆಲಸ ಮಾಡುತ್ತಿದೆ. ಪರಿಣಾಮವಾಗಿ ಭಾರತ ಬದಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.
ಕಾಂಗ್ರೆಸ್-ಜೆಡಿಎಸ್ ವಿಫಲ:
ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅನೇಕ ವರ್ಷಗಳಿಂದ ಆಡಳಿತ ನಡೆಸಿವೆ. ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ಕೊಟ್ಟಂಥ ಜಿಲ್ಲೆ ನಮ್ಮದು. ಅನೇಕ ನಾಯಕರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ನೆಲವೂ ರಾಮನಗರವೇ. ಹೀಗಿದ್ದರೂ ಜಿಲ್ಲೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಗೆದ್ದುಹೋದ ಮೇಲೆ ಜಿಲ್ಲೆಯನ್ನು ಮರೆತು, ಚುನಾವಣೆ ಬಂದಾಗ ಮಾತ್ರ ಪ್ರತ್ಯಕ್ಷವಾಗುವ ನಾಯಕರಿಗೆ ಪಾಠ ಕಲಿಸಬೇಕಾದ ಸಮಯ ಗ್ರಾಮ ಪಂಚಾಯಿತಿ ಚುನಾವಣೆ ಮೂಲಕ ಬಂದಿದೆ ಎಂದು ಡಾ.ಅಶ್ವತ್ ನಾರಾಯಣ್ ತಿಳಿಸಿದರು.
ಕೋವಿಡ್ ನಂಥ ಸಂಕಷ್ಟ ಕಾಲದಲ್ಲಿ ಜಿಲ್ಲಾಸ್ಪತ್ರೆಗೆ ಹೋಗಿ ನೋಡಿದಾಗ ಕೊನೆ ಪಕ್ಷ ಒಂದು ಸುಸಜ್ಜಿತ ಐಸಿಯು ಕೂಡ ಇರಲಿಲ್ಲ. ಸಣ್ಣ ಜ್ವರ ಬಂದರೂ ಬಸ್ ಹತ್ತಿ ಕೆಂಗೇರಿಗೆ ಹೋಗಬೇಕಾದ ಪರಿಸ್ಥಿತಿ. ಬೆಂಗಳೂರು-ಮೈಸೂರು ಹೆದ್ದಾರಿ ಆಯಕಟ್ಟಿನ ಜಾಗದಲ್ಲಿರುವ ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಇಂಥ ಅವ್ಯವಸ್ಥೆ ಇತ್ತು. ಒಂದು ತಾಲ್ಲೂಕು ಆಸ್ಪತ್ರೆಯಲ್ಲಿರಬೇಕಾದ ಬೇಸಿಕ್ ಸೌಲಭ್ಯಗಳೂ ಈ ಜಿಲ್ಲಾಸ್ಪತ್ರೆಯಲ್ಲಿ ಇರಲಿಲ್ಲ. ಈಗ ನೀವು ಯಾರೇ ಹೋಗಿ ನೋಡಿದರೂ ಆಸ್ಪತ್ರೆಯಲ್ಲಿ ಆಗಿರುವ ಬದಲಾವಣೆಗಳನ್ನು ನೋಡಬಹುದು. ಎಲ್ಲ ರೀತಿಯಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಜನರಿಗೆ ಬಿಜೆಪಿ ಮಾತ್ರ ಉತ್ತಮ ಆಯ್ಕೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.
ಈಗ ಪಂಚಾಯಿತಿ ಚುನಾವಣೆ ಬಂದಿದೆ. ನಮ್ಮ ಹಳ್ಳಿಗೆ ನಮ್ಮದೇ ಆಡಳಿತವನ್ನು ಆಯ್ಕೆ ಮಾಡಿಕೊಳ್ಳುವಂಥ ಚುನಾವಣೆ ಇದು. ಇಷ್ಟು ದಿನ ಒಬ್ಬರ ಹೆಸರಿನಲ್ಲಿ ಇನ್ನೊಬ್ಬರು, ಮತ್ತೊಬ್ಬರ ಹೆಸರಿನಲ್ಲಿ ಮಗದೊಬ್ಬರು ಆಡಳಿತ ನಡೆಸಿದ್ದು ಸಾಕು. ಇಡೀ ದೇಶದಲ್ಲಿ ಸಮಸ್ತ ಭಾರತೀಯರ ಏಕೈಕ ರಾಜಕೀಯ ಆಯ್ಕೆ ಎಂದರೆ, ಅದು ಬಿಜೆಪಿ ಮಾತ್ರ. ಹೀಗಾಗಿ; ಬಿಜೆಪಿ ಅಭ್ಯರ್ಥಿಗಳನ್ನು ಜನರು ಗೆಲ್ಲಿಸಬೇಕು. ಆ ಮೂಲಕ ಗ್ರಾಮ ಗ್ರಾಮದಲ್ಲಿಯೂ ಸ್ವರಾಜ್ಯ ಬರಬೇಕು. ಆ ಮೂಲಕ ನಮ್ಮ ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಬಲ ತಂಬಬೇಕು ಎಂದರು.
ಶ್ರೀರಂಗ ಯೋಜನೆಗೆ ಇನ್ನಷ್ಟು ಹಣ:
ಬಿಜೆಪಿ ಸರಕಾರ ಬಂದ ಮೇಲೆ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಶರವೇಗದಲ್ಲಿ ನಡೆಯುತ್ತಿವೆ. ಶ್ರೀರಂಗ ಏತ ನೀರಾವರಿ ಯೋಜನೆಗೆ ಇನ್ನೂ ಹೆಚ್ಚುವರಿಯಾಗಿ 175 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಜಿಲ್ಲೆಗೆ ಮಾವು ಸಂಸ್ಕರಣಾ ಘಟಕ, ಜಾಗತಿಕ ಗುಣಮಟ್ಟದ ರೇಷ್ಮೆ ಮಾರುಕಟ್ಟೆ ಬರುತ್ತಿರುವುದರ ಜತೆಗೆ, ಆರೋಗ್ಯ-ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಜಿಲ್ಲೆ ಆಮೂಲಾಗ್ರವಾಗಿ ಬೆಳವಣಿಗೆ ಆಗುತ್ತಿದೆ. ಅಧಿಕಾರ ಸಿಕ್ಕಿದಾಗ ಕೆಲಸ ಮಾಡದ ಪ್ರತಿಪಕ್ಷ ನಾಯಕರು, ಈಗ ವಿನಾಕಾರಣ ಹಲುಬುತ್ತಿದ್ದಾರೆಂದು ಅಶ್ವತ್ಥನಾರಾಯಣ ದೂರಿದರು.
ಒಕ್ಕಲಿಗರ ಅಭಿವೃದ್ಧಿ ನಿಗಮ:
ಎಲ್ಲ ಜಾತಿ- ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವಂಥ ಕೆಲಸವನ್ನು ಯಡಿಯೂರಪ್ಪ ನೇತೃತ್ವದ ಸರಕಾರ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲಾಗಿದೆ. ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೂ ಒತ್ತಾಯವಿದೆ. ಆ ಬಗ್ಗೆಯೂ ಸರಕಾರ ಗಮನ ಹರಿಸಲಿದೆ. ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರಕಾರ ಬದ್ಧವಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಎಂದರು.
ವೀರಶೈವ ಲಿಂಗಾಯಿತರನ್ನು 2ಎ ಗೆ ಸೇರಿಸಲು ಸರಕಾರ ಮುಂದಾಗಿದೆ. ಒಕ್ಕಲಿರನ್ನೂ ಸೇರಿಸಬೇಕು ಎಂದು ನೀವು ಬೇಡಿಕೆ ಇಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ; ಯಾವುದೇ ಸಮುದಾಯವನ್ನು ಯಾವುದೇ ಪರಿಶ್ಚೇಧಕ್ಕೆ ಸೇರಿಸಬೇಕಾದರೆ, ಅದರ ಹಿಂದೆ ವೈಜ್ಞಾನಿಕ ಆಧ್ಯಯನ ವರದಿ ಮಾಡಿಸಿ ಅಧ್ಯಯನ ನಡೆಸಬೇಕಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಜರಾಯಿ ಸಚಿವ ಶ್ರಿನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್, ಪುಟ್ಟಣ್ಣ, ಅ.ದೇವೇಗೌಡ ಉಪಸ್ಥಿತರಿದ್ದರು.
English summary…
Rs.1.5 crore direct annual grants to GPs: DCM Ashwathnarayan
Ramanagara, Dec.1, 2020 (www.justkannada.in): Deputy Chief Minister Dr. C.N. Ashwathnarayan announced that efforts will be made to further decentralize administration and release a sum of Rs. 1.5 crore every year directly to each Gram Panchayat.
Addressing a press meet held at Ramanagara today, he explained that there are provisions to release more grants directly to the gram panchayats as per the 15th Finance Commission report. Accordingly, financial aid will be provided for rural development, along with transferring the responsibility of implementation of MGNREGA programmes to the respective Gram Panchayats, he noted.
Keywords: DCM/ decentralization of rural administration/ gram panchayat
Key words: 1.5 crores – year –grama panchayath- Direct –grant- DCM Ashwath Narayan.