ಬೆಂಗಳೂರು, ಜೂನ್ 24, 2021 (www.justkannada.in): ಬೆಂಗಳೂರಿನ 38 ವರ್ಷ ವಯಸ್ಸಿನ ಶಿಕ್ಷಕಿಯೊಬ್ಬರಿಗೆ ತಮ್ಮ ಬಳಿಯಿರುವ ಪ್ರಾಚೀನ ಕಾಲದ ನಾಣ್ಯಗಳ ಬದಲಿಗೆ ಉತ್ತಮ ಮೊತ್ತವನ್ನು ನೀಡುವುದಾಗಿ ನಂಬಿಸಿ ಸೈಬರ್ ವಂಚಕರು 1 ಲಕ್ಷ ರೂ.ಗಳನ್ನು ವಂಚಿಸಿರುವ ಪ್ರಕರಣ ವರದಿಯಾಗಿದೆ.
ವೈಟ್‌ಫೀಲ್ಡ್ ಸೈಬರ್ ಎಕನಾಮಿಕ್ಸ್ & ನಾರ್ಕೊಟಿಕ್ ಕ್ರೈಮ್ಸ್ (ಸಿಇಎನ್) ಪೊಲೀಸರ ಪ್ರಕಾರ, ಸರ್ಜಾಪುರದ ನಿವಾಸಿಯಾಗಿರುವ ಓರ್ವ ಶಿಕ್ಷಕಿ, ಭಾರತಕ್ಕೆ ಸ್ವಾತಂತ್ರ ಬಂದ ವರ್ಷದ, ಅಂದರೆ 1947ನೇ ಇಸವಿಯ ಒಂದು ರೂಪಾಯಿ ನಾಣ್ಯವನ್ನು ಹೊಂದಿದ್ದು ಅದನ್ನು ಆನ್‌ಲೈನ್ ಮಾರುಕಟ್ಟೆಯೊಂದರಲ್ಲಿ ಮಾರಾಟ ಮಾಡುವುದಾಗಿ ಘೋಷಿಸಿದ್ದರು.
ಅನಾಮಿಕನೊಬ್ಬ ಆ ನಾಣ್ಯಕ್ಕೆ ರೂ.೧ ಕೋಟಿ ಕೊಡುವುದಾಗಿ ಸಂದೇಶ ಕಳುಹಿಸಿದ. ನಂತರ 1 ಕೋಟಿ ರೂ. ಬಹಳ ದೊಡ್ಡ ಮೊತ್ತವಾಗಿರುವುದರಿಂದಾಗಿ ವಿವಿಧ ಶುಲ್ಕಗಳನ್ನು ಭರಿಸಬೇಕಾಗಿದ್ದು ಅದನ್ನು ಭರಿಸುವಂತೆ ಸೂಚಿಸಿದ. ಇದನ್ನು ನಂಬಿದ ಮಹಿಳೆ ತನ್ನ ಬಳಿಯಿರುವ ಪ್ರಾಚೀನ ನಾಣ್ಯಕ್ಕೆ ಆ ಅನಾಮಿಕ ವ್ಯಕ್ತಿ ರೂ.1 ಕೋಟಿ ಕೊಡುತ್ತಾನೆ ಎಂದು ನಂಬಿ ರೂ. 1 ಲಕ್ಷ ವರ್ಗಾಯಿಸಿದ್ದಾರೆ.
ಹಣ ಪಡೆದ ಆ ಭೂಪ ಕೂಡಲೇ ತನ್ನ ಮೊಬೈಲ್ ದೂರವಾಣಿಯನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಆಗ ಅನುಮಾನಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಕಾಯ್ದೆ ಹಾಗೂ ಐಪಿಸಿ ಕಲಂನಡಿ ದೂರು ದಾಖಲಿಸಿಕೊಂಡಿರುವ ಪೊಲೀಸರು ವಂಚಕನಿಗಾಗಿ ಬಲೆ ಬೀಸಿದ್ದಾರೆ.
ಈ ರೀತಿಯ ಘಟನೆಗಳು ಆಗಾಗ ವರದಿಯಾಗುತ್ತಿದ್ದರೂ ಸಹ ಅಮಾಯಕ ಜನರು ಮೋಸ ಹೋಗುತ್ತಿರುವುದು ದುರಾದೃಷ್ಟಕರ ಸಂಗತಿ. ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿರುವ ಈ ಕಾಲದಲ್ಲಿ ಈ ರೀತಿಯ ವಂಚಕರು ಮೋಸ ಮಾಡಲು ಗಾಳ ಹಾಕಿ ಕುಳಿತಿರುತ್ತಾರೆ. ಎಷ್ಟೇ ಹುಷಾರಾಗಿದ್ದರೂ ಮೋಸ ಹೋಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ ಅಲ್ಲವೇ?!
ಸುದ್ದಿ ಮೂಲ: ಇಂಡಿಯನ್ ಎಕ್ಸ್ ಪ್ರೆಸ್
Key words: 1 crore – ancient coin-Cheating – woman -bangalore