ಬೆಂಗಳೂರು, ಜುಲೈ 6,2021(www.justkannada.in): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ 10 ಕೋಟಿ ರೂ. ವೆಚ್ಚ ದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಕಿತ್ತೂರು ಐತಿಹಾಸಿಕ ತಾಣಗಳ ಅಭಿವೃದ್ಧಿಗಾಗಿ ಆಯವ್ಯಯದಲ್ಲಿ 50 ಕೋಟಿ ರೂ. ಒದಗಿಸುವುದಾಗಿ ಘೋಷಿಸಲಾಗಿದ್ದು ಇದಕ್ಕೆ 2021-22ರಲ್ಲಿ 10 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಈ ಕ್ರಿಯಾ ಯೋಜನೆಯಡಿ ರಾಣಿ ಚೆನ್ನಮ್ಮನವರ ಸ್ಮಾರಕ ಭವನ ನಿರ್ಮಾಣ, ಚೌಕಿಮಠ ಗದ್ದುಗೆ ಅಭಿವೃದ್ಧಿ ಹಾಗೂ ಕಿತ್ತೂರು ಸಂಸ್ಥಾನದ ಅರಮನೆಯ ಪ್ರತಿರೂಪ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು. ಇದರೊಂದಿಗೆ ಚೆನ್ನಮ್ಮನ ಸಮಾದಿಯ ಸ್ಥಳದ ಅಭಿವೃದ್ಧಿ, ಬೆಳವಡಿಯಲ್ಲಿ ಬೆಳವಡಿ ಮಲ್ಲಮ್ಮನ ಪ್ರತಿಮೆ ಹಾಗೂ ಇತಿಹಾಸ ಸಾರುವ ಫಲಕ ನಿರ್ಮಾಣ, ಕಿತ್ತೂರು ಸಂಸ್ಥಾನದ ಕಾಗದಪತ್ರಗಳ ಸಂರಕ್ಷಣೆ ಮೊದಲಾದವುಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಲು ತೀರ್ಮಾನಿಸಲಾಯಿತು.,
ಪ್ರಾಧಿಕಾರವು ಆರಂಭವಾದಾಗಿನಿಂದ ಈವರೆಗೆ ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 106 ಕಾಮಗಾರಿಗಳಲ್ಲಿ 104 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಚೆನ್ನಮ್ಮನ ಅರಮನೆಯ ಪುನರ್ ನಿರ್ಮಾಣವನ್ನು ರಾಜ್ಯ ಪುರಾತತ್ವ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಕೈಗೊಳ್ಳಲು ಸೂಚಿಸಿದರು. ಪ್ರಾಧಿಕಾರವು ಸ್ಮಾರಕಗಳ ನಿರ್ವಹಣೆಗೆ ಸಂಪನ್ಮೂಲ ಸೃಜಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.
ಪ್ರವಾಸೋದ್ಯಮ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ತಾಣಗಳನ್ನು ಅಭಿವೃದ್ಧಿ ಪಡಿಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚಿಸಿದರು.
ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಳಗಾವಿ ಜಿಲ್ಲೆಯ ಶಾಸಕರು, ಮಡಿವಾಳೇಶ್ವರ ಸ್ಮಾಮೀಜಿ ಹಾಗೂ ಪ್ರಾಧಿಕಾರದ ಮತ್ತಿತರ ಸದಸ್ಯರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: 10 crore -Kittur Development Authority-Approval -action plan