ಬೆಂಗಳೂರು,ಫೆ,6,2020(www.justkannada.in): ರಾಜ್ಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಶಾಸಕರಿಗೆ ಕೊನೆಗೂ ಮಂತ್ರಿಸ್ಥಾನ ಒಲಿದಿದ್ದು, ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ 10 ಮಂದಿ ಶಾಸಕರು ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟಕ್ಕೆ 10 ಮಂದಿ ನೂತನ ಸಚಿವರು ಸೇರ್ಪಡೆಯಾಗಿದ್ದಾರೆ. ಇಂದು ರಾಜಭವನದ ಗಾಜಿನಮನೆಯಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ 10 ಮಂದಿ ನೂತನ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಚಿವರಿಗೆ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ನೂತನ ಸಚಿವರಾದ ಎಸ್,ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ಡಾ.ಕೆ.ಸುಧಾಕರ್, ಗೋಪಾಲಯ್ಯ, ಶಿವರಾಂಹೆಬ್ಬಾರ್, ಭೈರತಿ ಬಸವರಾಜ್, ಬಿ.ಸಿ ಪಾಟೀಲ್, ನಾರಾಯಣಗೌಡ, ಶ್ರೀಮಂತಪಾಟೀಲ್ ಇಂದು ದೇವರ ಹೆಸರಿನಲ್ಲಿ ಸಂಪುಟದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಆರ್.ಅಶೋಕ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅವರುಗಳ ಬೆಂಬಲಿಗರು ಜಯಘೋಷ ಮೊಳಗಿಸಿದರು
Key words: 10 Ministerial position- CM BS yeddyurappa-Sworn -new minister- Governor Vajubhai Wala