ಆರ್ಥಿಕ ಹಿಂದುಳಿದ ವರ್ಗಕ್ಕಿನ್ನು ಶೇ.10 ಮೀಸಲಾತಿ ಸೌಲಭ್ಯ

ಬೆಂಗಳೂರು:ಮೇ-19: ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ಹೊಸ ಕಾಯ್ದೆ ಅನ್ವಯ ರಾಜ್ಯದಲ್ಲೂ ಅರ್ಹ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳಿಗೆ ಆದಾಯ ಮತ್ತು ಸ್ವತ್ತು ಪ್ರಮಾಣಪತ್ರ ನೀಡಲು ಸರ್ಕಾರ ಮುಂದಾಗಿದೆ.

ಈ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೇ 14ರಂದೇ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಉದ್ಯೋಗ, ಸೇವೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ಸೌಲಭ್ಯ ಪಡೆಯಲು ರಾಜ್ಯದ ಅರ್ಹ ಅಭ್ಯರ್ಥಿಗಳಿಗೆ ಆದಾಯ ಪ್ರಮಾಣಪತ್ರ ನೀಡುವ ಮಾನದಂಡ ಪ್ರಕಟಿಸಿದೆ.

ಸಕ್ಷಮ ಪ್ರಾಧಿಕಾರಿಗಳಿಗೆ ಪಾನ್ ಕಾರ್ಡ್, ಫಾಮ್ರ್-16, ಆದಾಯ ತೆರಿಗೆ ಸಲ್ಲಿಕೆ ದಾಖಲೆಗಳು ಅಥವಾ ನೋಟರಿಯಿಂದ ದೃಢೀಕೃತ ಅಫಿಡವಿಟ್ ಸಲ್ಲಿಸಿ ಆದಾಯ ಮತ್ತು ಸ್ವತ್ತು ಪ್ರಮಾಣಪತ್ರ ಪಡೆಯಬಹುದಾಗಿದೆ.

ಅರ್ಹತೆ ಏನು?

# ಐದು ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರಬಾರದು

# ಸಾವಿರ ಚದರ ಅಡಿಗಿಂತ ದೊಡ್ಡ ಮನೆ ಹೊಂದಿರಬಾರದು.

# ಅಧಿಸೂಚಿತ ನಗರಸಭೆ ವ್ಯಾಪ್ತಿಯಲ್ಲಿ ನೂರು ಚದರ ಯಾರ್ಡ್​ಗಿಂತ ಹೆಚ್ಚು ವಿಸ್ತೀರ್ಣದ ನಿವೇಶನ ಹೊಂದಿರಬಾರದು.

# ಇನ್ನಿತರ ನಗರಸಭೆ ವ್ಯಾಪ್ತಿಯಲ್ಲಿ ಎರಡು ನೂರು ಚದರ ಯಾರ್ಡ್​ಗಿಂತ ಹೆಚ್ಚು ಗಾತ್ರದ ನಿವೇಶನ ಇರಬಾರದು.

ಯಾವ ಜಾತಿಗಳು ಅರ್ಹ?: ಬೈರಾಗಿ, ಮೊಗೆರ, ಬುಂದೆ-ಬೆಸ್ತರ, ಕಬ್ಬೇರ, ಖಾರ್ವಿ, ಕಿಳ್ಳಿಕ್ಯಾತ, ದೇವದಾಸಿ, ಬಸವಿ, ಕಲಾವಂತ, ಗೂರ್ಖಾ, ಜೀನಗಾರ, ತೆವರ್, ಕಲಾರಿ, ಕಲ್ಲಾರ, ಕಲ್ಲು ಕುಟಿಗ, ಉಪ್ಪಾರ, ಗೌಳಿ, ತೆಲುಗು ಗೌಡ, ಕಾಡುಗೊಲ್ಲ, ಹಟ್ಟಿಗೊಲ್ಲ, ಮಡಿವಾಳ, ಕುಂಬಾರ, ಕ್ಷೌರಿಕ, ನಾಡಿಗ, ಗಜ್ಜಿಗಾರ, ಬೋಗಾರ, ಕೊಳಾಯಿರಿ, ಕುಟುಮ, ಸ್ವಕುಳಸಾಳಿ, ಬಲ್ಲಾಳ, ಜತ್ತಿ, ಮುಷ್ಟಿಗ, ಕಾರುಣಿಕ, ಕ್ಷತ್ರಿಯ, ಸೋಮವಂಶ ಕ್ಷತ್ರೀಯ, ತುಳು, ತುಳುವ, ರೆಡ್ಡಿ (ಬಲಿಜ), ಅರಸು, ಸಪ್ರ ಒಕ್ಕಲಿಗ, ಹಳ್ಳಿಕಾರ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ಕರ ಒಕ್ಕಲಿಗ, ದಾಸ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮಾ, ರೆಡ್ಡಿ, ನಾಮಧಾರಿ ಗೌಡ, ಕೊಡಗರು, ವೀರಶೈವ ಲಿಂಗಾಯತ, ಲಿಂಗಾಯತ ಹೆಳವ, ಲಿಂಗಾಯತ ಅಂಬಿಗ, ಲಿಂಗಾಯತ ಭೋಯಿ, ಲಿಂಗಾಯತ ಗಂಗಾಮತ, ಲಿಂಗಾಯತ, ಬಂಡಾರಿ, ಲಿಂಗಾಯತ ಕ್ಷೌರಿಕ, ಲಿಂಗಾಯತ ಪಂಚಾಳ, ಲಿಂಗಾಯತ/ವೀರಶೈವ ಪಂಚಮಸಾಲಿ, ಮರಾಠ, ಆರ್ಯ, ಬೌದ್ಧ, ಮುಸ್ಲಿಂ, ಜೈನ, ಕ್ರೖೆಸ್ತ, ಬಂಟ, ಬ್ರಾಹ್ಮಣ, ಆರ್ಯವೈಶ್ಯ, ನಾಯರ್, ಮುದಲಿಯಾರ್.

ಮೀಸಲಾತಿ ಪಡೆಯುವುದು ತಪ್ಪಲ್ಲ. ಅದು ನಮ್ಮ ಹಕ್ಕು. ಆದರೆ ಅದರ ಮೇಲೆಯೇ ಅವಲಂಬಿತರಾಗಬಾರದು. ಪ್ರಜಾಪ್ರಭುತ್ವದಲ್ಲಿ ಮುಂದೊಂದು ದಿನ ಮೀಸಲಾತಿ ಕೈಬಿಡಬಹುದು. ಅದಕ್ಕಾಗಿ ಸ್ವಸಾಮರ್ಥ್ಯದಿಂದ ಬದುಕುವುದನ್ನು ಕಲಿಯಬೇಕು.

| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನಾಯಕ
ಕೃಪೆ:ವಿಜಯವಾಣಿ

ಆರ್ಥಿಕ ಹಿಂದುಳಿದ ವರ್ಗಕ್ಕಿನ್ನು ಶೇ.10 ಮೀಸಲಾತಿ ಸೌಲಭ್ಯ
10 per cent reservation facility for economic backward classes