ಬೆಂಗಳೂರು, ನವೆಂಬರ್,7,2022 (www.justkannada.in): ಬಿಬಿಎಂಪಿ ಆಡಳಿತದಲ್ಲಿರುವ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಪ್ರೋತ್ಸಾಹ ನೀಡುವ ಗುರಿಯೊಂದಿಗೆ ಬಿಬಿಎಂಪಿ ಅಧಿಕಾರಿಗಳು ಬಿಬಿಎಂಪಿ ಶಾಲೆಗಳಲ್ಲಿ ಶೇ.೧೦೦ರಷ್ಟು ಫಲಿತಾಂಶ ಬಂದರೆ ಆ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ವಿದೇಶಗಳಿಗೆ ಶೈಕ್ಷಣಿಕ ಪ್ರವಾಸಕ್ಕೆ ಹೋಗಲು ಅವಕಾಶ ಕಲ್ಪಿಸಿಕೊಡುವ ಕುರಿತು ಪ್ರಸ್ತಾಪಿಸಿದ್ದಾರೆ.
ಆರಂಭದ ಹಂತಗಳಲ್ಲಿ ಈ ಪ್ರಸ್ತಾವನೆಯನ್ನು ಬಿಬಿಎಂಪಿ ಶಾಲೆಗಳಲ್ಲಿ ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ಈ ಪ್ರೋತ್ಸಾಹಕವನ್ನು ಪರಿಶೀಲಿಸಲಾಗುವುದು. “ಇದೇ ರೀತಿಯ ಒಂದು ಮಾದರಿಯನ್ನು ಬಳ್ಳಾರಿಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಈ ಕಾರ್ಯಕ್ರಮವನ್ನು ಘೋಷಿಸಿದ ಕೇವಲ ಒಂದು ವರ್ಷದೊಳಗೆ ಅಲ್ಲಿ 70 ರಿಂದ 80 ಶಾಲೆಗಳು ಶೇ.೧೦೦ ಫಲಿತಾಂಶವನ್ನು ಸಾಧಿಸಿದ್ದವು,” ಎನ್ನುತ್ತಾರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಿಶೇಷ ಆಯುಕ್ತ (ಶಿಕ್ಷಣ) ಡಾ. ವಿ. ರಾಮಪ್ರಸಾತ್ ಮನೋಹರ್.
ಈ ಉಪಕ್ರಮ ಬಿಬಿಎಂಪಿ ಶಾಲೆಗಳ ಮುಖ್ಯೋಪಾಧ್ಯಯರನ್ನು ವಿಶೇಷ ಶಿಕ್ಷಣ ವಿಧಾನವನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದರ ಜೊತೆಗೆ, ಅವರ ಕೌಶಲ್ಯಗಳನ್ನೂ ಸಹ ಸುಧಾರಿಸಲು ನೆರವಾಗಲಿದೆ ಎಂದರು. “ನಮ್ಮ ಶಾಲೆಗಳ ಶಿಕ್ಷಕರು ಸೀಮಿತ ಸಂಪನ್ಮೂಲಗಳಲ್ಲಿಯೇ ಬಹಳ ಶ್ರಮ ಪಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಅವರಿಗೆ ಅವರ ಕೆಲಸ ಮಾಡಲು ಉತ್ಸಾಹ ನೀಡಿದುವುದಲ್ಲೇ, ವಿದ್ಯಾರ್ಥಿಗಳಿಗೂ ನೆರವಾಗುತ್ತದೆ,” ಎಂದು ಮನೋಹರ್ ತಮ್ಮ ಅಭಿಪ್ರಾಯ ತಿಳಿಸಿದರು. ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದರೊಂದಿಗೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಕಲ್ಪಿಸುವುದನ್ನು ಇಲಾಖೆ ಪರಿಗಣಿಸುತ್ತಿದೆ.
ಮೊದಲು ಶಾಲೆಗಳ ಮೂಲಭೂಸೌಕರ್ಯ ಸುಧಾರಣೆಗೆ ಆಧ್ಯತೆ ನೀಡಬೇಕೆನ್ನುವುದು ಕೆಲವು ಹಿರಿಯ ಬಿಬಿಎಂಪಿ ಅಧಿಕಾರಿಗಳ ಅಭಿಪ್ರಾಯವಾಗಿದೆ. “ಹೌದು ಶಿಕ್ಷಕರಿಗೆ ಉತ್ತೇಜನದ ಅಗತ್ಯವಿದೆ. ಆದರೆ ನಮ್ಮ ಅನೇಕ ಶಾಲೆಗಳಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಪ್ರವೇಶಾತಿಗೆ ತಕ್ಕಂತೆ ವ್ಯವಸ್ಥೆಗಳೇ ಇಲ್ಲ. ಹಾಗಾಗಿ ಮೊದಲು ನಾವು ಈ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಇರುವ ಅನುದಾನವವನ್ನು ಎಚ್ಚರಿಕೆಯಿಂದ ಬಳಸಿಕೊಳ್ಳುವುದು ಅಗತ್ಯ,” ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: 100% results – obtained –BBMP- schools-headmasters – abroad.