ಬೆಂಗಳೂರು,ಮಾರ್ಚ್,9,2023(www.justkannada.in): ರಾಜ್ಯ ಪೊಲೀಸ್ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ 112 ಕೋಮು ಗಲಭೆ ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ ಸರಣಿ ಟ್ವೀಟ್ ಮಾಡಿ ರಾಜ್ಯ ಬಿಜೆಪಿ ಸರ್ಕಾರವನ್ನ ಜೆಡಿಎಸ್ ಘಟಕ ತರಾಟೆ ತೆಗೆದುಕೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಸೌಹಾರ್ದತೆ, ಸಹಬಾಳ್ವೆಗೆ ಹೆಸರಾದ ಕರ್ನಾಟವು ರಾಜ್ಯ ಬಿಜೆಪಿ ಸರ್ಕಾರದ ನಾಲ್ಕು ವರ್ಷದ ಅವಧಿಯಲ್ಲಿ ಕೋಮು ದಳ್ಳುರಿಗೆ ಸುಡುತ್ತಿದೆ. ರಾಜ್ಯ ಪೊಲೀಸ್ ಇಲಾಖೆಯ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಕೋಮು ಗಲಭೆ, ಕೋಮು ಹಿಂಸೆಯ 122 ಪ್ರಕರಣಗಳು ದಾಖಲಾಗಿವೆ.
ಶಿವಮೊಗ್ಗ, ದಕ್ಷಿಣ ಕನ್ನಡ, ದಾವಣಗೆರೆ ಜಿಲ್ಲೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕರಾವಳಿ ಪ್ರದೇಶ ಮತ್ತು ಮಧ್ಯ ಕರ್ನಾಟಕವನ್ನು ಕೋಮು ದ್ವೇಷದ ಪ್ರಯೋಗಶಾಲೆ ಮಾಡಿಕೊಂಡ ಬಿಜೆಪಿ ಪಕ್ಷದ ಬಳುವಳಿ ಇದು. ರಾಜಕೀಯ ಲಾಭಕ್ಕಾಗಿ ರಾಜ್ಯ ಕಾಂಗ್ರೆಸ್ ಪಕ್ಷದ ಕುತಂತ್ರದ ಮೌನಕ್ಕೂ ಇದರಲ್ಲಿ ಪಾಲಿದೆ ಎಂದು ಕಿಡಿಕಾರಿದೆ.
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗಜ್ಞಾನೇಂದ್ರ ಅವರೆ, ಕಳೆದ ಎರಡು ವರ್ಷಗಳಲ್ಲಿ 85 ಕೋಮು ಹಿಂಸೆಯ ಪ್ರಕರಣಗಳು ನಡೆಯಲು ಕಾರಣಗಳೇನು? ಹಿಂಸೆಗೆ ಬೌದ್ಧಿಕ ಚೌಕಟ್ಟು ನೀಡುವ ನಿಮ್ಮ ಶಾಸಕ, ಸಚಿವರುಗಳಲ್ಲವೆ? ನಿಮ್ಮ ಪಕ್ಷದ ಸಂಘಟನೆಗಳು ಮತ್ತದರ ಕಾರ್ಯಕರ್ತರ ವಿರುದ್ಧ ಕ್ರಮ ಯಾವಾಗ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಚೆಲುವ ಕನ್ನಡ ನಾಡಿನ ಸಹಬಾಳ್ವೆ, ವೈವಿಧ್ಯಮಯ ಸಂಸ್ಕೃತಿಯನ್ನು ಹಾಳು ಮಾಡುವ ನಿಮಗೆ ಧಿಕ್ಕಾರ. ನಿಮಗೆಲ್ಲ ನಾಚಿಕೆಯಾಗಬೇಕು. ರಾಜ್ಯವನ್ನು ಹಾಳು ಮಾಡುವ ನಿಮ್ಮ ಹೇಸಿಗೆ ರಾಜಕೀಯಕ್ಕೆ ಇಂಬು ಕೊಡುವ ಸಂಸ್ಥೆ, ವ್ಯಕ್ತಿಗಳನ್ನು ರಾಜ್ಯದ ಜನತೆ ಹೆಚ್ಚು ಕಾಲ ಒಪ್ಪುವುದಿಲ್ಲ. ಈ ಸಲದ ಚುನಾವಣೆಯಲ್ಲಿ ನಿಮಗೆ ಉತ್ತರ ಸಿಗಲಿದೆ ಎಂದು ಬಿಜೆಪಿಗೆ ಜೆಡಿಎಸ್ ಎಚ್ಚರಿಕೆ ನೀಡಿದೆ.
Key words: 112 cases – communal riots – last 4 years – state-JDS – BJP -government.