ಮೈಸೂರು,ಫೆಬ್ರವರಿ,2,2023(www.justkannada.in): ನಿನ್ನೆ ಮಂಡನೆಯಾದ ಕೇಂದ್ರ ಬಜೆಟ್ ಬಗ್ಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಟೀಕಿಸಿದ್ದು, 120 ಲಕ್ಷ ಕೋಟಿ ರೂ. ಸಾಲ ಮಾಡಿರುವುದು ಬಿಜೆಪಿ ಸರ್ಕಾರದ ಸಾಧನೆ ಎಂದು ಕಿಡಿಕಾರಿದ್ದಾರೆ.
ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಈ ಬಾರಿಯ ಕೇಂದ್ರ ಬಜೆಟ್ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಕ್ಕೆ 155 ಲಕ್ಷ ಕೋಟಿ ಸಾಲವಿದ್ದು, ವರ್ಷಾಂತ್ಯಕ್ಕೆ 18ಲಕ್ಷ ಕೋಟಿ ಹೊಸ ಸಾಲ ಪಡೆಯುವುದಾಗಿ ಹೇಳಿದ್ದಾರೆ. ಈ ಮೂಲಕ ದೇಶದ ಸಾಲ ವರ್ಷಾಂತ್ಯಕ್ಕೆ 173 ಲಕ್ಷ ಕೋಟಿಗೆ ಏರಿಕೆಯಾಗಲಿದೆ. 1947ರಿಂದ 2014ರವರೆಗೆ ದೇಶದ ಮೇಲೆ ಇದ್ದ ಸಾಲ 53 ಲಕ್ಷ ಕೋಟಿ. ಆದರೆ ಕಳೆದ ಎಂಟು ವರ್ಷಗಳ ಅವಧಿಯಲ್ಲಿ 120 ಲಕ್ಷ ಕೋಟಿ ಸಾಲ ಮಾಡಿರುವುದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ದೇಶ ಪ್ರತಿವರ್ಷ 10.81 ಲಕ್ಷ ಕೋಟಿ ಬಡ್ಡಿ ಕಟ್ಟಬೇಕಿದೆ.ಅಂದರೆ 100 ರೂಪಾಯಿಯಲ್ಲಿ 42 ರೂಪಾಯಿ ಬಡ್ಡಿಗೆ ಹೋಗಲಿದೆ. ಈ ರೀತಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದ ಜಿಡಿಪಿ ದರ 8.7% ಇತ್ತು. ದೇಶದ ಜಿಡಿಪಿ ದರ ಈಗ 6%ಕ್ಕೆ ಇಳಿದಿದೆ. 2004ರಿಂದ 2014ರವರೆಗೆ 13% ತಲಾದಾಯವಿತ್ತು. 2014ರಿಂದ 2023ರವರೆಗೆ ತಲಾದಾಯ 9% ಕ್ಕೆ ಕುಸಿದಿದೆ ಎಂದು ಎಂ ಲಕ್ಷ್ಕಣ್ ಹರಿಹಾಯ್ದರು.
ಇದೇ ವೇಳೆ ಸಂಸದ ಪ್ರತಾಪ್ ಸಿಂಹ ವಿರುದ್ದವೂ ಗುಡುಗಿದ ಎಂ.ಲಕ್ಷ್ಮಣ್ , ಮೈಸೂರು ಕೊಡಗು ಜಿಲ್ಲೆಗೆ ಕಳೆದ ಎಂಟು ವರ್ಷಗಳಿಂದ ಸಂಸದ ಪ್ರತಾಪ್ ಸಿಂಹ ನೀಡಿರುವ ಕೊಡುಗೆ ಏನು.? ಯಾವ್ಯಾವ ಹೊಸ ಯೋಜನೆಗಳನ್ನು ತಂದಿದ್ದಾರೆ ಎಂಬುದನ್ನು ಸಂಸದ ಪ್ರತಾಪ್ ಸಿಂಹ ತಿಳಿಸಲಿ. ಸಂಸದರ ಅನುದಾನ ಬಳಕೆ ಬಗ್ಗೆ ಪ್ರತಾಪ್ ಸಿಂಹ ಬಹಿರಂಗ ಚರ್ಚೆಗೆ ಬರಲಿ. ರಾಜ್ಯದ ಸಂಸದರು ಯಾವುದೇ ಅನುದಾನ ಕೇಳಲು ಭಯಪಡುತ್ತಿದ್ದಾರೆ ಎಂದು ಟೀಕಿಸಿದರು.
ಸ್ಯಾಂಟ್ರೋರವಿ ಪ್ರಕರಣ ಸಂಬಂಧ ತನಿಖಾಧಿಕಾರಿ ದಿಢೀರ್ ವರ್ಗಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ತನಿಖೆ ದಿಕ್ಕು ತಪ್ಪಿಸಲು ಹೀಗೆ ಮಾಡ್ತಾರೆ. ಸ್ಯಾಂಟ್ರೋರವಿ ಬಾಂಬೆ ಬಾಯ್ಸ್ಯಿಂದ ಹಿಡಿದು ಇಲ್ಲಿಯವರೆಗೆ ಲಿಸ್ಟ್ ಕೊಟ್ಟಿದ್ದಾರೆ. ಯಾರ್ಯಾರು ಏನೇನು ಮಾಡಿದ್ರು ಅಂತಾ ಕಂಪ್ಲೀಟಾಗಿ ಗೊತ್ತಾಗ್ತದೆ. ಏನು ಕ್ರಮ ಆಗಿಲ್ಲ. ಯಾವ ರೀತಿ ತನಿಖೆ ಆಗ್ತಿದೆ ಅಂತಾ ನೀವೇ ನೋಡಿ. ಅದೇ ರೀತಿ ಬಿಟ್ ಕಾಯಿನ್ ಶ್ರೀಕಿ ಬದುಕಿದ್ದಾನೋ ಸತ್ತಿದ್ದಾನೋ ಅಂತಾನು ಹೇಳ್ತಾ ಇಲ್ಲ. ಹಾಗೇ ಅಧಿಕಾರಿಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ತಾರೆ. ಸ್ಯಾಂಟ್ರೋರವಿ ಪ್ರಕರಣ ತನಿಖಾಧಿಕಾರಿ ಪ್ರಮಾಣಿಕವಾಗಿ ತನಿಖೆ ಮಾಡಿದ್ದಾರೆ. ಅದಕ್ಕೆ ಅವರನ್ನ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.
Key words: 120 lakh- crore -Borrowing – achievement – BJP government- KPCC spokesperson -M. Laxman