ಮೈಸೂರು,ಮೇ,30,2020(www.justkannada.in): ಕೊರೋನಾದಿಂದಾಗಿ ಲಾಕ್‌ಡೌನ್ ಜಾರಿಯಾಗಿದ್ದ ಹಿನ್ನೆಲೆ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ 16 ಕೋಟಿ ಆರ್ಥಿಕ ನಷ್ಟವಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾಹಿತಿ ನೀಡಿದರು.
ಈ ಕುರಿತು ಇಂದು ಮಾತನಾಡಿದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೈಸೂರು ಮೃಗಾಲಯ ಒಂದಕ್ಕೆ 6 ರಿಂದ 7 ಕೋಟಿ ನಷ್ಟವಾಗಿದೆ. ಬನ್ನೇರುಘಟ್ಟ ಮೃಗಾಲಯಕ್ಕೆ 7 ಕೋಟಿ ನಷ್ಟವಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಮೃಗಾಲಯಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿರೋದು ಸತ್ಯ ಎಂದರು.
ನಾವು ಮೇ 21ರಂದು ಪ್ರಾಧಿಕಾರದ ಸಭೆ ನಡೆಸಿದ್ದೇವು. ಅದರಲ್ಲಿ ಮೃಗಾಲಯಗಳ ಪುನರಾರಂಭಕ್ಕೆ ತೀರ್ಮಾನ ಮಾಡಲಾಗಿದೆ. ಮೃಗಾಲಯಗಳ ಪುನರಾರಂಭಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಮೃಗಾಲಯ ಆರಂಭವಾದ ತಕ್ಷಣ ಜನರು ಬರೋಲ್ಲ. ಜನರು ಹೇಗೆ ಮೃಗಾಲಯಗಳಿಗೆ ಬರ್ತಾರೆ ಆ ನಂತರ ಮಾರ್ಗಸೂಚಿಗಳನ್ನು ಮಾರ್ಪಾಡು ಮಾಡುತ್ತೇವೆ. ನಾವಂತು ಮೃಗಾಲಯಗಳ ಪುನರಾರಂಭಕ್ಕೆ ಸಿದ್ದರಾಗಿದ್ದೇವೆ. ಸರ್ಕಾರ ಅನುಮತಿ ನೀಡಿದರೆ ಶೀಘ್ರದಲ್ಲೇ ಮೃಗಾಲಯಗಳು ಓಪನ್ ಆಗಲಿವೆ ಎಂದು ಬಿಪಿ ರವಿ ತಿಳಿಸಿದರು.
ಪ್ರಾಣಿ ವಿನಿಮಯ ಯೋಜನೆ ಹಾಗೂ ಮೃಗಾಲಯದಲ್ಲಿ ಸಾಮಾಜಿಕ ಅಂತರ ಏನೇ ಇದ್ದರೂ ಜನರ ಪ್ರತಿಕ್ರಿಯೆ ನಂತರ ನಿರ್ಧಾರ ಮಾಡಲಾಗುತ್ತದೆ. ಪ್ರಾಣಿಗಳಿಗೆ ಕೊರೊನಾ ಭಯ ಇಲ್ಲ. ಜನರಿಂದ ಪ್ರಾಣಿಗಳಿಗೆ ಕೊರೊನಾ ಅಂಟುವ ಆತಂಕವು ಇಲ್ಲ. ಎಲ್ಲ ರೀತಿಯಲ್ಲು ನಾವು ಸಜ್ಜಾಗಿದ್ದೇವೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು.
ಮೈಸೂರು ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಮಾತನಾಡಿ, ಮೈಸೂರು ಮೃಗಾಲಯಕ್ಕೆ ಅಪಾರ ದೇಣಿಗೆ ಬಂದಿದೆ. ಲಾಕ್‌ಡೌನ್ ವೇಳೆಯಲ್ಲಿ 3 ಕೋಟಿಯಷ್ಟು ದೇಣಿಗೆ ಬಂದಿದೆ. ಉಸ್ತುವಾರಿ ಸಚಿವರೇ 2.6 ಕೋಟಿಯಷ್ಟು ದೇಣಿಗೆ ನೀಡಿದ್ದಾರೆ. ಸದ್ಯಕ್ಕೆ ಪ್ರಾಣಿಗಳ ಪಾಲನೆಗೆ ಯಾವುದೇ ಸಮಸ್ಯೆ ಆಗಿಲ್ಲ. ಮೃಗಾಲಯದ ಸಿಬ್ಬಂದಿ ವೇತನ ನೀಡಲು ಯಾವುದೇ ಸಮಸ್ಯೆ ಇಲ್ಲ. ಮೃಗಾಲಯ ಆಗಿರುವ ಆರ್ಥಿಕ ನಷ್ಟಕ್ಕೆ ಸರ್ಕಾರದಿಂದ ವಿಶೇಷ ಅನುದಾನ ಕೇಳಿದ್ದೇವೆ. ಸರ್ಕಾರ ನಷ್ಟ ಭರಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Key words: