ಮೈಸೂರು,ಅ,18,2019(www.justkannada.in): ಮುಂದಿನ ಒಂದೂವರೆ ವರ್ಷದಲ್ಲಿ 16 ಸಾವಿರ ಪೊಲೀಸ್ ಮತ್ತು ಒಂದು ಸಾವಿರ ಸಬ್ ಇನ್ಸ್ ಪೆಕ್ಟರ್ ಹುದ್ದೆ ಭರ್ತಿಯಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಮೈಸೂರಿನಲ್ಲಿ ಉಪಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಬೊಮ್ಮಾಯಿ ಈ ವರ್ಷ 6 ಸಾವಿರ ಹುದ್ದೆ ಗಳನ್ನ ಭರ್ತಿ ಮಾಡುತ್ತೇವೆ. ಮುಂದಿನ ಒಂದೂವರೆ ವರ್ಷದಲ್ಲಿ 16 ಸಾವಿರ ಪೊಲೀಸ್ ಮತ್ತು ಒಂದು ಸಾವಿರ ಸಬ್ ಇನ್ಸ್ ಪೆಕ್ಟರ್ ಹುದ್ದೆ ಭರ್ತಿಯಾಗಲಿದೆ. ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳನ್ನ ತರುತ್ತೇವೆ.. ತಂತ್ರಜ್ಞಾನ ಹೆಚ್ಚಾದಂತೆ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ಸೈಬರ್ ಕ್ರೈಂ ನನ್ನ ಭೇದಿಸುವುದು ಸವಾಲಿನ ಕೆಲಸವಾಗಿದೆ. ಈ ಬಗ್ಗೆಯೂ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ಪೊಲೀಸರು ಪ್ರಾಮಾಣಿಕವಾಗಿರಬೇಕು ಕರ್ತವ್ಯ ನಿಷ್ಠೆ ಮರೆಯಬಾರದು ಸತ್ಯವೇ ತಂದೆ , ನ್ಯಾಯವೇ ತಾಯಿ ಇದ್ದಂತೆ ,ಸತ್ಯ ನ್ಯಾಯ ಎತ್ತಿ ಹಿಡಿಯುವ ಕೆಲಸವನ್ನ ಪೊಲೀಸರು ಮಾಡಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದರು.
ಔರಾದ್ಕರ್ ವರದಿ ಅನುಷ್ಟಾನ ಕುರಿತು ಪ್ರತಿಕ್ರಿಯಿಸಿದ ಸಚಿವ ಬಸವರಾಜ ಬೊಮ್ಮಾಯಿ, ಔರಾದ್ಕರ್ ವರದಿ ಅನುಷ್ಟಾನಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ. ಈ ವರದಿಗೆ ಅಗ್ನಿಶಾಮಕ, ಜೈಲರ್ ಹಾಗೂ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರನ್ನು ಸೇರಿಸಲಾಗಿದೆ. ಹೀಗಾಗಿ ಇದನ್ನುಅಂತಿಮಗೊಳಿಸಲು ಹಣಕಾಸು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದ ಬಳಿಕ ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದು ಅನುಷ್ಠಾನಕ್ಕೆ ತರಲಾಗುವುದು ಎಂದು ಸ್ಪಷ್ಟನೆ ನೀಡಿದರು.
ರಾಜ್ಯಕ್ಕೆ ಬಾಂಗ್ಲಾ ಮೂಲದ ಉಗ್ರಗಾಮಿ ಸಂಘಟನೆ ಸದಸ್ಯರು ನುಸುಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಾಜ್ಯಕ್ಕೆ ನುಸುಳಿರುವ ಬಾಂಗ್ಲಾ ಮುಜಾಯಿದ್ದೀನ್ ಸಂಘಟನೆಯ ಉಗ್ರರನ್ನು ಸದೆಬಡಿಯಲು ರಾಜ್ಯ ಪೊಲೀಸ್ ಕಾರ್ಯೋನ್ಮುಖವಾಗಿದೆ. ಜಮ್ಮು ಕಾಶ್ಮೀರ ಹಾಗೂ ಬಾಂಗ್ಲಾದೇಶದ ಗಡಿ ಮೂಲಕ ಉಗ್ರರು ದೇಶವನ್ನು ಪ್ರವೇಶಿಸಿದ್ದಾರೆ. ಬಾಂಗ್ಲಾದೇಶದವರು ಹೆಚ್ಚಾಗಿ ರಾಜ್ಯಕ್ಕೆ ಪ್ರವೇಶ ಮಾಡಿದ್ದಾರೆಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಉಗ್ರರು ಸಕ್ರಿಯರಾಗಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ. ಬಾಂಗ್ಲಾ ಮೂಲದ ಉಗ್ರರು ಹೆಚ್ಚಾಗಿ ನಮ್ಮ ರಾಜ್ಯಕ್ಕೆ ನುಸುಳುವ ಕೆಲಸ ಮಾಡ್ತಿದ್ದಾರೆ. ಅತ್ಯಂತ ಜನನಿಬಿಡ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಅಂತಹ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಆ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಕೆಲವೊಮ್ಮೆ ಹರಡುವ ವದಂತಿಗಳಿಗೆ ರಾಜ್ಯದ ಜನತೆ ಕಿವಿಗೊಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಬೆಂಗಳೂರಿನ 20 ಕ್ಕೂ ಹೆಚ್ಚು ಸ್ಥಳಗಳಲ್ಲಿ ಉಗ್ರರ ಅಡಗುದಾಣ ಗಳು ಪತ್ತೆಯಾಗಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಜನರ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದು ಮಾಹಿತಿಗಳನ್ನು ತಿಳಿಸಲು ಸಾಧ್ಯವಿಲ್ಲ ಎಂದರು.
ರಾಜ್ಯದಿಂದ ಮಹಾರಾಷ್ಟ್ರದ ಹಲವು ಗ್ರಾಮಗಳಿಗೆ ನೀರು ಒದಗಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿರುವ ವಿಚಾರ ಕುರಿತು ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಯವರು ಮಹಾರಾಷ್ಟ್ರದ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾಗ, ಅಲ್ಲಿ ನೆರೆದಿದ್ದ ಜನರ ಕೋರಿಕೆಗೆ ಸ್ಪಂದಿಸಿ ಆ ರೀತಿ ಹೇಳಿದ್ದಾರೆ. ಅಲ್ಲದೇ ಅಲ್ಲಿನ ಜನರು ಕುಡಿಯಲು ನೀರು ಕೇಳುತ್ತಿದ್ದಾರೆ.ಕೊಡುಕೊಳ್ಳುವಿಕೆಯ ಆಧಾರದ ಮಹಾರಾಷ್ಟ್ರ ನೀರು ಕೇಳಿದೆ. ನೀರು ಬಿಡುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ, ಅಲ್ಲಿನ ಜನ ಮುಖ್ಯಮಂತ್ರಿಗಳನ್ನ ಪ್ರಶ್ನೆ ಮಾಡಿದಾಗ ಇಲ್ಲ ಎನ್ನಲಾಗದೇ ಸಿಎಂ ಹಾಗೆ ಉತ್ತರಿಸಿದ್ದಾರೆ ಅಷ್ಟೇ. ಮಹಾರಾಷ್ಟ್ರ ಕರ್ನಾಟಕದ ನಡುವೆ ಕೊಡು ಕೊಳ್ಳುವಿಕೆ ಬಹಳ ಕಾಲದಿಂದಲೂ ಮುಂದುವರೆಸಿಕೊಂಡು ಬಂದಿದೆ ಎಂದು ಮಾರ್ಮಿಕವಾಗಿ ನುಡಿದರು.
Key words: 16,000 police- posts – filled-mysore- Home Minister -Basavaraja Bommai