ಮೈಸೂರು;ಆ-30:(www.justkannada.in) ವಿಶ್ವವಿಖ್ಯಾತ ಮೈಸೂರು ದಸರಾಗೆ ಸಡಗರದ ಸಿದ್ಧತೆಯಲ್ಲಿರುವ ಅರಮನೆ ನಗರಿ ಮೈಸೂರಿನ ಜನತೆಗೊಂದು ಸಿಹಿ ಸುದ್ದಿ. ಮೈಸೂರಿನ 18 ವಿಶೇಷತೆಗಳಿಗೆ ಭೌಗೋಳಿಕ ವಿಶೇಷತೆಗಳ ಹೆಗ್ಗುರುತು (ಜಿಯಾಗ್ರಫಿಕಲ್ ಇಂಡಿಕೇಷನ್ ಟ್ಯಾಗ್-GI) ಟ್ಯಾಗ್ ಸಿಗಲಿದೆ.
ಹೌದು. ರಾಜ್ಯದ ಒಟ್ಟು 42 ವಿಶೇಷತೆಗಳಿಗೆ ಜಿಐ ಟ್ಯಾಗ್ ಸಿಗಲಿದ್ದು, ಅದರಲ್ಲಿ ವಿಶೇಷವಾಗಿ ಮೈಸೂರಿನ 18 ವಿಶೇಷ ಉತ್ಪನ್ನಗಳಿಗೆ ಈ ಟ್ಯಾಗ್ ಸಿಗಲಿದೆ ಎಂಬುದು ಸಂತಸದ ವಿಚಾರ.
ಮೈಸೂರು ಸೀರೆ, ಮೈಸೂರು ವೀಳ್ಯದೆಲೆ, ಮೈಸೂರು ಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಶ್ರೀಗಂಧದ ಎಣ್ಣೆ, ಮೈಸೂರಿನ ಚಿತ್ರಕಲೆ, ಮೈಸೂರು ಅಗರಬತ್ತಿ, ಮೈಸೂರು ರೋಸ್ ವುಡ್ ಚಿತ್ರ, ನಂಜನಗೂಡು ಬಾಳೆಹಣ್ಣು ಸೇರಿದಂತೆ ಒಟ್ಟು 18 ವಿಶೇಷತೆಗಳು ಈ ಪಟ್ಟಿಯಲ್ಲಿವೆ.
ಬೌಗೋಳಿಕ ವಿಷೇಷತೆ ಹೆಗ್ಗುರುತು ಪಡೆಯಲು ಮುಂದಾಗಿರುವ ಪಟ್ಟಿಯಲ್ಲಿರುವ ಹಲವು ಉತ್ಪನ್ನಗಳು, ವಿಶೇಷತೆಗಳು ಇಂದು ಅಳಿವಿನ ಅಂಚಿನಲ್ಲಿ ಹಾಗೂ ಸಾಂಸ್ಕೃತಿಕ ನಗರಿಯಿಂದಲೇ ಮರೆಯಾಗುತ್ತಿರುವ ಸ್ಥಿತಿಯಲ್ಲಿರುವುದು ವಿಪರ್ಯಾಸ. ಉದಾಹರಣೆಗೆ ಮೈಸೂರಿನ ಹೆಗ್ಗುರುತಾದ ನಂಜನಗೂಡು ಬಾಳೆಹಣ್ಣು, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ ಉತ್ಪಾದನೆ ಅಳಿವಿನಂಚಿನಲ್ಲಿದೆ.
ಇವುಗಳ ಬೆಳೆಗಾರರಿಗೆ ಆರ್ಥಿಕ ಸಹಕಾರ ನೀಡಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಮೈಸೂರಿನ 18 ವಿಭಿನ್ನ ವಿಶೇಷ ಉತ್ಪನ್ನಗಳಿಗಾಗಿಯೇ ಪ್ರತ್ಯೇಕ ಯೋಜನೆ ರೂಪಿಸಬೇಕಿದೆ. GI ವಿಶೇಷ ಉತ್ಪನ್ನಗಳ ಉತ್ಪಾದನೆ ಹೆಚ್ಚಿಸಲು ಸರ್ವ ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿಯೇ ಮುಂದಿನ ತಿಂಗಳು ಸರ್ಕಾರದಿಂದ ಹೊಸ ನೀತಿ ಜಾರಿಗೆ ಬರಲಿದೆ ಎಂದು ಕೈಗಾರಿಕಾ ಇಲಾಖೆಯ ಮೂಲಗಳು ತಿಳಿಸಿವೆ.
ಈ ಕೊರತೆಯ ನಡುವೆಯೂ ಮೈಸೂರು ನಗರ 18 ವಿಶೇಷ ಉತ್ಪನ್ನಗಳ ಜತೆಗೆ ಭೌಗೋಳಿಕ ವಿಶೇಷತೆಗಳ ಹೆಗ್ಗುರುತು ಉಳ್ಳ ಪ್ರವಾಸಿ ತಾಣವಾಗಿ ಹೊರಹೊಮ್ಮುತ್ತಿರುವುದು ನಿಜಕ್ಕೂ ಸಂತಸದ ವಿಚಾರ.