ಬೆಂಗಳೂರು, ಜುಲೈ,8, 2022 (www.justkannada.in): ರಾಜ್ಯದ ಎಲ್ಲಾ ನಗರ ಪಾಲಿಕೆ ವ್ಯಾಪ್ತಿಗಳಲ್ಲಿಯೂ ಸೇರಿದಂತೆ ಇರುವ ಸುಮಾರು 2.5 ಲಕ್ಷ ‘ಬಿ’ ಖಾತಾ ಆಸ್ತಿಗಳಿಗೆ ಇನ್ನೆರಡು ತಿಂಗಳುಗಳಲ್ಲಿ ‘ಎ’ ಖಾತೆ ಪ್ರಮಾಣಪತ್ರಗಳನ್ನು ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
“ಇದೊಂದು ಬಹಳ ದೀರ್ಘ ಸಮಯದಿಂದ ಬಾಕಿ ಉಳಿದುಕೊಂಡಿದ್ದಂತಹ ಬೇಡಿಕೆಯಾಗಿದೆ. ಔಪಚಾರಿಕ ನಿರ್ಧಾರ ಕೈಗೊಳ್ಳುವುದಕ್ಕೆ ಮುಂಚೆ ಹಲವಾರು ಕಾನೂನಾತ್ಮಕ ವಿಷಯಗಳನ್ನು ಚರ್ಚಿಸಬೇಕಿದೆ. ಇನ್ನೆರಡು ತಿಂಗಳುಗಳಲ್ಲಿ ‘ಎ’ ಖಾತೆ ಪ್ರಮಾಣಪತ್ರಗಳನ್ನು ವಿತರಿಸಲು ನಾವು ನಿರ್ಧರಿಸಿದ್ದೇವೆ,” ಎಂದು ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜು ಅವರು ತಿಳಿಸಿದ್ದಾರೆ.
‘ಎ’ ಖಾತಾ ಆಸ್ತಿಗಳೆಂದರೆ ಸರಿಯಾದ ಮೂಲ ದಾಖಲಾತಿಗಳಿರುವ ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸಿರುವ ಆಸ್ತಿಗಳು. ‘ಬಿ’ ಖಾತಾ ಆಸ್ತಿಗಳೆಂದರೆ ದಾಖಲಾತಿಗಳಲ್ಲಿ ಲೋಪಗಳಿರುವ ಹಾಗೂ ಪ್ಲಾನ್ ಗೆ ಅನುಮೋದನೆ ಇಲ್ಲದೆ ನಿರ್ಮಾಣ ಮಾಡಿರುವ ಹಾಗೂ ಬೈ-ಲಾಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಿರುವ ಆಸ್ತಿಗಳು ಎಂದು ಅರ್ಥ.
೨೦೦೮ರಿಂದ ಬಿಬಿಎಂಪಿ ಒಳಗೊಂಡಂತೆ ಹಲವು ನಗರ ಪಾಲಿಕೆಗಳು ಬೈಲಾಗಳನ್ನು ಉಲ್ಲಂಘಿಸಿರುವ ಕಟ್ಟಡಗಳಿಗೆ ‘ಎ’ ಖಾತಾ ಪ್ರಮಾಣಪತ್ರವನ್ನು ನೀಡುವುದನ್ನು ನಿಲ್ಲಿಸಿತು. ಆಗಿನಿಂದ ಇಂತಹ ಆಸ್ತಿಗಳನ್ನು ‘ಬಿ’ ರಿಜಿಸ್ಟರ್ ನಲ್ಲಿ ನಿರ್ವಹಿಸಲಾಗುತ್ತಿದ್ದು, ಅಂದಿನಿಂದ ‘ಬಿ’ ಖಾತಾ ಆಸ್ತಿಗಳು ಎಂದು ಗುರುತಿಸಲ್ಪಡಲಾರಂಭಿಸಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಳೆದ ವಾರ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಒಂದು ಸಭೆಯನ್ನು ನಡೆಸಿ, ಬೆಟರ್‌ಮೆಂಟ್ ಶುಲ್ಕಗಳನ್ನು ಪಡೆದು ‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತೆಗೆ ಪರಿವರ್ತಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಅಂದಾಜು ೬.೬ ಲಕ್ಷಕ್ಕೂ ಹೆಚ್ಚು ‘ಬಿ’ ಖಾತಾ ಆಸ್ತಿಗಳಿವೆ. ಅನಧಿಕೃತ ಆಸ್ತಿಗಳು/ಕಟ್ಟಡಗಳನ್ನು ಅಧಿಕೃತಗೊಳಿಸುವ ಸಂಬಂಧ ಇರುವ ಕಾನೂನು ಅಕ್ರಮ-ಸಕ್ರಮ ಕುರಿತಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯ ಜುಲೈ ೨೦೦೭ರಲ್ಲಿ ಮಧ್ಯಂತರ ಸ್ಟೇ ಆದೇಶವನ್ನು ನೀಡಿದ್ದು ಈ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಅಧಿಕಾರಿಗಳು, ಅಂತಿಮ ತೀರ್ಪು ಹೊರಬರುವವರೆಗೂ ಎಲ್ಲಾ ಕಾನೂನುಬಾಹಿರ ಕಟ್ಟಡಗಳನ್ನೂ ಸಹ ಸಕ್ರಮಗೊಳಿಸದಿರುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕನಿಷ್ಟ ಉಲ್ಲಂಘನೆಗಳಿರುವಂತಹ ಆಸ್ತಿಗಳನ್ನು ಸಕ್ರಮಗೊಳಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದ ೧೦ ನಗರ ಪಾಲಿಕೆಗಳೂ ಸೇರಿದಂತೆ ಸುಮಾರು, ಕನಿಷ್ಟ ಉಲ್ಲಂಘನೆಗಳನ್ನು ಹೊಂದಿರುವ ೨.೫ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ‘ಬಿ’ ಖಾತಾ ಆಸ್ತಿಗಳಿವೆ.
ಈ ಆಸ್ತಿಗಳು ಭಾಗಶಃ ಕಾನೂನುಬಾಹಿರ ಆಗಿರುವುದರಿಂದಾಗಿ ನಿಗಮಗಳು ಅಂತಹ ಆಸ್ತಿಗಳು ಅಥವಾ ಬಡಾವಣೆಗಳಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ‘ಎ’ ಖಾತಾ ಪ್ರಮಾಣಪತ್ರಗಳನ್ನು ವಿತರಿಸಲು ಆರಂಭಿಸುವುದಕ್ಕೂ ಮುಂಚೆ ನಗರ ಪಾಲಿಕೆ ಅಧಿಕಾರಿಗಳು ರೆವೆನ್ಯೂ ನಿವೇಶನಗಳಲ್ಲಿ ನಿರ್ಮಾಣ ಮಾಡಿರುವ ಆಸ್ತಿಗಳ ಮೇಲಿನ ತೆರಿಗೆ ಮೊತ್ತವನ್ನು ನಿಗಧಿಪಡಿಸುತ್ತಾರೆ. “ಈ ಬೆಳವಣಿಗೆಯಿಂದ ಆಸ್ತಿ/ಕಟ್ಟಡಗಳ ಮಾಲೀಕರಿಗೆ ನೆರವಾಗುವುದರ ಜೊತೆಗೆ, ನಗರ ಪಾಲಿಕೆಗೆ ಸಾಕಷ್ಟು ಆದಾಯವೂ ಸೃಷ್ಟಿಯಾಗುತ್ತದೆ, ಆ ಆದಾಯವನ್ನು ಬಡಾವಣೆಗಳ ಅಭಿವೃದ್ಧಿಗೆ ಬಳಸಿಕೊಳ್ಳಬಹುದು,” ಎಂದು ಮಾನ್ಯ ಸಚಿವರು ತಿಳಿಸಿದ್ದಾರೆ.
ಬಿಬಿಎಂಪಿ ೨೦೨೨-೨೩ರ ಆಯವ್ಯಯದಲ್ಲಿ ‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತೆ ಪರಿವರ್ತಿಸುವ ಮೂಲಕ ಅಂದಾಜು ರೂ.೧,೦೦೦ ಕೋಟಿ ಆದಾಯ ಬರುತ್ತದೆ ಎಂದು ಅಂದಾಜಿಸಿದೆ. ರೆವೆನ್ಯೂ ನಿವೇಶನಗಳ ಮಾಲೀಕರೂ ಸಹ ಕಳೆದ ಹಲವು ವರ್ಷಗಳಿಂದ ಇದಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಇದರಿಂದ ಅವರ ನಿವೇಶನಗಳ ಮೌಲ್ಯ ಹೆಚ್ಚಾಗುವುದರ ಜೊತೆಗೆ, ಬ್ಯಾಂಕುಗಳಿಂದ ಹೆಚ್ಚಿನ ಮೊತ್ತದ ಸಾಲಗಳನ್ನೂ ಪಡೆಯಲು ಅನುಕೂಲವಾಗುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಎಲ್ಲಾ ನಗರ ಪಾಲಿಕೆಗಳೂ ಸೇರಿದಂತೆ ರೂ.೬೦೦ ಕೋಟಿಯಷ್ಟು ನೀರಿನ ಬಿಲ್ಲುಗಳನ್ನು ಪಾವತಿಸಬೇಕಿದೆ ಎಂದು ಮಾನ್ಯ ಸಚಿವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಶುಲ್ಕ ಪಾವತಿಸದೇ ಇರುವವರಿಂದ ಒಂದೇ ಬಾರಿ ಶುಲ್ಕ ವಸೂಲಾತಿ ಮಾಡಲು ಆಲೋಚಿಸುತ್ತಿದೆ. “ಈ ಕುರಿತಾದ ವಿವರಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು,” ಎಂದಿದ್ದಾರೆ.
“ಸರ್ಕಾರವು, ಮಾಲೀಕರಿಂದ ಶಪಥವನ್ನು ಪಡೆದುಕೊಂಡು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಕಾನೂನುಬಾಹಿರ ನೀರಿನ ಸಂಪರ್ಕಗಳನ್ನೂ ಸಹ ಸಕ್ರಮಗೊಳಿಸುವ ಯೋಜನೆಯೊಂದನ್ನು ಪರಿಚಯಿಸಲು ಆಲೋಚಿಸಿದೆ. ೨೦೪೦ನೇ ಇಸವಿಯವರೆಗೆ ಗಮನದಲ್ಲಿಟ್ಟುಕೊಂಡು, ರೂ.೯,೩೩೫ ಕೋಟಿ ವೆಚ್ಚದ ಒಂದು ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲಾಗುತ್ತಿದೆ. “ಮಾನ್ಯ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ,” ಎಂದು ಸಚಿವರು ತಿಳಿಸಿದ್ದಾರೆ.
ಸುದ್ದಿ ಮೂಲ: ಟೈಮ್ಸ್ ಆಫ್ ಇಂಡಿಯಾ
Key words: 2.5 lakh – ‘B’ account – next -two months -‘A’ account -certificates