ಬೆಂಗಳೂರು, ಮೇ,28,2023(www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟಕ್ಕೆ 24 ನೂತನ ಸಚಿವರು ಸೇರ್ಪಡೆಯಾಗುವುದರೊಂದಿಗೆ ರಾಜ್ಯದಲ್ಲಿ ದಶಕಗಳ ನಂತರ ಮೊದಲ ವಿಸ್ತರಣೆಯಲ್ಲಿಯೇ ಪೂರ್ಣ ಪ್ರಮಾಣದ ಸಂಪುಟ ರಚನೆಯಾದದ್ದು ಒಂದು ದಾಖಲೆಯಾಗಿದೆ.
ಇಲ್ಲಿನ ರಾಜಭವನದ ಗಾಜಿನ ಮನೆಯಲ್ಲಿ ಇಂದು ಬೆಳಗ್ಗೆ ನಡೆದ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಯು ಟಿ ಖಾದರ್ ಅವರ ಸಮ್ಮುಖದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಅಧಿಕಾರ ಪದ ಮತ್ತು ಗೋಪ್ಯತಾ ಪ್ರಮಾಣ ವಚನವನ್ನು ಬೋಧಿಸಿದರು.
ಹೆಚ್ ಕೆ ಪಾಟೀಲ್, ಕೃಷ್ಣಬೈರೇಗೌಡ, ಎನ್ ಚೆಲುವರಾಯಸ್ವಾಮಿ, ಕೆ ವೆಂಕಟೇಶ್, ಡಾ ಹೆಚ್ ಸಿ ಮಹದೇವಪ್ಪ, ಈಶ್ವರ್ ಖಂಡ್ರೆ, ಕೆ ಎನ್ ರಾಜಣ್ಣ, ದಿನೇಶ್ ಗುಂಡೂರಾವ್, ಶರಣಬಸಪ್ಪ ಬಾಪೂಗೌಡ ದರ್ಶನಾಪುರ. ಶಿವಾನಂದ ಪಾಟೀಲ್, ಆರ್ ಬಿ ತಿಮ್ಮಾಪುರ್, ಎಸ್ ಎಸ್ ಮಲ್ಲಿಕಾರ್ಜುನ್, ಶಿವರಾಜ್ ತಂಗಡಗಿ, ಶರಣ ಪ್ರಕಾಶ್ ಪಾಟೀಲ್, ಮಾಂಕಾಳ ವೈದ್ಯ, ಲಕ್ಷ್ಮಿ ಹೆಬ್ಬಾಳ್ಕರ್, ರಹೀಂ ಖಾನ್, ಡಾ.ಡಿ ಸುಧಾಕರ್, ಸಂತೋಷ್ ಲಾಡ್, ನಡಿನಪಲ್ಲಿ ಸುಭಾಷ್ ಚಂದ್ರ ಬೋಸರಾಜು, ಬಿ ಎಸ್ ಸುರೇಶ್ ( ಬೈರತಿ ಸುರೇಶ್ ) ಸಾರೇಕೊಪ್ಪ ಮಧು ಬಂಗಾರಪ್ಪ, ಎಂ ಸಿ ಸುಧಾಕರ್ ಹಾಗೂ ನಾಗೇಂದ್ರ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ಎನ್ ಎಸ್ ಬೋಸರಾಜು ಅವರು ಯಾವುದೇ ಸದನದ ಸದಸ್ಯರಲ್ಲ.
ಪಕ್ಷ ನಿಷ್ಠೆಗೆ ದೊರೆತ ಮನ್ನಣೆ :
ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದಿಂದ 1999 ಹಾಗೂ 2004 ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬೋಸರಾಜ ಅವರು ರಾಜ್ಯ ವಿಧಾನ ಪರಿಷತ್ ಸದಸ್ಯರು ಆಗಿದ್ದರು. ಪ್ರಸ್ತುತ ಬೋಸುರಾಜು ಅವರು ಮೇಲ್ಮನೆ ಅಥವಾ ಕೆಳಮನೆ ಯಾವುದನ್ನು ಪ್ರತಿನಿಧಿಸುತ್ತಿಲ್ಲ ಆದರೆ, ಬೋಸರಾಜು ಅವರ ಪಕ್ಷನಿಷ್ಠೆಯನ್ನು ಗುರುತಿಸಿ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿ ಮನ್ನಣೆ ನೀಡಲಾಗಿದೆ.
ಸನ್ನಿಹಿತದಲ್ಲಿಯೇ ಬೋಸರಾಜ ಅವರು ರಾಜ್ಯ ವಿಧಾನ ಪರಿಷತ್ ಪ್ರವೇಶಿಸಿ ಸಿದ್ದರಾಮಯ್ಯ ಸಂಪುಟದಲ್ಲಿ ಮುಂದೆವರೆಲಿದ್ದಾರೆ.
ಮೊದಲ ಬಾರಿಗೆ ಸಚಿವರು.
ಮಧುಗಿರಿ ವಿಧಾನಸಭಾ ಕ್ಷೇತ್ರದ ಕ್ಯಾತಸಂದ್ರ ನಂಜಪ್ಪ ರಾಜಣ್ಣ, ಭಟ್ಕಳ ವಿಧಾನಸಭಾ ಕ್ಷೇತ್ರದ ಮಾಂಕಾಳ ವೈದ್ಯ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಲಕ್ಷೀ ಹೆಬ್ಬಾಳ್ಕರ್, ರಾಯಚೂರು ಜಿಲ್ಲೆಯ ಕಾಂಗ್ರೆಸ್ ಮುಖಂಡ ಎನ್ ಎಸ್ ಬೋಸರಾಜು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬೈರತಿ ಸುರೇಶ್, ಸೊರಬ ವಿಧಾನಸಭಾ ಕ್ಷೇತ್ರದ ಮಧು ಬಂಗಾರಪ್ಪ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಎಂ.ಸಿ ಸುಧಾಕರ್ ಹಾಗೂ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿ.ನಾಗೇಂದ್ರ ಅವರು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಉಳಿದವರು ಈ ಹಿಂದೆ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿದ್ದಾರೆ.
ರಹೀಂ ಖಾನ್ ಅವರು ಇಂಗ್ಲಿಷ್ ಭಾಷೆಯಲ್ಲಿ ಹಾಗೂ ಉಳಿದೆಲ್ಲರೂ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಅಲ್ಲದೆ, ಡಾ. ಹೆಚ್.ಸಿ ಮಹದೇವಪ್ಪ ಅವರು ಸತ್ಯ ನಿಷ್ಠೆಯ ಹೆಸರಿನಲ್ಲಿ, ಕೆ ಎನ್ ರಾಜಣ್ಣ ಅವರು ಬುದ್ಧ ಬಸವ ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ, ದಿನೇಶ್ ಗುಂಡೂರಾವ್ ಅವರು ಯಾವ ಹೆಸರೂ ಉಲ್ಲೇಖಿಸದೇ, ಶಿವಾನಂದ ಪಾಟೀಲ್ ಅವರು ಅಣ್ಣ ಬಸವಣ್ಣ ಅವರ ಹೆಸರಿನಲ್ಲಿ, ಎಸ್ ಎಸ್ ಮಲ್ಲಿಕಾರ್ಜುನ ಅವರು ಕಲ್ಲೇಶ್ವರ ದೇವರ ಹೆಸರಿನಲ್ಲಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಗಜ್ಯೋತಿ ಬಸವೇಶ್ವರ ಛತ್ರಪತಿ ಶಿವಾಜಿ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನತೆ ಮತ್ತು ತಮ್ಮ ತಾಯಿ ಗಿರಿಜಾ ಬಾಯಿ ಅವರ ಹೆಸರಿನಲ್ಲಿ, ರಹೀಂ ಖಾನ್ ಅವರು ಅಲ್ಲಾಹ್ ಹೆಸರಿನಲ್ಲಿ, ಬಿ ನಾಗೇಂದ್ರ ಅವರು ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ಹಾಗೂ ಉಳಿದ ಎಲ್ಲರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಎಲ್ಲರಿಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಭಾಧ್ಯಕ್ಷ ಯು.ಟಿ ಖಾದರ್ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಈ ಮುನ್ನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಕಾರ್ಯಕ್ರಮ ಪ್ರಾರಂಭಿಲು ಅನುಮತಿ ಪಡೆದು ಸಮಾರಂಭವನ್ನು ನಿರ್ವಹಿಸಿ ನಿರೂಪಿಸಿದರು. ಸಮಾರಂಭ ಮುಕ್ತಾಯವಾಗುತ್ತಿದಂತೆ ಫೋಟೋ ಸೆಷನ್ ನಡೆಯಿತು.
Key words: 24 new ministers – CM Siddaramaiah- cabinet-oath.