ಬೆಂಗಳೂರು,ಡಿಸೆಂಬರ್,11,2024 (www.justkannada.in): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೇ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಎಂ.ರಾಮಚಂದ್ರಪ್ಪ ಎಚ್ಚರಿಕೆ ನೀಡಿದರು.
ಇಂದು ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2ಎಗೆ ಸೇರಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಇಂದು ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಎಂ.ರಾಮಚಂದ್ರಪ್ಪ, ಪಂಚಮಸಾಲಿ ಹೋರಾಟಕ್ಕೆ ನಾವು ಹೆದರುವುದಿಲ್ಲ. ನಾವು ಕೂಡ ಲಕ್ಷ ಜನರನ್ನ ಕರದುಕೊಂಡು ಹೋಗಿ ಪ್ರತಿಭಟನೆ ಮಾಡುತ್ತೇವೆ. ಪಂಚಮಸಾಲಿ ಸಮುದಾಯಕ್ಕೆ 3ಬಿ ವರ್ಗದಡಿ ಮೀಸಲಾತಿ ಸೌಲಭ್ಯವಿದೆ. ಪಂಚಮಸಾಲಿ ಲಿಂಗಾಯತ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಗತಿ ಸಾಧಿಸಿದೆ. ಡಾ.ನಾಗನಗೌಡ ಸಮಿತಿ, ಎಲ್.ಜಿ. ಹಾವನೂರ ಸಮಿತಿ, ವೆಂಕಟಸ್ವಾಮಿ ಹಿಂದುಳಿದ ವರ್ಗಗಳ ಎರಡನೇ ಆಯೋಗದ ವರದಿ, ನ್ಯಾಯಮೂರ್ತಿ ಒ.ಚಿನ್ನಪ್ಪ ರೆಡ್ಡಿ ವರದಿಗಳು ಪಂಚಮಸಾಲಿ ಲಿಂಗಾಯತ ಪಂಗಡವು ಮುಂದುವರಿದ ಅಥವಾ ಪ್ರಗತಿ ಹೊಂದಿದ ಸಮುದಾಯ ಎಂದು ಕಂಡುಹಿಡಿದಿದೆ. ಆದರೂ ಹಿಂದುಳಿದ ವರ್ಗಗಳಿಗೆ ನೀಡಿರುವ ಶೇ.15ರ ಮೀಸಲಾತಿಯ ಲಾಭ ಪಡೆಯಲು 2ಎ ಪ್ರವರ್ಗದಡಿ ಮೀಸಲಾತಿ ನೀಡುವಂತೆ ಪಂಚಮಸಾಲಿ ಸಮುದಾಯ ಪ್ರತಿಭಟನೆ ನಡೆಸಿ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಸರ್ಕಾರ ಮಣಿಯಬಾರದು ಎಂದು ಮನವಿ ಮಾಡಿದರು.
ಪಂಚಮಸಾಲಿ ಲಿಂಗಾಯತ ಸಮುದಾಯನ್ನು 2ಎಗೆ ಸೇರಿಸಲು ಮುಂದಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದು ರಾಮಚಂದ್ರಪ್ಪ ಎಚ್ಚರಿಸಿದರು.
ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರ ಲಾಠಿಚಾರ್ಜ್ ಕುರಿತು ಪ್ರತಿಕ್ರಿಯಿಸಿದ ಅವರು, ಪೊಲೀಸರು ಯಾಕೆ ಲಾಠೀಚಾರ್ಜ್ ಮಾಡಬಾರದು. ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಹಲ್ಲೆ ಮಾಡೋದು ಸರಿನಾ..? ಸುವರ್ಣಸೌದಕ್ಕೆ ಮುತ್ತಿಗೆ ಹಾಕೋದು ಸರಿನಾ..? ಪಂಚಮಸಾಲಿ ಹೋರಾಟಕ್ಕೆ ನಾವು ಹೆದರುವುದಿಲ್ಲ ಎಂದು ತಿಳಿಸಿದರು.
Key words: M. Ramachandrappa, protests, 2A reservation, Panchamasali