ಬೆಂಗಳೂರು, ನವೆಂಬರ್ 1, 2021 (www.justkannada.in): ಸೋಮವಾರದಿಂದ ಆರ್ ಟಿಒಗೆ ಸಂಬಂಧಿಸಿದ ಕನಿಷ್ಠ 30 ಸೇವೆಗಳನ್ನು ಪಡೆಯಲು ನೀವು ಆರ್ಟಿಒ ಕಚೇರಿಗೇ ಹೋಗಬೇಕಿಲ್ಲ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ (ಎಂಒಆರ್ಟಿಹೆಚ್) ಸೂಚನೆಗಳ ಮೇರೆಗೆ, ರಾಜ್ಯ ಸಾರಿಗೆ ಇಲಾಖೆಯು ಕಲಿಕಾ ಪರವಾನಗಿಯಿಂದ ಹಿಡಿದು ವಾಹನಗಳ ನೋಂದಣಿಯವರೆಗೆ ಸುಮಾರು 30 ಸೇವೆಗಳನ್ನು ಆನ್ ಲೈನ್ ಮೂಲಕ ಲಭ್ಯಗೊಳಿಸುತ್ತಿದೆ. ಈ ಉಪಕ್ರಮದಿಂದಾಗಿ ಪ್ರಸ್ತುತ ಯಾವಾಗಲೂ ಜನದಟ್ಟಣೆಯಿಂದ ಕೂಡಿರುವ ಆರ್ಟಿಒ ಕಚೇರಿಗಳಲ್ಲಿ ಜನದಟ್ಟಣೆಯ ಪ್ರಮಾಣ ಶೇ.60ರಷ್ಟು ಕಡಿಮೆಯಾಗಲಿದೆ.
ರಾಜ್ಯದಲ್ಲಿರುವ ಎಲ್ಲಾ ಆರ್ ಟಿಒ ಕಚೇರಿಗಳೂ ಸೇರಿದಂತೆ ಪ್ರತಿ ವರ್ಷ ಸುಮಾರು 20 ಲಕ್ಷ ಕಲಿಕಾ ಪರವಾನಗಿಗಳ ಅರ್ಜಿಗಳು ಬರುತ್ತವೆ. ಜೊತೆಗೆ ವಾಹನಗಳ ನೋಂದಣಿಗೆ ಸಂಬಂಧಿಸಿದಂತೆ 25 ಲಕ್ಷ ಅರ್ಜಿಗಳು ಬರುತ್ತವೆ. ಆದರೆ ಈಗ ಸಾರಿಗೆ ಇಲಾಖೆಯು ಸುಮಾರು 30 ಸೇವೆಗಳನ್ನು ಆನ್ಲೈನ್ ಮೂಲಕ ಲಭ್ಯಗೊಳಿಸುತ್ತಿದ್ದು, ಸುಮಾರು ೬೦ ಲಕ್ಷ ಜನರು ಈ ಸೇವೆಗಳನ್ನು ಆರ್ಟಿಒ ಕಚೇರಿಗೆ ಹೋಗದೆ, ಆನ್ಲೈನ್ ನಲ್ಲೇ ಪಡೆದುಕೊಳ್ಳಬಹುದಾಗಿದೆ. ಈ ಸೌಲಭ್ಯದಲ್ಲಿ ಅರ್ಜಿಗಳನ್ನು ಸಲ್ಲಿಸುವುದು, ಶುಲ್ಕಗಳು ಹಾಗೂ ತೆರಿಗೆಗಳ ಪಾವತಿ ಮತ್ತು ಇತರೆ ವಿಧಾನಗಳೂ ಸಹ ಸೇರಿವೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ನವೆಂಬರ್ 1 ರಂದು, ಅಂದರೆ ಇಂದು ಈ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ.
ಈ ಸೌಲಭ್ಯವು ಸರ್ಕಾರಕ್ಕೆ ಹೆಚ್ಚುವರಿ ಆದಾಯವನ್ನು ತರಲಿದೆ. ಜೊತೆಗೆ ಮಧ್ಯಸ್ಥಿಕೆದಾರರು ಹಾಗೂ ಲಂಚವನ್ನೂ ಸಹ ತಡೆಗಟ್ಟುವಲ್ಲಿ ಸಹಾಯಕಾರಿ ಆಗಲಿದ್ದು, ಗುಣಮಟ್ಟದ ಸೇವೆಯನ್ನು ಒದಗಿಸುವ ಪ್ರಯತ್ನವನ್ನು ಸುಧಾರಿಸಲಿದೆ.
ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಈ ಕುರಿತು ಮಾತನಾಡಿ, 30 ಸೇವೆಗಳನ್ನು ಆನ್ ಲೈನ್ನಲ್ಲಿ ಲಭ್ಯಗೊಳಿಸುತ್ತಿದ್ದು, ಒಮ್ಮೆ ಇದು ಸರಿಹೊಂದಿದ ನಂತರ ಈ ಸೇವೆಗಳನ್ನು ಆಫ್ ಲೈನ್ನಲ್ಲಿ ಒದಗಿಸುವುದನ್ನು ನಿಲ್ಲಿಸಲಾಗುವುದು. “ಈ ಎಲ್ಲಾ 30 ಸೇವೆಗಳೂ ಸಹ ಮುಖಾಮುಖಿ ಭೇಟಿಯ ಅಗತ್ಯವಿಲ್ಲದೆ, ಸಂಪೂರ್ಣ ಸಂಪರ್ಕ ರಹಿತವಾಗಿರುತ್ತವೆ. ಆರ್ ಟಿಒ ಕಚೇರಿಗಳಿಗೆ ಈ ಕೆಲಸಗಳಿಗೆಂದು ಭೇಟಿ ನೀಡುವ ಸುಮಾರು 60 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ. ಈ ಸೇವೆಗಳನ್ನು ಒದಗಿಸಲು ಈವರೆಗೆ ತೆಗೆದುಕೊಳ್ಳುತ್ತಿದ್ದಂತಹ ಸಮಯದಲ್ಲಿಯೂ ಕಡಿತವಾಗಲಿದೆ. ಇದರಿಂದಾಗಿ ವಾರ್ಷಿಕ 50-60 ಕೋಟಿಗಳಷ್ಟು ಕಾಗದವೂ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಇಡೀ ವಹಿವಾಟು ಆನ್ಲೈನ್ ಮೂಲಕವೇ ಲಭ್ಯವಿದೆ,” ಎಂದು ವಿವರಿಸಿದರು.
ಆದಾಗ್ಯೂ, ಚಾಲಕರ ವಾಹನ ಚಾಲನೆಯ ಸಾಮರ್ಥ್ಯವನ್ನು ಮುಖತಃ ನೋಡಿ ಅರ್ಥ ಮಾಡಿಕೊಳ್ಳಬೇಕಾಗಿರುವ ಕಾರಣದಿಂದಾಗಿ ಚಾಲಕರ ಪರವಾನಗಿಯನ್ನು ಆನ್ ಲೈನ್ ಮೂಲಕ ಮಾಡಲಾಗುವುದಿಲ್ಲ ಎಂದರು.
ಈ ಹೊಸ ಉಪಕ್ರಮಕ್ಕೆ ಜನರಿಂದ ಪ್ರಶಂಸೆ ದೊರೆಯುತ್ತಿದೆ. ಈ ಸಂಬಂಧ ಮಾತನಾಡಿದ ಬೆಂಗಳೂರಿನ ನಾಗವಾರದ ಕಿಶೋರ್ ಜಿ. ಎನ್ನುವವರು, “ನಾನು ಕಲಿಕಾ ಪರವಾನಗಿಗಾಗಿ ಮರ್ನಾಲ್ಕು ಬಾರಿ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದೆ, ಆದರೆ ಪರೀಕ್ಷೆ ನೀಡಲು ಹಾಜರಾಗಲಿಲ್ಲ. ಆದರೆ ಈಗ ಈ ಸೇವೆ ಸಂಪೂರ್ಣವಾಗಿ ಆನ್ ಲೈನ್ ಆಗಿರುವುದು ನನಗೆ ಬಹಳ ಸಂತಸ ತಂದಿದೆ,” ಎಂದು ಅಭಿಪ್ರಾಯಪಟ್ಟರು.
30 ಆನ್ಲೈನ್ ಸೇವೆಗಳು
- ಕಲಿಕಾ ಪರವಾನಗಿಯ ಹೊಸ ಭಾಗ ಒಳಗೊಂಡಂತೆ ಕಲಿಕೆದಾರರ ಪರವಾನಗಿ ವಿತರಣೆ
- ಕಲಿಕಾದಾರರ ಪರವಾನಗಿ ಬದಲಾವಣೆ
- ಕಲಿಕಾದಾರರ ಪರವಾನಗಿಯಲ್ಲಿ ವಿಳಾಸ ಬದಲಾವಣೆ
- ಡೂಪ್ಲಿಕೇಟ್ ಕಲಿಕಾದಾರರ ಪರವಾನಗಿ
- ನಿರ್ವಾಹಕರ ಪರವಾನಗಿ ವಿತರಣೆ
- ನಿರ್ವಾಹಕರ ಪರವಾನಗಿಯಲ್ಲಿ ಹೆಸರು ಬದಲಾವಣೆ
- ನಿರ್ವಾಹಕರ ಪರವಾನಗಿಯಲ್ಲಿ ವಿಳಾಸ ಬದಲಾವಣೆ
- ಡೂಪ್ಲಿಕೇಟ್ ನಿರ್ವಾಹಕರ ಪರವಾನಗಿ ವಿತರಣೆ
- ನಿರ್ವಾಹಕರ ಪರವಾನಗಿ ನವೀಕರಣ
- ಅಂತಾರಾಷ್ಟ್ರೀಯ ಚಾಲನಾ ಪರವಾನಗಿ
- ವಾಹನ ಚಾಲನಾ ಪರವಾನಗಿ ಎಕ್ಟ್ರ್ಯಾಕ್ಟ್
- ಡೀಲರ್ ಪಾಯಿಂಟ್ ನಲ್ಲಿ ಮೋಟಾರು ವಾಹನಗಳ ನೋಂದಣಿ (ಸಾರಿಗೆಯೇತರ ವಾಹನಗಳು)
- ವಾಹನದಮಾಲೀಕತ್ವ ವರ್ಗಾವಣೆ
- ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆ
- ಡೂಪ್ಲಿಕೇಟ್ ನೋಂದಣಿ ಪ್ರಮಾಣ ಪತ್ರ ವಿತರಣೆ
- ಹೈರ್ ಪರ್ಚೇಸ್ ಒಪ್ಪಂದ/ ಹೈಪಾಥಿಕೇಷನ್ ನ ಹಿಂಬರಹ
- ತಾತ್ಕಾಲಿಕ ನೋಂದಣಿ ಪ್ರಮಾಣಪತ್ರ
- ನಿರಾಕ್ಷೇಪಣಾ ಪ್ರಮಾಣಪತ್ರ ವಿತರಣೆ. ವಾಹನಕ್ಕಾಗಿ ತೀರುವಳಿ ಪ್ರಮಾಣಪತ್ರ ವಿತರಣೆ
- ಬಿ ರಿಜಿಸ್ಟರ್ ಎಕ್ಟ್ರ್ಯಾಕ್ಟ್
- ಮೋಟಾರು ಕಾರ್ ಗೆ ಪರ್ಮಿಟ್ ವಿತರಣೆ
- ಗೂಡ್ಸ್ ವಾಹನಕ್ಕೆ ಪರ್ಮಿಟ್ ವಿತರಣೆ
- ಮೋಟಾರ್ ಕಾರ್ ಪರ್ಮಿಟ್ ನವೀಕರಣ
- ಗೂಡ್ಸ್ ವಾಹನದ ಪರ್ಮಿಟ್ ನವೀಕರಣ
- ಆಟೊರಿಕ್ಷಾಗಳು, ಕ್ಯಾಬ್ ಗಳ ಪರ್ಮಿಟ್ ನವೀಕರಣ
- ಡೂಪ್ಲಿಕೆಟ್ ಪರ್ಮಿಟ್ ವಿತರಣೆ (ಗೂಡ್ಸ್ ವಾಹನ ಹಾಗೂ ಕಾರ್)
- ಆಟೋರಿಕ್ಷಾಗೆ ಡೂಪ್ಲಿಕೇಟ್ ಪರ್ಮಿಟ್ ವಿತರಣೆ
- ಪರ್ಮಿಟ್ ಸರೆಂಡರ್
- ರಾಷ್ಟ್ರೀಯ ಪರ್ಮಿಟ್ ಗೆ ಅಧಿಕೃತ ಪ್ರಮಾಣಪತ್ರ ವಿತರಣೆ
- ಹೊಸ ಹಾಗೂ ಹೋಂ ಆಥರೈಸೇಷನ್ ನವೀಕರಣ
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: 30 services – RTO- available -online.