ಬೆಂಗಳೂರು:ಆ-8:(www.justkannada.in) ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡ, ಪ್ರಕರಣದ ರೂವಾರಿ, ಮನ್ಸೂರ್ ಅಲಿಖಾನ್ ನಿವಾಸದಿಂದ 303 ಕೆಜಿ ತೂಕದ ನಕಲಿ ಚಿನ್ನದ ಬಿಸ್ಕೆಟ್ ಗಳನ್ನು ವಶಕ್ಕೆ ಪಡೆದುಕೊಂಡಿದೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಎಸ್ ಐಟಿ ತಂಡ, ವಿಚಾರಣೆ ವೇಳೆ ಆತ ನೀಡಿದ ಮಾಹಿತಿಯನ್ನು ಆಧರಿಸಿ ಎಸ್ಐಟಿ ಅಧಿಕಾರಿಗಳು ಆತನ ರಿಚ್ಮಂಡ್ ಟೌನ್ನಲ್ಲಿರುವ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಪಾರ್ಟ್ಮೆಂಟ್ನ 6ನೇ ಮಹಡಿಯ ಸ್ವಿಮ್ಮಿಂಗ್ ಫೂಲ್ನ ತಳಭಾಗದಲ್ಲಿ ಮನ್ಸೂರ್ ಖಾನ್ ಅಡಗಿಸಿಟ್ಟಿದ್ದ 303 ಕೆ.ಜಿ. ತೂಕದ 5,880 ನಕಲಿ ಚಿನ್ನದ ಬಿಸ್ಕತ್ ಪತ್ತೆಯಾಗಿದೆ.
ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡುವವರನ್ನು ಕರೆತಂದು ನಕಲಿ ಚಿನ್ನದ ಬಿಸ್ಕತ್ ತೋರಿಸಿ ಅವುಗಳನ್ನು ಅಸಲಿ ಎಂದು ನಂಬಿಸುತ್ತಿದ್ದ. ಅಲ್ಲದೇ ಇವುಗಳನ್ನೇ ತೋರಿಸಿ ಸಾರ್ವಜನಿಕರಿಂದ ಸಾವಿರಾರು ಕೋಟಿ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದ ಎನ್ನಲಾಗಿದೆ. ನಕಲಿ ಚಿನ್ನದ ಬಿಸ್ಕತ್ ಅನ್ನು ಎಸ್ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
14 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ಮಧ್ಯಾಹ್ನ ಈ ದಾಳಿ ನಡೆಸಿದ್ದರು. ದಾಳಿ ವೇಳೆ ಅಪಾರ್ಟ್ಮೆಂಟ್ನ ಟೆರೇಸ್ನಲ್ಲಿರುವ ಸ್ವಿಮ್ಮಿಂಗ್ಪೂಲ್ನ ಪಂಪ್ ಅಳವಡಿಸುವ ಜಾಗದಲ್ಲೇ ಮರದ ಅಚ್ಚಿನಲ್ಲಿ ಈ ನಕಲಿ ಚಿನ್ನದ ಗಟ್ಟಿಗಳನ್ನು ಬಚ್ಚಿಡಲಾಗಿರುವುದು ಪತ್ತೆಯಾಗಿದೆ.
ಮನ್ಸೂರ್ ಖಾನ್ಗೆ ಸೇರಿರುವ ಮಳಿಗೆ ಮನೆ ಇತ್ಯಾದಿ ಸ್ಥಳಗಳಿಂದ ಎಸ್ಐಟಿ ಅಧಿಕಾರಿಗಳು ಈವರೆಗೆ ಚಿನ್ನಾಭರಣ, ಚಿನ್ನದ ಗಟ್ಟಿ ,ವಜ್ರ ಹಾಗೂ ಆಸ್ತಿ ದಾಖಲೆ ಸೇರಿ 300 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.