3,026 ಕೋಟಿ ರೂ. ರಾಜಧನ ಸಂಗ್ರಹ

ಬೆಂಗಳೂರು:ಜೂ-28: ರಾಜ್ಯದಲ್ಲಿ ಹಿಂದಿನ 2018-19ನೇ ಸಾಲಿನಲ್ಲಿ ನಾನಾ ಖನಿಜ ಗಣಿಗಾರಿಕೆ ಆಧರಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಬರೋಬ್ಬರಿ 3026.42 ಕೋಟಿ ರೂ. ರಾಜಧನ ಸಂಗ್ರಹಿಸಿದೆ. ಜತೆಗೆ ಇದೇ ಅವಧಿಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ನಿಧಿಯಿಂದ 506 ಕೋಟಿ ರೂ. ಸಂಗ್ರಹಿಸುವಲ್ಲಿ ಇಲಾಖೆ ಯಶಸ್ವಿಯಾಗಿದೆ.

ಈಗಾಗಲೇ ನಿಯಮಾನುಸಾರ ಗಣಿಗಾರಿಕೆ ನಡೆಸಲು ಮೇಲ್ವಿಚಾರಣೆ ಹಾಗೂ ರಾಜಧನ ಸಂಗ್ರಹಕ್ಕೆ ಇಲಾಖೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ನಿರೀಕ್ಷಿತ ಗುರಿ ಮೀರಿ ರಾಜಧನ ಸಂಗ್ರಹಿಸಿದೆ. ಚಾಲ್ತಿಯಲ್ಲಿರುವ ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿ ನಡೆಸಿದ ಡ್ರೋಣ್‌ ಸಮೀಕ್ಷೆಯಿಂದ ಗಣಿಗಾರಿಕೆಯ ವಸ್ತುನಿಷ್ಠ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಗ್ರಾನೈಟ್ ಸೇರಿ ನಿರ್ದಿಷ್ಟ- ನಿರ್ದಿಷ್ಟವಲ್ಲದ ಉಪ ಖನಿಜಗಳ ಗಣಿಗಾರಿಕೆಯಲ್ಲೂ ಡ್ರೋಣ್‌ ಸಮೀಕ್ಷೆ ನಡೆಸಲು ಇಲಾಖೆ ಚಿಂತನೆ ನಡೆಸಿದೆ.

ಗಣಿಗಾರಿಕೆ ನಿಯಮ, ಪರಿಸರ ಸಂರಕ್ಷಣಾ ಕ್ರಮಗಳ ಪಾಲನೆ ಹಾಗೂ ಗಣಿಗಾರಿಕೆ ನಡೆಸಿದ ನಿಖರ ಪ್ರಮಾಣಕ್ಕೆ ಅನುಗುಣವಾಗಿ ಸೂಕ್ತ ರಾಜಧನ ನಿಗದಿಪಡಿಸುವ ಜತೆಗೆ ಸಂಗ್ರಹಿಸುವ ಕಾರ್ಯಕ್ಕೆ ಒತ್ತು ನೀಡಿದ ಹಿನ್ನೆಲೆಯಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ 3026.42 ಕೋಟಿ ರೂ. ರಾಜಧನ ಸಂಗ್ರಹವಾಗಿದೆ. ಇದರಲ್ಲಿ ಅತಿ ಹೆಚ್ಚು ಅಂದರೆ 1,308 ಕೋಟಿ ರೂ. ರಾಜಧನ ಕಟ್ಟಡ ಕಲ್ಲು ಮತ್ತು ಇತರೆ ಖನಿಜ ಮೂಲದಿಂದ ಸಂಗ್ರಹವಾಗಿದೆ.

ಕಬ್ಬಿಣದ ಅದಿರಿನ ಮೂಲದಿಂದ 985 ಕೋಟಿ ರೂ. ಸಂಗ್ರಹಿಸಲಾಗಿದೆ. ಮರಳಿನಿಂದ 157 ಕೋಟಿ ರೂ. ರಾಜಧನ ವಸೂಲಿ ಮಾಡಲಾಗಿದೆ. 2017-18ನೇ ಸಾಲಿನಲ್ಲಿ 2746 ಕೋಟಿ ರೂ. ರಾಜಧನ ಸಂಗ್ರಹವಾಗಿತ್ತು. ಈ ವರ್ಷಕ್ಕೆ ಹೋಲಿಸಿದರೆ 2018-19ನೇ ಸಾಲಿನಲ್ಲಿ 280 ಕೋಟಿ ರೂ. ಹೆಚ್ಚುವರಿ ರಾಜಧನ ಸಂಗ್ರಹವಾಗಿದೆ. ಕಳೆದ ವರ್ಷ 5 ದಶಲಕ್ಷ ಟನ್‌ ಕಬ್ಬಿಣದ ಅದಿರು ಮಾರಾಟವಾಗಿಲ್ಲ. ಹಾಗಿದ್ದರೂ 2017-18ನೇ ಸಾಲಿನಲ್ಲಿ ಸಂಗ್ರಹವಾದ ರಾಜಧನಕ್ಕಿಂತಲೂ ಹೆಚ್ಚು ಸಂಗ್ರಹಿಸಿರುವುದು ವಿಶೇಷ. ಜತೆಗೆ 2018-19ನೇ ಸಾಲಿನಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ನಿಧಿಯಿಂದ 506 ಕೋಟಿ ರೂ. ಸಂಗ್ರಹಿಸಿದ್ದು, ಆ ಹಣ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗಲಿದೆ.

ರಾಜ್ಯದ ಅಭಿವೃದ್ಧಿ, ಕೈಗಾರಿಕೆ ಬೆಳವಣಿಗೆ ಇತರೆ ಕಾರಣಕ್ಕೆ ಲಭ್ಯವಿರುವ ಖನಿಜಗಳನ್ನು ಪರಿಸರಕ್ಕೆ ಮಾರಕವಾಗದ ರೀತಿಯಲ್ಲಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿ ಇಲಾಖೆಯು ಅದರ ಮೇಲ್ವಿಚಾರಣೆ ನಡೆಸುತ್ತಿದೆ. ಹಾಗಿದ್ದರೂ ಅಕ್ರಮ ಗಣಿಗಾರಿಕೆ, ಪರಿಸರಕ್ಕೆ ಮಾರಕವಾಗುವ ರೀತಿಯಲ್ಲಿ ಗಣಿ ಚಟುವಟಿಕೆ ಕೈಗೊಳ್ಳುವುದು ಅಲ್ಲಲ್ಲಿ ನಡೆದೇ ಇದೆ. ಇದನ್ನು ತಡೆಗಟ್ಟಲು ಆಗಾಗ್ಗೆ ಇಲಾಖೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅದಕ್ಕೆ ಇತ್ತೀಚಿನ ಹೊಸ ಸೇರ್ಪಡೆ ಡ್ರೋಣ್‌ ಸಮೀಕ್ಷೆ.

ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿ ಡ್ರೋಣ್‌ ಸಮೀಕ್ಷೆ ನಡೆಸುವ ಪ್ರಕ್ರಿಯೆ ಆರಂಭವಾಗಿ ಸಮೀಕ್ಷೆ ಪೂರ್ಣಗೊಂಡಿದೆ. ಎಲ್ಲ ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿನ ಸದ್ಯದ ಚಿತ್ರಣ ಹಾಗೂ ಗಣಿಗಾರಿಕೆ ನಡೆಸಿದ ಪ್ರಮಾಣ ಮಿತಿಯನ್ನು ನಿಖರವಾಗಿ ಗುರುತಿಸಲಾಗಿದೆ. ಆ ಮಿತಿಯನ್ನು ಆಧಾರವಾಗಿಟ್ಟುಕೊಂಡು 2019-2020ನೇ ಸಾಲಿನಲ್ಲಿ ನಡೆಸಿದ ಗಣಿಗಾರಿಕೆ ಪ್ರಮಾಣವನ್ನು ನಿಖರವಾಗಿ ಗುರುತಿಸಲು ಅನುಕೂಲವಾಗಲಿದೆ. ಇದರಿಂದ ಗಣಿಗಾರಿಕೆ ಕೈಗೊಂಡಷ್ಟು ಪ್ರಮಾಣಕ್ಕೆ ರಾಜಧನ ವಿಧಿಸಿ ಸಂಗ್ರಹಿಸಲು ನೆರವಾಗುವ ಜತೆಗೆ ನಿಯಮ ಉಲ್ಲಂಘನೆಯ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಇತರೆಡೆಯೂ ಡ್ರೋಣ್‌ ಸಮೀಕ್ಷೆ: ಚಾಲ್ತಿಯಲ್ಲಿರುವ ಕಲ್ಲು ಗಣಿಗಾರಿಕೆ ಪ್ರದೇಶಗಳಂತೆ ಗ್ರಾನೈಟ್ ಸೇರಿ ನಿರ್ದಿಷ್ಟ- ನಿರ್ದಿಷ್ಟವಲ್ಲದ ಇತರೆ ಖನಿಜಗಳ ಗಣಿಗಾರಿಕೆ ಪ್ರದೇಶಗಳನ್ನೂ ಡ್ರೋಣ್‌ ಮೂಲಕ ಸಮೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿದೆೆ. ಜತೆಗೆ‌ ಗಣಿಗಾರಿಕೆ ಸ್ಥಗಿತಗೊಂಡ ಪ್ರದೇಶ ಹಾಗೂ ಗಣಿಗಾರಿಕೆ ಚಟುವಟಿಕೆ ಮುಗಿದ ಕ್ವಾರಿ ಪ್ರದೇಶಗಳಲ್ಲೂ ಮತ್ತೆ ಗಣಿ ಚಟುವಟಿಕೆ ಆರಂಭವಾಗದಂತೆ ನಿಗಾ ವಹಿಸಲು ಡ್ರೋಣ್‌ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ.

ರಾಜಸ್ವ ಸಂಗ್ರಹಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜತೆಗೆ ಜನ ಸಾಮಾನ್ಯರಿಗೆ ನಿಗದಿತ ದರಗಳಲ್ಲಿ ಅವಶ್ಯಕವಿರುವಷ್ಟು ಖನಿಜ ಪೂರೈಕೆಗೆ ಇಲಾಖೆ ಕ್ರಮ ಕೈಗೊಂಡಿದೆ. ಚಾಲ್ತಿ ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿ ಡ್ರೋಣ್‌ ಸಮೀಕ್ಷೆ ನಡೆಸಿ ಮಾಹಿತಿ ದಾಖಲಿಸಲಾಗಿದೆ. ಮುಂದೆ ನಿರ್ದಿಷ್ಟ- ನಿರ್ದಿಷ್ಟವಲ್ಲದ ಖನಿಜ ಗಣಿಗಾರಿಕೆ ಪ್ರದೇಶದಲ್ಲೂ ಡ್ರೋಣ್‌ ಸಮೀಕ್ಷೆ ನಡೆಸಲು ಚಿಂತಿಸಲಾಗಿದೆ.
-ಎನ್‌.ಎಸ್‌. ಪ್ರಸನ್ನ ಕುಮಾರ್‌, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ
ಕೃಪೆ:ವಿಜಯವಾಣಿ

3,026 ಕೋಟಿ ರೂ. ರಾಜಧನ ಸಂಗ್ರಹ
3026-crore-to-rs-the-royal-collection